Advertisement

ಅಮೆರಿಕ ಅಧ್ಯಕ್ಷ ಟ್ರಂಪ್‌ರ ಕೆಲವು ಪ್ರಮಾದಗಳು

03:08 PM May 01, 2020 | sudhir |

ವಾಷಿಂಗ್ಟನ್‌: ವಿಶ್ವವ್ಯಾಪಿ ಹರಡಿರುವ ಕೋವಿಡ್‌-19ನಿಂದ ಅಮೆರಿಕಕ್ಕೂ ಸಹ ಅಪಾಯವಿದೆ ಎಂದು ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಯುಎಸ್‌ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿಳಿಸಿದ್ದು, ಮುಂಜಾಗ್ರತೆ ತೆಗೆದುಕೊಳ್ಳುವ ಅಗತ್ಯವನ್ನೂ ಹೇಳಿತ್ತು. ಆದರೆ, ಟ್ರಂಪ್‌ ಗಂಭೀರ ವಾಗಿ ತೆಗೆದುಕೊಳ್ಳಲಿಲ್ಲ. ಪರಿಣಾಮ ನಮ್ಮ ಕಣ್ಣೆದುರು ಇದೆ.
ಹಾಗಾದರೆ ಟ್ರಂಪ್‌ ಮಾಡಿದ ಪ್ರಮಾದಗಳೇನು ಎಂಬುದರ ವಿವರ ಇಲ್ಲಿದೆ.

Advertisement

ಜನವರಿ ತಿಂಗಳಿನಲ್ಲೇ ಮಾಹಿತಿ
ಅಮೆರಿಕದ ಗುಪ್ತಚರ ಅಧಿಕಾರಿಗಳು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲೇ ಅಧ್ಯಕ್ಷರ ಪ್ರತಿದಿನದ ಕಾರ್ಯಾಚರಣೆಯ ವರದಿಯಲ್ಲಿ ಕೋವಿಡ್‌-19 ಸೋಂಕು ಹರಡುತ್ತಿರುವ ವಿಷಯವನ್ನು ಗಮನಕ್ಕೆ ತಂದಿದ್ದರಂತೆ. ಆದರೆ, ಟ್ರಂಪ್‌ ಓಕೆ ಎಂದು ಸುಮ್ಮನಾದರು. ಜತೆಗೆ ಚೀನದಲ್ಲಿ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಚೀನ ನಡುವಿನ ವಿಮಾನಯಾನ ನಿರ್ಬಂಧಿಸಿ ಎಂದೂ ಹೇಳಲಾಗಿತ್ತಂತೆ. ಅದೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.

ಆರ್ಥಿಕತೆ ಮೇಲೆ ಪರಿಣಾಮ
ಚೀನ ಸಾಂಕ್ರಾಮಿಕ ರೋಗದ ಹರಡುವಿಕೆಯ ಬಗ್ಗೆ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದೂ ಸಹ ಗುಪ್ತಚರ ಅಧಿಕಾರಿಗಳು ಹೇಳಿದ್ದರಂತೆ. ಇದು ದೇಶದ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಪರಿಣಿತರನ್ನು ಉಲ್ಲೇಖೀಸಿ ವರದಿ ನೀಡಲಾಗಿತ್ತಂತೆ. ಆದರೆ ಇದರ ಕಥೆಯೂ ಅಷ್ಟೇ, ದೊರೆಯ ಕಿವಿಗೆ ರುಚಿಸಲೇ ಇಲ್ಲ.

ಫೆಬ್ರವರಿಯಲ್ಲೂ ಎಚ್ಚೆತ್ತುಕೊಳ್ಳಲಿಲ್ಲ
ಕೇಂದ್ರ ಗುಪ್ತಚರ ಸಂಸ್ಥೆ ಅಧಿಕಾರಿಯೊಬ್ಬರು ಹೇಳುವಂತೆ ಜನರಿಯಲ್ಲೇ ನಾವು ಮಾಹಿತಿ ನೀಡಿದ್ದೆವು. ಫೆಬ್ರವರಿಯಾದರೂ ಎಚ್ಚೆತ್ತುಕೊಳ್ಳಲಿಲ್ಲ. ಅದರಿಂದ ಆಡಳಿತ ರಕ್ಷಣಾತ್ಮಕ ಸಾಧನಗಳ ಪೂರೈಕೆ, ಸೋಂಕು ನಿರ್ಣಯ ಪರೀಕ್ಷೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶವನ್ನು ಪ್ರತ್ಯೇಕಿ ಸೋಂಕಿನಿಂದ ರಕ್ಷಿಸುವ ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ವಿಫ‌ಲವಾಯಿತು ಎಂದಿದ್ದಾರೆ.

