ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಈ ಬಾರಿ ದೊಡ್ಡ ಮುನ್ನಡೆ ಸಾಧಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೇಂದ್ರದಲ್ಲಿ ಇಂಡಿಯಾ ಬಣವು ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಸುಳಿವು ನೀಡಿದ್ದಾರೆ. “ಕೆಲವೊಮ್ಮೆ ಸರ್ಕಾರಗಳು ಕೇವಲ ಒಂದೇ ದಿನಕ್ಕೆ ಉರುಳುತ್ತದೆ ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಒಂದು ದಿನ ಮೊದಲು ಶನಿವಾರ ತೃಣಮೂಲ ಸಂಸದೀಯ ಪಕ್ಷದ ಸಭೆಯ ನಂತರ ಮಾತನಾಡಿದ ಬ್ಯಾನರ್ಜಿ, “ಕಾನೂನು ಬಾಹಿರವಾಗಿ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ಸರ್ಕಾರ ರಚನೆಯಾಗುತ್ತಿರುವ ಕಾರಣ ತಮ್ಮ ಪಕ್ಷವು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ” ಎಂದು ಹೇಳಿದರು.
ಪಿಎಂ ಮೋದಿ ಮತ್ತು ಬಿಜೆಪಿ ಈ ಬಾರಿ ಮಿತ್ರಪಕ್ಷಗಳ – ವಿಶೇಷವಾಗಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಮೇಲೆ ಅವಲಂಬಿತವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ 240 ಲೋಕಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಬಹುಮತಕ್ಕೆ 32 ರಷ್ಟು ಕಡಿಮೆಯಾಗಿದೆ. ಆದರೆ ಎನ್ ಡಿಎ ಮೈತ್ರಿಕೂಟ ಬಹುಮತ ಸಾಧಿಸಿದೆ.
“400 ಲೋಕಸಭಾ ಸ್ಥಾನಗಳ ಬಗ್ಗೆ ಮಾತನಾಡುವವರಿಗೆ ಸ್ವಂತವಾಗಿ ಸರಳ ಬಹುಮತವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಂಡಿಯಾ ಬಣ (ಸರ್ಕಾರ ರಚನೆಗೆ) ಹಕ್ಕು ಸಾಧಿಸದ ಕಾರಣ ಏನೂ ಆಗುವುದಿಲ್ಲ ಎಂದು ಯೋಚಿಸಬೇಡಿ. ನಾವು ಕಾಯುತ್ತಿದ್ದೇವೆ. ಏಕೆಂದರೆ ಅಂತಿಮವಾಗಿ ಹೊಸ ಇಂಡಿಯಾ ಸರ್ಕಾರ ಬರಲಿದೆ, ಕೆಲವೊಮ್ಮೆ ಸರ್ಕಾರಗಳು ಕೆಲವು ದಿನಗಳವರೆಗೆ ಮಾತ್ರ ಇರುತ್ತವೆ … ಏನು ಬೇಕಾದರೂ ಆಗಬಹುದು, ಯಾರಿಗೆ ಗೊತ್ತು.., ಈ ಸರ್ಕಾರವು 15 ದಿನಗಳಲ್ಲೇ ಅಂತ್ಯವಾಗಬಹುದು” ಎಂದು ಮಮತಾ ಹೇಳಿದರು.
ಬಿಜೆಪಿಯ ಮೇಲಿನ ತನ್ನ ದಾಳಿಯನ್ನು ಮುಂದುವರಿಸುತ್ತಾ, ಮಮತಾ ಬ್ಯಾನರ್ಜಿ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಸೇರಿದಂತೆ “ವಿವೇಚನಾರಹಿತ ಶಕ್ತಿ ಬಳಸಿ ಜಾರಿಗೆ ತಂದ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದರು.