Advertisement

ತುಸು ಜಾಲಿ; ತುಸು ಪೋಲಿ

05:30 PM Nov 03, 2017 | |

ಒಬ್ಬೊಬ್ಬರೇ ಎಲ್ಲರೂ ಆ ಕಲ್ಯಾಣ ಮಂಟಪಕ್ಕೆ ಬರುತ್ತಾರೆ. ಗೊತ್ತಿಧ್ದೋ, ಗೊತ್ತಿಲ್ಲದೆಯೋ ಎಲ್ಲರೂ ಒಂದೇ ಸೂರಿನಲ್ಲಿ ಸಿಕ್ಕಿಬೀಳುತ್ತಾರೆ. ಅವರು ಇವರಿಗೆ ಹೊಡೆಯುತ್ತಾರೆ, ಇವರು ಇನ್ನಾರಿಗೋ, ಇನ್ನಾರೋ ಮತ್ಯಾರಿಗೋ … ಕೊನೆಗೆ ಎಲ್ಲರೂ ಒದೆ ತಿಂದು ಆಸ್ಪತ್ರೆಗೆ ಸೇರುವ ಮೂಲಕ ಚಿತ್ರ ಮುಗಿಯುತ್ತದೆ. ಯಾರು, ಯಾರಿಗಾದರೂ ಯಾಕೆ ಹೊಡೆಯುತ್ತಾರೆ ಎಂಬ ಪ್ರಶ್ನೆ ಸಹಜ.

Advertisement

ಅದು ಗೊತ್ತಾಗಬೇಕಿದ್ದರೆ, ಒಂದು ಕಾರಣ ಇರಬೇಕು ಅಥವಾ ಒಂದು ಕಥೆ ಇರಬೇಕು. ಆದರೆ, “ಜಾಲಿ ಬಾರು ಮತ್ತು ಪೋಲಿ ಗೆಳೆಯರು’ ಚಿತ್ರದಲ್ಲಿ ಕಾರಣವೂ ಇಲ್ಲ, ಕಥೆಯೂ ಇಲ್ಲ. ಅಲ್ಲಿರುವುದು ಒಂದಿಷ್ಟು ಪಾತ್ರಗಳಷ್ಟೇ. ಮಂದೂರು ಎಂಬ ಎರಡು ಲಕ್ಷ ಜನ ಸಂಖ್ಯೆ ಇರುವ ಊರಿನ ಕೆಲವು ಕಾಲ್ಪನಿಕ ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಆ ಊರಿನ ಬಡ್ಡಿ ಸರಳಮ್ಮ, ಆಕೆಯ ಹಸುವಿನಂತಹ ಗಂಡ ಗೋಜುಗೌಡ, ಉಡಾಳ ಮಗ ಸಂತು,

-ಮನೆಯ ಕಾರಕೂನ ನರಸಿಂಹ, ಆ ಊರಿನ ಶಾಸಕ ಶೇಷಪ್ಪ, ಸಾಲವಾದರೂ ಪರವಾಗಿಲ್ಲ ಮೈ ತುಂಬಾ ಚಿನ್ನ ಇರಬೇಕೆಂದು ಬಯಸುವ ಹೆಂಗಸು, ಪೊಲೀಸ್‌ ಸ್ಟೇಷನ್‌ ತನ್ನ ಹೆಸರಿಗೆ ಬರೆದುಕೊಡಬೇಕೆಂದು ಕಾಡುವ ಹುಚ್ಚು ರೌಡಿ, ಕನ್ನಡಕ ತೆಗೆದರೆ ಪರದಾಡುವ ಗೋಪಿ ಅಲಿಯಾಸ್‌ ರಾಜಕುಮಾರ್‌, ಎಲ್ಲರ ಬಾಯಲ್ಲೂ ಸತ್ಮಿಕ್ಸಾ ಆಗಿರುವ ಸಮೀಕ್ಷಾ … ಹೀಗೆ ಹಲವು ಪಾತ್ರಗಳನ್ನಿಟ್ಟುಕೊಂಡು ಒಂದು ಸಿನಿಮಾ ಮಾಡಿದ್ದಾರೆ “ಕಾರಂಜಿ’ ಶ್ರೀಧರ್‌.

