Advertisement

ಕೆಲವೊಂದು ಸನ್ನಿವೇಶಗಳು ಆಯಾಸವಾದರೂ ಸಂತಸವ ಹೊತ್ತು ತರುತ್ತವೆ…

03:53 PM Mar 12, 2021 | Team Udayavani |

ಜೀವನದಲ್ಲಿ ಹಲವಾರು ಘಟ್ಟಗಳನ್ನು ದಾಟಿ ಆಯಾಸ ಮುಕ್ತರಾಗುತ್ತೇವೆ, ಕೆಲವೊಂದು ಸನ್ನಿವೇಶಗಳು ಆಯಾಸವಾದರೂ ಸಂತಸವನ್ನು ಹೊತ್ತು ಬಂದಿರುತ್ತವೆ ಮತ್ತು ಕೆಲವೊಂದು ಸನ್ನಿವೇಶಗಳು ಆಯಾಸವಾಗುವುದಲ್ಲದೆ ಜೀವನದ ಬಗ್ಗೆ ಜುಗುಪ್ಸೆಯನ್ನೇ ಉಂಟು ಮಾಡಿಬಿಡುತ್ತವೆ.

Advertisement

ಇಂತಹ ಘಟನೆಗಳು ಜೀವನದುದ್ದಕ್ಕೂ ಎದುರಾಗುವುದಲ್ಲದೆ ಜೀವನೋಪಾಯಕ್ಕಾಗಿ ಹೊಸ ರೀತಿಯ ದಿಕ್ಕುಗಳನ್ನು ಸೃಷ್ಟಿಸಿಕೊಡುತ್ತವೆ. ಆ ಹೊಸ ರೀತಿಯ ಜೀವನೋಪಾಯದ ದಿಕ್ಕುಗಳೇ ಅನುಭವಗಳು.

ಈ ಅನುಭವ ಎಂಬ ಪದದ ಅರ್ಥ, ನನ್ನ ಪ್ರಕಾರ ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಹೀಗೆ ಒಬ್ಬ ವ್ಯಕ್ತಿ ಕಳ್ಳತನ ಮಾಡುತ್ತಿದ್ದ. ಆತ ಕಳ್ಳತನವನ್ನು ರಾತ್ರಿ ಮಾತ್ರ ಮಾಡುತ್ತಿದ್ದನು. ದಿನವೂ ಯಾವುದಾದರೊಂದು ಮನೆಗೆ ಹೋಗುವುದು ಆ ಮನೆಯಲ್ಲಿರುವ ಹಣ, ಚಿನ್ನ ಹೀಗೆ ಕೈಗೆ ಸಿಕ್ಕದ್ದನ್ನು ದೋಚಿಕೊಂಡು ಬರುತ್ತಿದ್ದನು. ಅನಂತರ ಹಗಲು ಹೊತ್ತಿನಲ್ಲಿ ಏನೂ ಗೊತ್ತಿಲ್ಲದಂತೆ ಓಣಿಯಲ್ಲಿ ತಿರುಗಾಡುತ್ತಿದ್ದನು.

ಆತ ಕಳ್ಳತನ ಮಾಡಿದ ಮನೆಯವರು ನಡುಬೀದಿಗೆ ಬಂದು ಅಳುವುದು, ಕಿರಿಚಾಡುವುದನ್ನು ನೋಡಿದರೂ ಮರುಗದೆ, ತಾನು ಕಳ್ಳತನ ಮಾಡಿದ ವಸ್ತುಗಳನ್ನು ನೆನೆದು ಮತ್ತು ಆತ ಕಳ್ಳ ಎಂದು ಯಾರೂ ಗುರುತಿಸದುದ್ದನ್ನು ಕಂಡು ಒಳಗೊಳಗೆ ಸಂತಸಪಡುತ್ತಿದ್ದನು.

ಆತ ಕಳ್ಳತನ ಮಾಡಿದ ಹಣ, ಚಿನ್ನವನ್ನೆಲ್ಲ ಮನೆಯಲ್ಲಿ ಬಿಗಿ ಭದ್ರತೆಯೊಂದಿಗೆ ಜೋಪಾನವಾಗಿ ಇಟ್ಟಿದ್ದನು. ಹೀಗೆ ದಿನವೂ ರಾತ್ರಿ ಒಂದೊಂದು ಮನೆಗೆ ಹೋಗುವುದು, ಕಳ್ಳತನ ಮಾಡುವುದು, ಬೆಳಗ್ಗೆ ಆ ಮನೆಯವರ ರೋದನವನ್ನು ಕೇಳುತ್ತ ಒಳಗೊಳಗೆ ಸಂತಸಪಡುವುದು. ಇದೆ ಆತನ ದಿನಚರಿಯಾಗಿತ್ತು. ಇದೇ ರೀತಿ ಹಲವು ತಿಂಗಳುಗಳು ಕಳೆದವು. ಹೀಗೆ ಮತ್ತೆ ರಾತ್ರಿ ಕಳ್ಳತನ ಮಾಡಲು ಮನೆಯನ್ನು ಹುಡುಕುತ್ತ ಹೋದನು. ಆತ ಕಳ್ಳತನ ಮಾಡಿಕೊಂಡು ಬರುವಷ್ಟರಲ್ಲಿ ಆತನಿಗೆ ಒಂದು ದೊಡ್ಡ ದುರಂತವೇ ಕಾದಿತ್ತು.

