ಹೊಸದಿಲ್ಲಿ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇದರ 2018ರ ಪ್ರತಿಭಾವಂತ ಹಳೆ ವಿದ್ಯಾರ್ಥಿ ಪ್ರಶಸ್ತಿ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದು ಹಾಕಿರುವ ಬಗ್ಗೆ ಕಿಡಿ ಕಾರಿರುವ ಆಮ್ ಆದ್ಮಿ ಪಕ್ಷದ ವಿವಾದಾತ್ಮಕ ನಾಯಕ ಸೋಮನಾಥ್ ಭಾರ್ತಿ ಅವರು ‘ದೇಶದ ಪ್ರತಿಷ್ಠಿತ ವಿದ್ಯಾಲಯವು ಆಳುವ ಬಿಜೆಪಿಯ ಒತ್ತಡಕ್ಕೆ ಗುರಿಯಾಗಿರುವ ಕಾರಣ ತನಗೆ ಪ್ರಶಸ್ತಿ ತಪ್ಪುವಂತಾಗಿದೆ’ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಈ ಪ್ರಶಸ್ತಿಗೆ ಪಾತ್ರರಾಗಿರುವ ಖ್ಯಾತ ಲೇಖಕ ಚೇತನ್ ಭಗತ್ ಅವರನ್ನು ಭಾರ್ತಿ ವ್ಯಂಗ್ಯದಿಂದ ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ. ಹಾಗಾಗಿ ಟ್ವಿಟರ್‌ನಲ್ಲೀಗ ಉಭಯತರ ನಡುವೆ ವಾಕ್ಸಮರ ನಡೆಯುತ್ತಿದೆ.
“ನಾನೊಬ್ಬ ರಾಜಕಾರಣಿ ಎಂಬ ಕಾರಣಕ್ಕೆ ನನ್ನ ಹೆಸರನ್ನು ಪಟ್ಟಿಯಿಂದ ಹೊರಗಿಡಲಾಗಿದೆಯಾದರೆ ಇದೇ ಕಾರಣಕ್ಕೆ ಕೇಂದ್ರ ಸಹಾಯಕ ಸಚಿವ ಜಯಂತ್ ಸಿನ್ಹಾ ಅವರನ್ನು ಕೂಡ ಪಟ್ಟಿಯಿಂದ ಹೊರಗಿಡಬೇಕಾಗಿತ್ತು; ಆದರೆ ಹಾಗೆ ಮಾಡಲಾಗಿಲ್ಲ’ ಎಂದು ಸೋಮನಾಥ್ ಭಾರ್ತಿ ತಮ್ಮ ಆಕ್ರೋಶವನ್ನು ಹೊರಗೆಡಹಿದ್ದಾರೆ.
ಭಾರ್ತಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಚೇತನ್ ಭಗತ್, “ಪ್ರಶಸ್ತಿಗೆ ನೀವೂ ಅರ್ಹರೆಂದು ನನಗೆ ಚೆನ್ನಾಗಿ ಗೊತ್ತಿದೆ; ಆದರೆ ನೀವು ಐಐಟಿ ಮತ್ತು ಪ್ರಶಸ್ತಿ ವಿಜೇತರ ಹೆಸರನ್ನು ಹಾಳು ಮಾಡುತ್ತಿದ್ದೀರಿ. ಐಐಟಿ ಆಯ್ಕೆ ನ್ಯಾಯೋಚಿತವಾಗಿಯೇ ಇದೆ; ಒಂದು ವಿದ್ಯಾಲಯದ ಆಂತರಿಕ ಪ್ರಶಸ್ತಿಯಲ್ಲಿ ಆಳುವ ಬಿಜೆಪಿಗೆ ಯಾವುದೇ ಮಹತ್ವ ಇರುವುದಿಲ್ಲ’ ಎಂದು ಮರು ಟ್ವೀಟ್ ಮಾಡಿದ್ದಾರೆ.
ಅಂದ ಹಾಗೆ ಚೇತನ್ ಭಗತ್ ಅವರ ಮುಂದಿನ ಪುಸ್ತಕ “ದಿ ಗರ್ಲ್ ಇನ್ ರೂಮ್ 105 – ಆ್ಯನ್ ಅನ್ ಲವ್ ಸ್ಟೋರಿ’ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳ್ಳಲಿದೆ.