ನೆಲಮಂಗಲ: ತಾಲೂಕಿನಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಹೋಬಳಿ ಕೇಂದ್ರವಾಗಿರುವ ಸೋಂಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಾಸ್‌ಟೋಲ್ ಮತ್ತು ಸ್ಥಳೀಯ ಪಂಚಾಯ್ತಿ ಹಗ್ಗಜಗ್ಗಾಟದಿಂದ ನಾಗರಿಕರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನಕಳೆಯುವಂತಾಗಿದೆ.
ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಪ್ರಮುಖ ಪಟ್ಟಣ ಪ್ರದೇಶ ಸೋಂಪುರ. ಇದೊಂದು ಪ್ರಮುಖ ಕೈಗಾರಿಕಾ ಪ್ರದೇಶ. ವಾಹನ ದಟ್ಟಣೆ ಹೆಚ್ಚಾಗಿರುತ್ತದೆ ಎಂಬ ಕಾರಣಕ್ಕೆ ಬೃಹತ್ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಮೇಲ್ಸೆತುವೆ ಕೆಳಭಾಗದಲ್ಲಿ ತಾಂಡವವಾಡುತ್ತಿರುವ ತ್ಯಾಜ್ಯದಿಂದಾಗಿ ಸ್ಥಳೀಯ ನಾಗರಿಕರಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರೂ ಪಂಚಾಯ್ತಿ ಆಡಳಿತವನ್ನು ಶಪಿಸಿಕೊಂಡು ಸಂಚರಿಸಬೇಕಾಗಿದೆ.
ಪಂಚಾಯ್ತಿ ವ್ಯಾಪ್ತಿ ಹಾಗೂ ಹೆದ್ದಾರಿ ಸುತ್ತಮುತ್ತಲಿನಲ್ಲಿರುವ ಹೊಟೇಲ್ ಬಾರ್ ಮತ್ತು ಡಾಬಾಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹೊತ್ತಲ್ಲದ ಹೊತ್ತಲ್ಲಿ ಮೇಲ್ಸೆತುವೆಗಳ ಕೆಳಭಾಗದಲ್ಲಿ ಸುರಿದು ಹೋಗಲಾಗುತ್ತಿದೆ. ಇದರಿಂದಾಗಿ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತ್ಯಾಜ್ಯ ಸಂಗ್ರಹವಾಗಿದೆ.
ಪಿಡಿಒ ದಿನೇಶ್ ಪ್ರತಿಕ್ರಿಯಿಸಿ,ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿದ್ದು ಹೆದ್ದಾರಿ ಫ್ಲೈಓವರ್ ಕೆಳಭಾಗದಲ್ಲಿ ಸ್ವತ್ಛವಾಗಿಡಬೇಕಾದ ಹೊಣೆಗಾರಿಕೆ ಹೆದ್ದಾರಿ ಪ್ರಾಧಿಕಾರ ಅಥವಾ ಜಾಸ್‌ಟೋಲ್‌ಗೆ ಸಂಬಂಧಿಸಿದೆ. ಮೇಲ್ಸೇತುವೆ ಕೆಳಭಾಗದ ತ್ಯಾಜ್ಯ ವಿಲೇವಾರಿ ಪಂಚಾಯ್ತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಯೋಜನಾ ನಿರ್ದೇಶಕ ಸೋಮಶೇಖರ್, ಸ್ಥಳೀಯ ಪಂಚಾಯ್ತಿ ಕೇವಲ ತೆರಿಗೆ ವಸೂಲಾತಿ ಮಾಡದೆ ತ್ಯಾಜ್ಯ ಸಂಗ್ರಹಣೆಗೆ ಘಟಕ ನಿರ್ಮಿಸಿ ಸೂಕ್ತ ನಿರ್ದೇಶನ ನೀಡಬೇಕು. ಶೀಘ್ರದಲ್ಲಿಯೇ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.