Advertisement

ಕೆಲವು ತರಕಾರಿ ತುಟ್ಟಿ; ಮಲ್ಲಿಗೆ ಹೂವು ದುಬಾರಿ

11:08 AM Oct 14, 2018 | |

ಮಹಾನಗರ: ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳು ಮತ್ತು ಮಲ್ಲಿಗೆ ಹೂವು ತುಟ್ಟಿಯಾಗಿವೆ; ಕೆಲವೊಂದು ತರಕಾರಿಗಳ ತೀವ್ರ ಅಭಾವ ಕಂಡು ಬಂದಿದೆ. ನವರಾತ್ರಿಯ 9 ದಿನಗಳಲ್ಲಿ ತರಕಾರಿಗಳನ್ನು ಜಾಸ್ತಿ ಬಳಸುತ್ತಿದ್ದು, ಮಾಂಸಾಹಾರವನ್ನು ಕಡಿಮೆ ಬಳಕೆ ಮಾಡುತ್ತಿದ್ದಾರೆ. ಮನೆಗಳಲ್ಲಿ ಮಾತ್ರವಲ್ಲ, ಕೆಲವು ದೇವಸ್ಥಾನಗಳಲ್ಲಿಯೂ ಈಗ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಹಾಗಾಗಿ ತರಕಾರಿಗೆ ಬೇಡಿಕೆ ಜಾಸ್ತಿ.

Advertisement

ಕೆಲವು ತರಕಾರಿಗಳ ಉತ್ಪಾದನೆಯೂ ಕಡಿಮೆ ಆಗಿರುವುದು ಹಾಗೂ ದಸರಾ ಪ್ರಯುಕ್ತ ಬಯಲು ಸೀಮೆಯ ತರಕಾರಿಗಳಲ್ಲಿ ಅಧಿಕ ಪಾಲು ಮೈಸೂರಿಗೆ ರವಾನೆ ಆಗುತ್ತಿರುವುದರಿಂದ ನಗರದಲ್ಲಿ ಕೆಲವು ತರಕಾರಿಗಳ ಕೊರತೆ ಹಾಗೂ ಬೆಲೆ ಏರಿಕೆ ಆಗಲು ಕಾರಣವಾಗಿದೆ ಎಂದು ಸೆಂಟ್ರಲ್‌ ಮಾರ್ಕೆಟ್‌ ಮೂಲಗಳು ತಿಳಿಸಿವೆ.

200ರ ಗಡಿ ದಾಟಿದ ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ದಾಟಿದೆ. ನುಗ್ಗೆ ಬೆಲೆ 100 ರೂ. ಗಳಿಗೆ ತಲುಪಿದೆ. ಸ್ಥಳೀಯ ಬೆಂಡೆ 140 ರೂ., ತೊಂಡೆ 100 ರೂ., ಮುಳ್ಳು ಸೌತೆ 100 ರೂ. ಬೀನ್ಸ್‌ 60 ರೂ., ಹಾಗಲ ಕಾಯಿ 60 ರೂ., ಕಾಲಿಫ್ಲವರ್‌ 60 ರೂ., ಅಸಲಂಡೆ 90 ರೂ., ಹರಿವೆ ದಂಟು 50 ರೂ. ಗಳಿಗೆ ತಲುಪಿದೆ.

ದುಬಾರಿ ತರಕಾರಿಗಳನ್ನು ಖರೀದಿ ಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಮನೆಗಳಲ್ಲಿ ನವರಾತ್ರಿ ಆಚರಿಸುವವರು ಮುಖ್ಯವಾಗಿ ಹೊಸ ತೆನೆ ಹಬ್ಬ ಆಚರಣೆ ಮಾಡುವವರು ಮಾತ್ರ ತುರ್ತು ಆವಶ್ಯಕತೆಯ ಹಿನ್ನೆಲೆಯಲ್ಲಿ ಖರೀದಿ ಮಾಡುತ್ತಾರೆ ಎನ್ನುತ್ತಾರೆ ಸೆಂಟ್ರಲ್‌ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್‌ ಡಿ’ ಸೋಜಾ. ಗುಲಾಬಿ, ಅನಂತವೃಷ್ಟಿ, ಅರಳಿ ಮಾಲೆ, ಸೇವಂತಿಗೆ, ಕನಕಾಂಬರ (ಅಬ್ಬಲಿಗೆ), ಝೀನಿಯಾ, ತಾವರೆ, ಸಂಪಿಗೆ ಇತ್ಯಾದಿ ಹೂವುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. 

ಮಲ್ಲಿಗೆ ದುಬಾರಿ
ನವರಾತ್ರಿ ಸಂದರ್ಭದಲ್ಲಿ ಶಾರದಾ ದೇವಿಯನ್ನು ಮಲ್ಲಿಗೆ ಅಥವಾ ಜಾಜಿ ಹೂವಿನಿಂದ ಅಲಂಕರಿಸಲಾಗುತ್ತಿದೆ. ಹಾಗಾಗಿ ಮಲ್ಲಿಗೆ ಹೂವು ದುಬಾರಿಯಾಗಿದೆ. ಮಲ್ಲಿಗೆ ಹೂವು ಒಂದು ಅಟ್ಟಿಗೆ 1,200 ರೂ. ಗಳಷ್ಟಿದೆ. ಆದರೆ ಕೊರತೆ ಇಲ್ಲ ಎಂದು ಕಾರ್‌ಸ್ಟ್ರೀಟ್‌ನ ಹೂವು ಮಾರುಕಟ್ಟೆಯ ವ್ಯಾಪಾರಿ ಸುರೇಶ್‌ ಪೈ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next