Advertisement

ಉಗ್ರರಿಗೆ ತಿರುಗೇಟು ನೀಡಿದಾಗ ಕೆಲವರು ನಿದ್ರೆ ಕಳೆದುಕೊಳ್ಳುತ್ತಾರೆ: ಪ್ರಧಾನಿ ಮೋದಿ

09:00 AM Apr 06, 2019 | Sathish malya |

ಆಮ್‌ರೋಹ, ಉತ್ತರ ಪ್ರದೇಶ : “ಭಾರತ ಭಯೋತ್ಪಾದಕರಿಗೆ ತಿರುಗೇಟು ನೀಡಿದಾಗ ಇಲ್ಲಿ ಕೆಲವರು ನಿದ್ರೆ ಕಳೆದುಕೊಳ್ಳುತ್ತಾರೆ; ಭಯೋತ್ಪಾದಕರಿಗೆ ಅವರದ್ದೇ ಆದ ಭಾಷೆಯಲ್ಲಿ ಉತ್ತರ ನೀಡುವುದನ್ನು ದೇಶದಲ್ಲಿನ ಕೆಲವರು ಇಷ್ಟಪಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದರು.

Advertisement

‘ಭಯೋತ್ಪಾದಕರಿಗೆ ನಾವು ತಿರುಗೇಟು ನೀಡಿದಾಗ ವಿರೋಧ ಪಕ್ಷಗಳು ಅವರ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ ಮತ್ತು ಆ ಮೂಲಕ ದೇಶದ ಜನರ ಬದುಕು ಮತ್ತು ಭವಿಷ್ಯವನ್ನು ಅವರು ಅಪಾಯಕ್ಕೆ ಸಿಲುಕಿಸುತ್ತಾರೆ’ ಎಂದು ಪ್ರಧಾನಿ ಮೋದಿ ಅವರು ಇಲ್ಲಿನ ಚುನಾವಣಾ ರಾಲಿಯಲ್ಲಿ ಹೇಳಿದರು.

ಫೆ.14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಉಗ್ರ ದಾಳಿಯನ್ನು ಉಲ್ಲೇಖೀಸಿದ ಪ್ರಧಾನಿ ಮೋದಿ, ‘ಭಯೋತ್ಪಾದಕರ ದಾಳಿಯ ಬಳಿಕ ನಾನು ಸುಮ್ಮನೆ ಕುಳಿತಿರಬೇಕಿತ್ತೇ ಅಥವಾ ಅವರಿಗೆ ತಿರುಗೇಟು ನೀಡಬೇಕಿತ್ತೇ ?’ ಎಂದು ನೆರೆದ ಜನಸಮೂಹವನ್ನು ಪ್ರಶ್ನಿಸಿದರು.

‘ಉಗ್ರವಾದವನ್ನು ಪೋಷಿಸುವ ಒಂದು ದೇಶವಾಗಿ ಪಾಕಿಸ್ಥಾನವನ್ನು ನಾವು ವಿಶ್ವ ಸಮುದಾಯದ ಮುಂದೆ ಅನಾವರಣಗೊಳಿಸಿದಾಗ ನಮ್ಮಲ್ಲಿನ ಕೆಲವರು ಪಾಕಿಸ್ಥಾನದ ಹೀರೋ ಆಗುವ ತವಕದಲ್ಲಿ ಆ ದೇಶದ ಪರವಾಗಿ ಮಾತನಾಡುತ್ತಾರೆ; ಅದು ಕಾಂಗ್ರೆಸ್‌ ಇರಲಿ, ಎಸ್‌ಪಿ, ಬಿಎಸ್‌ಪಿ ಯೇ ಇರಲಿ; ಅವರು ನಮ್ಮ ದೇಶದ ಜನರ ಬದುಕು ಮತ್ತು ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಾರೆ’ ಎಂದು ಮೋದಿ, ಮುಸ್ಲಿಮ್‌ ಬಾಹುಳ್ಯದ ಈ ಪಟ್ಟಣದಲ್ಲಿನ ರಾಲಿಯಲ್ಲಿ ನೇರವಾಗಿ ಹೇಳಿದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗ ಮತ್ತು ಉತ್ತರ ಪ್ರದೇಶದಲ್ಲಿ ಎಸ್‌ಪಿ ಅಥವಾ ಬಿಎಸ್‌ಪಿ ಸರಕಾರ ಇದ್ದಾಗ ಲಕ್ನೋದಲ್ಲಿ ಆಗಾಗ ಬಾಂಬ್‌ ನ್ಪೋಟಗಳು ಆಗುತ್ತಿದ್ದವು; ಹಾಗೆಯೇ ರಾಮ್‌ಲಾಲಾ, ಕಾಶಿಯಲ್ಲಿ ಮತ್ತು ರಾಮಪುರದ ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ಉಗ್ರ ದಾಳಿಗಳು ನಡೆಯುತ್ತಿದ್ದವು. ಹಾಗಿದ್ದರೂ ಬುವಾ (ಮಾಯಾವತಿ) ಮತ್ತು ಬಾಬು (ಅಖೀಲೇಶ್‌ ಯಾದವ್‌) ಸರಕಾರಗಳು ಶಂಕಿತ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿದ್ದವು ಮತ್ತು ತುಂಬ ಮೃದುವಾಗಿ ವ್ಯವಹರಿಸುತ್ತಿದ್ದವು’ ಎಂದು ಮೋದಿ ಆರೋಪಿಸಿದರು.

