Advertisement

ಕೆಲವು ಯೋಜನೆಗಳು ವಿಫ‌ಲವಾದವು: ಧೋನಿ

08:40 PM Apr 04, 2019 | Sriram |

ಮುಂಬಯಿ: ಕೊನೆಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವಿನ ಓಟಕ್ಕೆ ಬ್ರೇಕ್‌ ಬಿದ್ದಿದೆ. ಈ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್‌ಗೆ ಸಂದಿದೆ.

Advertisement

ಬುಧವಾರ ರಾತ್ರಿ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್‌ ಪಡೆ 37 ರನ್ನುಗಳಿಂದ ಚೆನ್ನೈಗೆ ಆಘಾತವಿಕ್ಕಿತು. ಇದು 4ನೇ ಪಂದ್ಯದಲ್ಲಿ ಧೋನಿ ಬಳಗಕ್ಕೆ ಎದುರಾದ ಮೊದಲ ಸೋಲು.

ನಮ್ಮ ಕೆಲವು ಯೋಜನೆಗಳು ಕೈಕೊಟ್ಟದ್ದೇ ಸೋಲಿಗೆ ಕಾರಣ ಎಂಬುದಾಗಿ ಚೆನ್ನೈ ತಂಡದ ಕಪ್ತಾನ ಮಹೇಂದ್ರ ಸಿಂಗ್‌ ಧೋನಿ ಹೇಳಿದ್ದಾರೆ.

“ಪಂದ್ಯದಲ್ಲಿ ನಮ್ಮ ಆರಂಭ ಚೆನ್ನಾಗಿಯೇ ಇತ್ತು. ಮೊದಲ 10-12 ಓವರ್‌ ತನಕ ಮುಂಬೈಗೆ ಕಡಿವಾಣ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೆವು. ಅನಂತರ ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಫೀಲ್ಡಿಂಗ್‌ ಕೂಡ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಡೆತ್‌ ಓವರ್‌ ಬೌಲಿಂಗ್‌ ಅಷ್ಟೇನೂ ಚೆನ್ನಾಗಿರಲಿಲ್ಲ. ಇದು ನಮ್ಮ ಪಾಲಿಗೆ ಕಠಿನವಾಗಿ ಪರಿಣಮಿಸಿತು…’ ಎಂದು ಧೋನಿ ಪ್ರತಿಕ್ರಿಯಿಸಿದರು.

“ವಾಂಖೇಡೆ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 5 ವಿಕೆಟಿಗೆ 170 ರನ್‌ ಗಳಿಸಿದರೆ, ಚೆನ್ನೈ 8 ವಿಕೆಟಿಗೆ 133 ರನ್‌ ಗಳಿಸಿ ಸೋಲಿಗೆ ತುತ್ತಾಯಿತು. 8 ಎಸೆತಗಳಿಂದ 25 ರನ್‌ ಬಾರಿಸಿ, ಬಳಿಕ 20 ರನ್ನಿಗೆ 3 ವಿಕೆಟ್‌ ಉರುಳಿಸಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ಹಾರ್ದಿಕ್‌ ಪಾಂಡ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಕೇದಾರ್‌ ವಿಫ‌ಲ ಹೋರಾಟ
ಚೆನ್ನೈ ಸರದಿಯಲ್ಲಿ ಕೇದಾರ್‌ ಜಾಧವ್‌ ಹೊರತುಪಡಿಸಿ ಉಳಿದವರ್ಯಾರೂ ಕ್ರೀಸ್‌ ಆಕ್ರಮಿಸಿಕೊಳ್ಳಲಿಲ್ಲ. 54 ಎಸೆತ ಎದುರಿಸಿದ ಜಾಧವ್‌ 58 ರನ್‌ ಹೊಡೆದರು (8 ಬೌಂಡರಿ, 1 ಸಿಕ್ಸರ್‌). ಅನಂತರದ ಹೆಚ್ಚಿನ ಗಳಿಕೆ 16 ರನ್‌ ಮಾಡಿದ ಸುರೇಶ್‌ ರೈನಾ ಅವರದು. ಇವರ ಕ್ಯಾಚನ್ನು ಒಂದೇ ಕೈಯಲ್ಲಿ ಅಮೋಘ ರೀತಿಯಲ್ಲಿ ಪಡೆದ ಪೊಲಾರ್ಡ್‌ ಕೂಡ ಪಂದ್ಯದ ತಿರುವಿಗೆ ಕಾರಣರು ಎನ್ನಲಡ್ಡಿಯಿಲ್ಲ.

33 ರನ್ನಿಗೆ 3 ವಿಕೆಟ್‌ ಕಳೆದುಕೊಂಡ ಚೆನ್ನೈತಂಡವನ್ನು ಜಾಧವ್‌-ಧೋನಿ ಸೇರಿಕೊಂಡು ಮೇಲೆತ್ತಲು ಯತ್ನಿಸಿದರು. ಇವರಿಬ್ಬರಿಂದ 9.1 ಓವರ್‌ಗಳ ಜತೆಯಾಟ ನಡೆಯಿತು. ಆದರೆ ರನ್‌ಗತಿ ಮಾತ್ರ ಏರಲಿಲ್ಲ. ಈ ಅವಧಿಯಲ್ಲಿ ಬಂದದ್ದು ಕೇವಲ 44 ರನ್‌. ಧೋನಿ 12 ರನ್ನಿಗೆ 21 ಎಸೆತ ಎದುರಿಸಿದರು. ಇದರಲ್ಲಿ ಒಂದೂ ಬೌಂಡರಿ ಹೊಡೆತ ಇರಲಿಲ್ಲ. ಧೋನಿ, ಜಡೇಜ 2 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡೊಡನೆ ಚೆನ್ನೈ ಸೋಲು ಖಚಿತಗೊಂಡಿತು.

ಪ್ರತಿಯೊಂದು ಪಂದ್ಯವೂ ಮುಖ್ಯ
“ನಮ್ಮದು ಮುಂಬೈ ಇಂಡಿಯನ್ಸ್‌ ಬ್ರ್ಯಾಂಡ್‌ ಕ್ರಿಕೆಟ್‌. ನಮಗೆ ಪ್ರತಿಯೊಂದು ಪಂದ್ಯವೂ ಮುಖ್ಯವಾದದ್ದು. ಮೊದಲೆರಡು ಪಂದ್ಯಗಳನ್ನು ಸೋತಾಗ ನಮಗೆ ಉಳಿದ ಪಂದ್ಯಗಳ ಮಹತ್ವ ಅರಿವಾಯಿತು. ಲೀಗ್‌ ಹಂತದ ಕೊನೆಯಲ್ಲಿ ಸತತವಾಗಿ ಪಂದ್ಯಗಳನ್ನು ಗೆಲ್ಲುವ ಒತ್ತಡಕ್ಕಿಂತ ಆರಂಭದಿಂದಲೇ ಗೆಲುವು ಸಾಧಿಸುತ್ತ ಹೋಗಬೇಕಾದುದು ಮುಖ್ಯ’ ಎಂದು ಪ್ರತಿಕ್ರಿಯಿಸಿದವರು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ.

“ನಾವು ಈ ಪಂದ್ಯವನ್ನು ಅತ್ಯಂತ ನೀರಸವಾಗಿ ಆರಂಭಿಸಿ ಅಮೋಘ ರೀತಿಯಲ್ಲಿ ಮುಗಿಸಿದೆವು’ ಎಂದೂ ರೋಹಿತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next