ಹಚ್ಚಹಸುರನ್ನು ನೋಡುತ್ತ, ಚಿಗುರೆಲೆಯ ಮೆಲ್ಲನೆ ಮುಟ್ಟುವುದು ಮನಕ್ಕೆ ಎಷ್ಟೊಂದು ಮುದ ಅನಿಸುತ್ತದೆ.
ಬರೀ ಹಸುರನ್ನು ನೋಡಿ ಖುಷಿಪಡುವ ನಾವು ಅದನ್ನು ನಮ್ಮ ಬಯಲಲ್ಲಿ ನೆಟ್ಟು ಪೋಷಿಸಿ, ಸದಾ ಹಸುರು ಕಂಗೊಳಿಸುವಂತೆ ಮಾಡಲು ಮುಂದಾಗುವುದಿಲ್ಲ.
ಮರವನ್ನು ಮಕ್ಕಳಂತೆ ಪೋಷಿಸಿದ ತಿಮ್ಮಕ್ಕನ ಹಾಡಿ ಹೊಗಳಿ ಹಲವಾರು ಪ್ರಶಸ್ತಿಗಳನ್ನು ಕೊಟ್ಟು ಸಮ್ಮಾನಿಸುವ ನಾವು ಅದೇ ಸನ್ಮಾರ್ಗದ ಹಾದಿ ಹಿಡಿಯುವುದಿಲ್ಲ.
ಅದು ಕೂಡ ನಮಗೆ ಉಸಿರಾಡಲು ಗಾಳಿ ಎಷ್ಟು ಆವಶ್ಯಕ ಎಂದು ತಿಳಿದಿದ್ದರೂ ಯಾಕಿಷ್ಟು ನಿರ್ಲಕ್ಷ? ಮನುಷ್ಯನ ಹಣದಾಯಿ ನೀತಿಯೇ ಇದಕ್ಕೆಲ್ಲ ಕಾರಣ.
ಏತನ್ಮಧ್ಯೆ ಪರಿಸರ ಸಂರಕ್ಷಣೆಯ ಬಗ್ಗೆ ಆತ ಯೋಚಿಸುತ್ತಾನೆಯೇ? ಇತ್ತೀಚೆಗೆ ಸ್ಫೋಟಕ ವಸ್ತುಗಳಿಂದ ಗರ್ಭಿಣಿ ಆನೆಯನ್ನು ಹಿಂಸಿಸಿದವರು ಇನ್ನೇನು ಗಿಡ-ಮರಗಳನ್ನು ಪಾಲನೆ ಮಾಡುತ್ತಾರೆಯೇ? ಈ ಮಧ್ಯೆ ಮಾನವ ವಿಕೃತ ರೂಪ ತಾಳಿದ್ದಾನೆ. ಎಲ್ಲ ತಪ್ಪಿಗೆ ಶಿಕ್ಷೆ ಎಂಬಂತೆ ಕೊರೊನಾ ಜನರನ್ನು ಭಯದ ಕೂಪಕ್ಕೆ ತಳ್ಳಿ ಬಿಟ್ಟಿದೆ. ಹಿಂದಿನ ಔಷಧ ಸಸ್ಯಗಳು ಉಳಿಯುತ್ತಿದ್ದರೆ ಇಂತಹ ಅದೆಷ್ಟೋ ರೋಗ ರುಜಿನಗಳಿಂದ ನಾವು ಮುಕ್ತಿ ಪಡೆಯಬಹುದಿತ್ತು.
ಗಿಡ-ಮರಗಳು, ಪ್ರಾಣಿ-ಪಕ್ಷಿಗಳು, ಜೀವ ಸಂಕುಲಗಳು ಎಷ್ಟು ಪ್ರಮಾಣದಲ್ಲಿ ಇರಬೇಕೆಂದು ಆ ದೇವರು ನಿಶ್ಚಯಿಸಿದ್ದನೋ ಅದೇ ಪ್ರಮಾಣದಲ್ಲಿ ಇರ ಬೇಕು. ಆ ಸಂಖ್ಯೆಯನ್ನು ಯಾರು ಮುಟ್ಟುಗೋಲು ಹಾಕ ಬಾರದು. ಮಾನವನು ಸರ್ವಾಧಿಕಾರಿಯಂತೆ ವರ್ತಿಸಿ ಗಿಡ- ಮರಗಳನ್ನು ನಾಶ ಮಾಡಿದರೆ ಮುಂದೊಂದು ದಿನ ಆತನೇ ನಾಶವಾಗಿ ಹೋಗುತ್ತಾನೆ. ನಮಗೆ ಪ್ರಕೃತಿ ಮಾತೆ ನೀರು, ಗಾಳಿ ಎಲ್ಲವನ್ನು ನೀಡಿ ಸಲುಹಿ ದ್ದಾಳೆ. ಪ್ರತಿ ದಿ ನ ಪ್ರಕೃತಿ ಮಾತೆಗೆ ಧನ್ಯವಾದ ಸಮರ್ಪಿ ಸುತ್ತಾ ಮತ್ತಷ್ಟು ಪ್ರಕೃತಿ ಸಂರಕ್ಷಣೆಯ ದೃಢ ಸಂಕಲ್ಪ ಮಾಡೋಣ.
ಅಪೂರ್ವಾ ಕಾರಂತ, ವಿವೇಕಾನಂದ ತಾಂತ್ರಿಕ ಕಾಲೇಜು, ಪುತ್ತೂರು