ಮೊಂಡುತನ ಮೆರೆದ ಟ್ರಂಪ್‌
ಫೆಬ್ರವರಿ ತಿಂಗಳಿನಲ್ಲಿ ಸೋಂಕಿನ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಜಾಸ್ತಿ ಗಾಬರಿಯಾಗಬೇಡಿ ಎಂದು ಹೇಳಲು ಪ್ರಯತ್ನಿಸಿದರು. ಜನವರಿ 30 ರಂದು ದೇಶ ಚೀನಕ್ಕೆ ಸಂಪರ್ಕ ಕಲ್ಪಿಸುವ ಗಡಿಯನ್ನು ಬಂದ್‌ ಮಾಡಿದ್ದು, ದೇಶದಲ್ಲಿ ಕೇವಲ 5 ಪ್ರಕರಣಗಳಷ್ಟೇ ದಾಖಲಾಗಿದೆ ಎಂದರು. ಆದರೆ ಒಂದು ತಿಂಗಳ ಬಳಿಕ ಮಾರ್ಚ್‌ 9 ರಂದು ಪ್ರತಿ ವರ್ಷ ಅಮೆರಿಕದಲ್ಲಿ ಸಾಮಾನ್ಯ ಜ್ವರದಿಂದ ಸುಮಾರು 37 ಸಾವಿರ ಜನರು ಸಾಯುತ್ತಾರೆ ಎಂದು ಟ್ವೀಟ್‌ ಮಾಡಿದರು. ಈ ಹಿನ್ನೆಲೆಯಲ್ಲಿ ಸೋಂಕಿನಿಂದ ಅಗಾಧ ಮಟ್ಟದ ಸಮಸ್ಯೆಗಳು ಆಗುವುದಿಲ್ಲ. ಯಾವುದೇ ಲಾಕ್‌ಡೌನ್‌ ನಿಯಮಗಳನ್ನು ಜಾರಿ ಮಾಡುವುದಿಲ್ಲ. ಸೋಂಕು ಇಲ್ಲಿರುವುದೇ ಇಲ್ಲ ಎಂದಿದ್ದರು.

Advertisement

ವಿಶ್ವಸಂಸ್ಥೆ ಘೋಷಣೆ ನಂತರ ಜಾಗೃತಿ
ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌-19 ನ್ನು ಜಾಗತಿಕ ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿತೋ ಕೂಡಲೇ ಸರಕಾರ ಎಚ್ಚೆತ್ತುಕೊಂಡಿತು. ಆದರೆ ಕಾಲ ಮಿಂಚಿ ಹೋಗಿತ್ತು.

ರಾಜಕೀಯ ಭವಿಷ್ಯ
ಅಮೆರಿಕದ ಅಧ್ಯಕ್ಷ ಟ್ರಂಪ್‌​, ಜನವರಿಯಲ್ಲಿ ಸೆನೆಟ್‌ ದೋಷಾರೋಪಣೆ ವಿಚಾರಣೆಯಲ್ಲಿ ನಿರತರಾಗಿದ್ದರು. ಜನವರಿ 3 ರಂದು ನಡೆದ ಯುಎಸ್‌ ವೈಮಾನಿಕ ದಾಳಿಗೆ ಇರಾನ್‌ ನೀಡಿದ ಪ್ರತಿಕ್ರಿಯೆ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುವುದೇ ಮುಖ್ಯವಾಗಿತ್ತು.

ಎಚ್ಚರಿಸಿದ ಪತ್ರಿಕೆಗಳು
ಫೆಬ್ರವರಿ 26 ರಂದು ಅಧ್ಯಕ್ಷ ಡೊನಾಲ್ಡ್​​ ಟ್ರಂಪ್‌​, ಒಂದೆರಡು ದಿನಗಳಲ್ಲಿ ನಾವು ಶೂನ್ಯಕ್ಕೆ ಹತ್ತಿರವಾಗಲಿದ್ಧೇವೆ, ಒಂದು ಪವಾಡದಂತೆ ಈ ವೈರಸ್‌​ ಕಣ್ಮರೆಯಾಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ಸುಳ್ಳಾಯಿತು. ಪ್ರಸ್ತುತ ಈ ವೈರಸ್‌ ಸಮುದಾಯ ಸೋಂಕಾಗಿ ಪರಿವರ್ತಿತವಾಗಿದೆ. ನ್ಯೂಯಾರ್ಕ್‌ ನಗರ ಮತ್ತು ಇತರೆಡೆ ಹಬ್ಬಿದೆ. ಅಮೆರಿಕದ ಪತ್ರಿಕೆಯೊಂದು, ಲಾಕ್‌ಡೌನ್‌ ಜಾರಿ ಮಾಡದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ದೇಶದ ಆರ್ಥಿಕತೆಯ ಬೃಹತ್‌ ಕ್ಷೇತ್ರಗಳನ್ನು ಮುಚ್ಚುವವರೆಗೆ ಸೋಂಕು ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next