Advertisement

ಅದೇನೆಂದರೇ ಆತ ಕಳ್ಳತನ ಮಾಡಲು ಹೋದಾಗ ಆತನ ಮನೆಯನ್ನೇ ಮತ್ತೂಬ್ಬ ಕಳ್ಳ ದೋಚಿಬಿಟ್ಟಿದ್ದನು. ಇದನ್ನು ನೋಡಿದ ಕಳ್ಳನಿಗೆ ಒಮ್ಮೆಲೆ ಆಘಾತವಾಯಿತು. ತಾನು ಇಷ್ಟು ದಿನ ಮಾಡಿದ ಕಳ್ಳತನ ವ್ಯರ್ಥವಾಯಿತೆಂದು ತುಂಬಾ ಸಂಕಟಪಟ್ಟ. ಈ ಘಟನೆ ಆತನ ಮೇಲೆ ಬಲವಾದ ಪರಿಣಾಮ ಬೀರಿತು. ಆತನ ಮನೆ ಕಳವಾದಾಗ ಆತ ಕಳ್ಳತನ ಮಾಡಿದವರ ಮನೆಯ ರೋದನ ಅರ್ಥವಾಗತೊಡಗಿತು ಮತ್ತು ಆತ ಎಂತಹ ತಪ್ಪನ್ನು ಮಾಡುತ್ತಿದ್ದ ಎಂಬ ಅರಿವಾಯಿತು. ಅಲ್ಲದೆ ತನ್ನ ವಸ್ತುಗಳು ಕಳವಾದಾಗ ಎಂತಹ ನೋವು ಉಂಟಾಗುತ್ತದೆ ಎಂಬ ಅನುಭವವಾಯಿತು. ಅಂದಿನಿಂದ ಆತ ಕಳ್ಳತನ ಮಾಡುವುದನ್ನೇ ಬಿಟ್ಟುಬಿಟ್ಟ ಮತ್ತು ಉತ್ತಮ ನಾಗರಿಕನಾಗಿ ಬದುಕನ್ನು ಆರಂಭಿಸಿದ.

ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದದ್ದು ಏನೆಂದರೆ ಯಾವುದೇ ವ್ಯಕ್ತಿಗೆ ನಾವಾಡುವ ಮಾತುಗಳಾಗಲಿ, ನಾವು ನೀಡುವ ಶಿಕ್ಷೆಯಾಗಲಿ ಪಾಠವನ್ನು ಹೇಳುವುದಿಲ್ಲ. ಸ್ವತಃ ತಾವೇ ಆ ಪರಿಸ್ಥಿತಿಯನ್ನು ಅನುಭವಿಸಿದರೆ ಆ ವ್ಯಕ್ತಿಗೆ ಯಾರ ಮಾರ್ಗದರ್ಶನದ ಅವಶ್ಯವೇ ಇರುವುದಿಲ್ಲ. ಆದ್ದರಿಂದ ನಾವು ಕೂಡ ನಮ್ಮ ಜೀವನದ ಪರಿಸ್ಥಿತಿಗಳನ್ನು ಅನುಭವಿಸುವ ಮೊದಲೇ ಅರಿತುಕೊಳ್ಳಬೇಕು. ನಮ್ಮ ಪರಿಸ್ಥಿತಿಗೆ ತಕ್ಕಂತೆ ಜವಾಬ್ದಾರಿಗಳನ್ನು ಹೊರಬೇಕು.

ನಮ್ಮ ಪರಿಸ್ಥಿತಿಗಳನ್ನು ಅರಿಯದೆ ಹೋದರೆ ಮುಂದಿನ ದುರಂತವನ್ನು ನಾವೇ ಅನುಭವಿಸಬೇಕಾಗುತ್ತದೆ. ಅದು ಒಳ್ಳೆಯ ಅನುಭವವಾದರೆ ಸರಿ, ಕೆಟ್ಟ ಅನುಭವವಾದರೆ ಜೀವನ ಮತ್ತಷ್ಟು ಕೆಡುವುದರಲ್ಲಿ ಸಂದೇಹವಿಲ್ಲ.


ಫಕ್ಕೀರೇಶ, ಜಾಡರ, ಜಿಎಫ್ ಜಿ ಕಾಲೇಜು, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.