Advertisement

ಕೆಲ ಜನಪ್ರತಿನಿಧಿಗಳಿಂದ ಮೀಸಲು ಹೋರಾಟ ತಪ್ಪಾಗಿ ಅರ್ಥೈಕೆ

08:18 PM Mar 27, 2021 | Team Udayavani |

ಚಿತ್ರದುರ್ಗ: ಪಂಚಮಸಾಲಿ ಸಮುದಾಯದ ಮೀಸಲು ಹೋರಾಟವನ್ನು ಕೆಲ ಜನಪ್ರತಿನಿಧಿಗಳು ತಪ್ಪಾಗಿ ಅರ್ಥೈಸಿಕೊಂಡು ವಿರೋಧಿಸಿದ್ದಾರೆ. ಸಣ್ಣ ಸಣ್ಣ ಸಮುದಾಯಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಃರಂಗದಲ್ಲಿ ನೋಡಿದರೆ ಸಣ್ಣಪುಟ್ಟ ಸಮಾಜಗಳು ನಮ್ಮ ಹೋರಾಟ ಬೆಂಬಲಿಸಿದ್ದಾರೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗುತ್ತಿದ್ದೇವೆ. ಚುನಾವಣಾ ರಾಜಕಾರಣಕ್ಕೂ ಮೀಸಲಾತಿ ಹೋರಾಟಕ್ಕೂ ಸಂಬಂಧವಿಲ್ಲ. ಮೀಸಲಾತಿಯನ್ನು ಚುನಾವಣಾ ರಾಜಕಾರಣಕ್ಕೆ ಒಳಪಡಿಸುವ ಕೆಲಸವನ್ನು ಸಮಾಜ ಎಂದಿಗೂ ಮಾಡುವುದಿಲ್ಲ. ಈಗ ಉಪಚುನಾವಣೆ ಇರುವುದರಿಂದ ಬಹಳಷ್ಟು ಜನ ಈ ಬಗ್ಗೆ ಕೇಳುತ್ತಿದ್ದಾರೆ. ಆದರೆ ಯಾವ ಕಾರಣಕ್ಕೂ ಚುನಾವಣಾ ರಾಜಕಾರಣ ಮತ್ತು ಮೀಸಲಾತಿ ಹೋರಾಟಕ್ಕೆ ಸಂಬಂಧ ಕಲ್ಪಿಸುವ ಪ್ರಯತ್ನ ಮಾಡುವುದಿಲ್ಲ.

ಚುನಾವಣೆ ಅವರವರ ಆಲೋಚನೆಗೆ ಬಿಟ್ಟದ್ದು ಎಂದರು. ಕೆಲವರು ಬಹಿರಂಗವಾಗಿ ಪಂಚಮಸಾಲಿ ಪ್ರಬಲ ಸಮುದಾಯ ಆಗಿದ್ದು 2ಎಗೆ ಸೇರಿಸಬೇಡಿ ಎಂದು ಹೇಳುತ್ತಿದ್ದಾರೆ. ನಾವು ಜನಸಂಖ್ಯೆಯಲ್ಲಿ ಪ್ರಬಲರಿದ್ದೇವೆ, ಆದರೆ ಸಾಮಾಜಿಕ ಸ್ಥಿತಿಗತಿ ಹಾಗೂ ಅನ್ಯಾಯಕ್ಕೆ ಒಳಪಟ್ಟು ನಾವು ಬಹಳ ಹಿಂದುಳಿದಿದ್ದೇವೆ. ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿಯೂ ಹಿಂದುಳಿದಿದ್ದೇವೆ.

ಈ ಎರಡು ವಿಚಾರಗಳ ಆಧಾರದ ಮೇಲೆ ನಾವು ಮೀಸಲಾತಿ ಕೇಳುತ್ತಿದ್ದೇವೆ. ಹೋರಾಟದ ಮೂಲಕ ನಾವು ಸರ್ಕಾರವನ್ನು ಮುಟ್ಟಿದ್ದೇವೆ. ಕಾಲಮಿತಿಯೊಳಗೆ ಮೀಸಲಾತಿ ಕೊಡುವ ಭರವಸೆ ನೀಡಿದೆ. ಸೆ.15ರವರೆಗೆ ಗಡುವು ನೀಡಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ಅ.15ರಿಂದ ಮತ್ತೆ ಹೋರಾಟ ಮುಂದುವರಿಸಲಾಗುತ್ತದೆ. ಸರ್ಕಾರ ಮೀಸಲಾತಿ ಕೊಡುವ ಭರವಸೆ ನೀಡಿರುವುದು ನಮ್ಮ ಹೋರಾಟದ ಪ್ರಥಮ ಜಯ. ಸಮಾಜದ ಒಗ್ಗಟ್ಟಿನ ಪರಿಣಾಮ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಹೋರಾಟದ ಮುಂದುವರಿದ ಭಾಗ ಎಂದರು. ಎಸ್‌.ಎಂ. ತಿಪ್ಪೇಸ್ವಾಮಿ, ಮಹಡಿ ಶಿವಮೂರ್ತಿ, ಮುಖಂಡರಾದ ಜಿತೇಂದ್ರ ಎನ್‌. ಹುಲಿಕುಂಟೆ, ಮಂಜುನಾಥ್‌, ಪರಮೇಶ್‌, ಯೋಗೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next