ಬೆಂಗಳೂರು: ಒಂದೇ ದಿನ ಮತ್ತು ಒಂದೇ ಮಾರ್ಗದಲ್ಲಿ ಎರಡು ಬಾರಿ “ನಮ್ಮ ಮೆಟ್ರೋ’ ಸಂಚಾರ ಸೇವೆ ಕೆಲಹೊತ್ತು ಸ್ಥಗಿತಗೊಂಡಿತು. ಪರಿಣಾಮ ಪ್ರಯಾಣಿಕರು ಅಕ್ಷರಶಃ ಪರದಾಡಿದರು. ಹೆಚ್ಚುವರಿ ಸೇವೆಗಳನ್ನು ಪರಿಚಯಿಸಿದ ದಿನವೇ ಈ ಯಡವಟ್ಟಾಗಿದ್ದು, ಇದಕ್ಕೆ ಬಿಎಂಆರ್‌ಸಿ ಕೂಡ ತಬ್ಬಿಬ್ಟಾಯಿತು.
ಮಂಗಳವಾರ ಬೆಳಿಗ್ಗೆ 10.02ರಿಂದ 10.28ರವರೆಗೆ ಹಾಗೂ ಸಂಜೆ 6.15ರ ಸುಮಾರಿಗೆ ತಾಂತ್ರಿಕ ಕಾರಣಗಳಿಂದ ನೇರಳೆ ಮಾರ್ಗ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ)ದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಪ್ರಯಾಣಿಕರು ಆತಂಕಗೊಂಡರು.
ಬೆಳಿಗ್ಗೆ ಈ ವ್ಯತ್ಯಯದ ಬಿಸಿ ಪ್ರಯಾಣಿಕರಿಗೆ ತುಸು ಜೋರಾಗಿಯೇ ತಟ್ಟಿತು.
ಪೀಕ್ ಅವರ್‌ನಲ್ಲಿ ತುಂಬಿತುಳುಕುತ್ತಿದ್ದ 20ಕ್ಕೂ ಹೆಚ್ಚು ರೈಲುಗಳು ಮಾರ್ಗ ಮಧ್ಯೆಯೇ ಅಲ್ಲಲ್ಲೇ ನಿಂತಿದ್ದವು. ಸುರಂಗದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕೂಡ ಇರಲಿಲ್ಲ. ಇದರಿಂದ ಮತ್ತಷ್ಟು ಭೀತಿಗೊಂಡರು. ಅದರಲ್ಲೂ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಸಾವಿರಕ್ಕೂ ಅಧಿಕ ಜನ ಕಾದುನಿಂತರು. ಇಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ರೈಲು ಸ್ಥಗಿತವಾದದ್ದಕ್ಕೆ ಸೂಕ್ತ ಕಾರಣ ನೀಡುವಂತೆ ಪ್ರಯಾಣಿಕರು ಪಟ್ಟಹಿಡಿದಿದ್ದರು. ಇದಕ್ಕೆ ಬಿಎಂಆರ್‌ಸಿಎಲ್ ಸೂಕ್ತ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತಷ್ಟು ಸಿಟ್ಟಿಗೆದ್ದರು. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ಸಿಬ್ಬಂದಿ ಹಾಗೂ ಪ್ರಯಾಣಿಕರೊಂದಿಗೆ ವಾಗ್ವಾದಕ್ಕೆ ಕಾರಣವಾಯಿತು. ಈ ರೀತಿ ಮಾತಿನ ಚಕಮಕಿ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಸೂಚನೆ ನೀಡದೆ ಏಕಾಏಕಿ ರೈಲು ಚಲಿಸಲಾರಂಭಿಸಿದೆ. ಇದರಿಂದ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.
ಈ ಮಧ್ಯೆ ಸಂಜೆ 6.15ರ ಸುಮಾರಿಗೆ ಸಮಸ್ಯೆ ಮರುಕಳಿಸಿತು. ಇದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸಿಬ್ಬಂದಿ, ಮತ್ತೆ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾದರು. ವಿದ್ಯುತ್ ಸಂಪರ್ಕದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ತಕ್ಷಣ ಎಚ್ಚೆತ್ತುಕೊಂಡಿದ್ದ ಬಿಎಂಆರ್‌ಸಿಎಲ್ ತಾಂತ್ರಿಕ ಸಿಬ್ಬಂದಿ ತಕ್ಷಣಕ್ಕೆ ಎಲ್ಲವನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬಹುತೇಕ ಎಲ್ಲ ರೈಲುಗಳು ಆಯಾ ನಿಲ್ದಾಣಗಳ ಬಳಿಯೇ ಇದ್ದುದರಿಂದ ಅಷ್ಟಾಗಿ ತೊಂದರೆ ಆಗಲಿಲ್ಲ.
ತಾಂತ್ರಿಕ ಸಮಸ್ಯೆ: “ನಮ್ಮ ಮೆಟ್ರೋ’ದಲ್ಲಿ ಥರ್ಡ್ ರೈಲಿನ ನೆರವಿನಿಂದ ಎರಡೂ ತುದಿಗಳಿಂದ ಹಳಿಗೆ ವಿದ್ಯುತ್ ಪೂರೈಕೆ ಆಗುತ್ತದೆ. ಒಂದು ಕಡೆ ಸ್ಥಗಿತಗೊಂಡರೂ ಮತ್ತೂಂದು ಕಡೆಯಿಂದ ವಿದ್ಯುತ್ ಸರಬರಾಜು ಆಗುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ತುಸು ವಿಳಂಬವಾಗಿದ್ದರಿಂದ ಈ ವ್ಯತ್ಯಯ ಉಂಟಾಗಿದೆ. ಆದರೆ, ಹಸಿರು ಮಾರ್ಗದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಬಿಎಂಆರ್‌ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ರಾತ್ರಿ ಮೆಟ್ರೋಗೆ ಸಂಬಂಧಿಸಿದ ಮತ್ತೂಂದು ವದಂತಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿ, ಆತಂಕ ಮೂಡಿಸಿತು. ಮೈಸೂರು ರಸ್ತೆ ನಿಲ್ದಾಣದ ಬಳಿ ಆ್ಯಂಗ್ಲರ್ ಕಳಚಿದೆ ಎಂದು ಸುದ್ದಿ ಹಬ್ಬಿತು. ಆದರೆ, ಇದು ಕೇವಲ ವದಂತಿ ಎಂದು ನಂತರ ಅಧಿಕಾರಿಗಳು ದೃಢಪಡಿಸಿದರು.
ವಿದ್ಯುತ್ ವ್ಯತ್ಯಯ ಕಂಡುಬಂದ ಪರಿಣಾಮ ಕೆಲಕಾಲ ಮೆಟ್ರೋ ರೈಲು ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಸಾಮಾನ್ಯದಂತೆ ಕಾರ್ಯನಿರ್ವಹಿಸಿದ್ದು, ಎಲ್ಲಾ ದ್ವಾರಗಳು ತೆರೆದಿದ್ದವು. ಈ ಸಂದರ್ಭದಲ್ಲಿ ಪ್ರಯಾಣಿಕರಲ್ಲಿ ಯಾವುದೇ ಗೊಂದಲ ಕಂಡುಬಂದಿಲ್ಲ.
-ಯು.ಎ. ವಸಂತರಾವ್, ಮುಖ್ಯ ಸಾರ್ವಜನಿಕರ ಸಂಪರ್ಕಾಧಿಕಾರಿ, ಬಿಎಂಆರ್‌ಸಿ.