Advertisement

‘ಆದರೆ ಈ ಉಗ್ರ ದಾಳಿಗಳು ನಂಟು ಬಹುದೂರಕ್ಕೂ ವ್ಯಾಪಿಸಿತ್ತು. ನಮ್ಮ ಭದ್ರತಾ ಸಂಸ್ಥೆಗಳು ಶಂಕಿತ ಉಗ್ರರನ್ನು ಬಂಧಿಸಿದಾಗ ಓಟ್‌ ಬ್ಯಾಂಕ್‌ ಪಾಲಿಟಿಕ್ಸ್‌ ಗಾಗಿ ಬುವಾ ಮತ್ತು ಬಾಬು ಸರಕಾರಗಳು ಅವರನ್ನು ಬಂಧಮುಕ್ತ ಗೊಳಿಸುತ್ತಿದ್ದವು’ ಎಂದು ಪ್ರಧಾನಿ ಮೋದಿ ಹೇಳಿದರು.

“ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಾಗಲೀ ದೇಶದ ಬೇರೆಡೆಗಳಲ್ಲಾಗಲೀ ಉಗ್ರ ಬಾಂಬ್‌ ಸ್ಫೋಟಗಳು ನಿಂತು ಹೋಗಿವೆ. ಕಾರಣ ಕೇಂದ್ರದಲ್ಲೀಗ ಚೌಕೀದಾರ ಇದ್ದಾನೆ. ಭಯೋತ್ಪಾದಕ ಪಾತಾಳದಲ್ಲಿದ್ದರೂ ನಾನು ಅವನನ್ನು ಹುಡುಕಿ ತೆಗೆಯುತ್ತೇನೆ; ವೋಟ್‌ ಬ್ಯಾಂಕ್‌ ಗಾಗಿ ಮೋದಿ ಎಂದೂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಭಯೋತ್ಪಾದನೆಗೆ ಹೊಣೆಗಾರರಾದವರು ಈಗ ಜೈಲಿನಲ್ಲಿ ಇದ್ದಾರೆ” ಎಂದು ಮೋದಿ ಹೇಳಿದರು.

“ಕಳೆದ ವರ್ಷಗಳ ನನ್ನ ಆಡಳಿತೆಯಲ್ಲಿ ನಾನೆಂದೂ ದೇಶ ತಲೆತಗ್ಗಿಸುವುದಕ್ಕೆ ಅವಕಾಶ ನೀಡಿಲ್ಲ; ತಲೆ ಎತ್ತಿ ನಿಲ್ಲುವಂತೆ ಮಾಡಿದ್ದೇನೆ; ವಿಶ್ವದಲ್ಲೀಗ ಹಿಂದೆಂದಿಗಿಂತಲೂ ದೇಶದ ಘನತೆ, ಗೌರವ ಉನ್ನತ ಮಟ್ಟದಲ್ಲಿದೆ’ ಎಂದು ಮೋದಿ ಹೇಳಿದರು.

“ಯುಎಇ ಕೊಟ್ಟಿರುವ ಆ ದೇಶದ ಮಹೋನ್ನತ ಝಾಯೇದ್‌ ಪದಕ ಮೋದಿಗಲ್ಲ; ಭಾರತದ ಜನರಿಗೆ ಎಂದು ನಾನು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳುತ್ತೇನೆ; ಅಂತೆಯೇ ಅತ್ಯಂತ ವಿನೀತ ಭಾವದಿಂದ ನಾನದನ್ನು ಸ್ವೀಕರಿಸಿದ್ದೇನೆ” ಎಂದ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next