ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ, ಸಂಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಬರವಣಿಗೆ ಮತ್ತು ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ (71) ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯವು ಅವರಿಗೆ 3 ತಿಂಗಳ ಸಜೆ ಹಾಗೂ 4.5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿ ಮಂಗಳೂರು ಕಾರಾಗೃಹಕ್ಕೆ ಕಳುಹಿಸಿತು.
ಸೋಮನಾಥ ಮಧ್ಯಾಹ್ನ ವಕೀಲರೊಂದಿಗೆ ಬೆಳ್ತಂಗಡಿಯ ನ್ಯಾಯಾಧೀಶ ವಿಜಯೇಂದ್ರ ಅವರ ಮುಂದೆ ಹಾಜರಾದರು. ಶರಣಾಗತಿ ವೇಳೆ 70ಕ್ಕೂ ಅಧಿಕ ಬೆಂಬಲಿಗರು ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರ, ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ, ರಂಜನ್ ರಾವ್ ಯರ್ಡೂರು, ಡಿಎಸ್‌ಎಸ್ ಮುಖಂಡರು, ಕೆಲವು ಸಂಘಟನೆಗಳ ಕಾರ್ಯಕರ್ತರು ಜತೆಯಲ್ಲಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಅಥವಾ ಸಂಸ್ಥೆಯ ಕುರಿತು ಹಾಗೂ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಗೌರವಕ್ಕೆ ಚ್ಯುತಿ ತರುವಂತ ಯಾವುದೇ ರೀತಿಯಲ್ಲಿ ಬರವಣಿಗೆ ಅಥವಾ ಹೇಳಿಕೆ ನೀಡಬಾರದೆಂದು ಬೆಳ್ತಂಗಡಿ ಸಿವಿಲ್ ನ್ಯಾಯಾಲಯವು ಸೋಮನಾಥ ನಾಯಕ್ ಮತ್ತು ಇತರ 5 ಮಂದಿಯ ವಿರುದ್ಧ ಪ್ರತಿಬಂಧಕಾಜ್ಞೆ ನೀಡಿತ್ತು. ಆದರೂ ನಾಯಕ್ ಸುಳ್ಳು ಆರೋಪಗಳನ್ನು ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮುಖೇನ ಮಾಡುತ್ತಲೇ ಇದ್ದರು. ಈ ವಿಚಾರವನ್ನು ಕ್ಷೇತ್ರದ ಪರವಾಗಿ ನ್ಯಾಯಾಲಯದ ಮುಂದಿರಿಸಿದಾಗ ಸುದೀರ್ಘ ವಿಚಾರಣೆ ನಡೆದು ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿದ ನ್ಯಾಯಾಲಯ ಅವರಿಗೆ 3 ತಿಂಗಳ ಸಜೆಯಲ್ಲದೆ, ಕ್ಷೇತ್ರಕ್ಕೆ 4.5 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಆದೇಶಿಸಿತ್ತು.
ಈ ಆದೇಶದ ವಿರುದ್ಧ ನಾಯಕ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದ್ದರು. ಅಪೀಲಿನಲ್ಲಿ ನಿಜಾಂಶವಿಲ್ಲವೆಂದು ತೀರ್ಪಿತ್ತು ತನಿಖಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಸೋಮನಾಥ ಪಾವತಿಸಬೇಕಿರುವ 4.5 ಲಕ್ಷ ರೂ.ಗಳನ್ನು 90 ದಿನದ ಒಳಗಾಗಿ ಪಾವತಿಸುವುದಾಗಿ ಅವರ ಪರ ವಕೀಲರು ಮಾಡಿದ ಮನವಿಗೆ ನ್ಯಾಯಾಧೀಶರು ಸಮ್ಮತಿ ಸೂಚಿಸಿದರು. ಬಳಿಕ ಕೋರ್ಟ್‌ನ ಅಮೀನರ ಮೂಲಕ ಮಂಗಳೂರು ಕಾರಾಗೃಹಕ್ಕೆ ತೆರಳಿದರು.