ಆ ಪಾತ್ರಗಳು ಮಾಡುವ ಚೇಷ್ಟೆಗಳನ್ನೇ ಬೆಳಸಿ, ಒಂದು ಚಿತ್ರ ಮಾಡಿದ್ದಾರೆ. ಒಂದು ಹಂತದಲ್ಲಿ ಚಿತ್ರ ಮುಗಿಯುತ್ತದಾದರೂ, ಅಷ್ಟಕ್ಕೇ ಮುಗಿಯುವುದಿಲ್ಲ. ಈ ಜಗಳ ಮುಂದುವರೆಯಲಿದೆ ಎಂದು ಮುಂದಿನ ಭಾಗಗಳಿಗೆ ಮುಂದೂಡಲಾಗಿದೆ. ಬೇಕಾದರೆ, ಇದೇ ಹೆಸರಿಟ್ಟುಕೊಂಡು, ಅದೇ ಪಾತ್ರಗಳನ್ನು ಮುಂದುವರೆಸಿ ಸರಣಿ ಚಿತ್ರಗಳನ್ನು ಮಾಡಬಹುದು. ಕಥೆ, ಮನರಂಜನೆ, ತಾತ್ಪರ್ಯ ಇರಲೇಬೇಕೆಂದು ನಿರೀಕ್ಷಿಸದಿದ್ದರೆ ಆಯಿತು.

“ಜಾಲಿ ಬಾರು ಮತ್ತು ಪೋಲಿ ಗೆಳೆಯರು’ ಎಂಬ ಹೆಸರು ಕೇಳಿ, ಬಿ.ಆರ್‌. ಲಕ್ಷ್ಮಣರಾಯರ ಕವನವನ್ನು ನೆನಪಿಸಿಕೊಂಡು ಚಿತ್ರಕ್ಕೆ ಹೋದರೆ ನಿರಾಶೆ ಖಂಡಿತಾ. ರಾಯರ ಹಾಡಿಗೂ, ಚಿತ್ರಕ್ಕೂ ಸಂಬಂಧವಿಲ್ಲ. ಅಷ್ಟೇ ಅಲ್ಲ, ಚಿತ್ರದಲ್ಲಿ ಆ ಹಾಡೂ ಇಲ್ಲ. ಇಲ್ಲಿ ಜಾಲಿ ಬಾರು ಎನ್ನುವುದು ನಾಯಕ ಮತ್ತು ಸ್ನೇಹಿತರು ಕುಳಿತು ಗುಂಡು ಹಾಕುವ ಅಡ್ಡ. ಆ ಬಾರನ್ನು ಒಂದೆರೆಡು ಬಾರಿ ತೋರಿಸಲಾಗುತ್ತದೆ ಎನ್ನುವುದು ಬಿಟ್ಟರೆ, ಚಿತ್ರಕ್ಕೂ ಜಾಲಿ ಬಾರಿಗೂ ಸಂಬಂಧವಿಲ್ಲ.

Advertisement

ಸುಮ್ಮನೆ ಒಂದು ಕ್ಯಾಚಿ ಹೆಸರು ಮತ್ತು ಒಂದಿಷ್ಟು ವಿಚಿತ್ರ ಪಾತ್ರಗಳು ಸಿಕ್ಕಿತೆಂಬ ಕಾರಣಕ್ಕೆ ಚಿತ್ರ ಮಾಡಿದಂತೆ ಕಾಣಿಸುವ ಮಟ್ಟಿಗೆ, ಚಿತ್ರಕ್ಕೆ ಯಾವುದೇ ಸೂತ್ರ, ಸಂಬಂಧ, ಕಥೆ ಯಾವುದೂ ಇಲ್ಲ. ಸುಮ್ಮನೆ ಒಂದಿಷ್ಟು ವಿಚಿತ್ರ ಪಾತ್ರಗಳನ್ನಿಟ್ಟುಕೊಂಡು ನಗಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಚಿತ್ರದಲ್ಲಿ ಮನರಂಜನೆ ಇದೆಯಾ ಅಥವಾ ಚಿತ್ರ ನೋಡಿ ಖುಷಿಯಾಗುತ್ತದಾ ಎಂದರೆ, ಅಂಥದ್ದೆಲ್ಲಾ ನಿರೀಕ್ಷಿಸುವುದು ತಪ್ಪಾಗುತ್ತದೆ.

ಒಂದೆರೆಡು ದೃಶ್ಯಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಚಿತ್ರ ಸುಮ್ಮನೆ ಆರಕ್ಕೇರದೆ, ಮೂರಕ್ಕಿಳಿಯದೆ ಸಾಗುತ್ತಾ ಹೋಗುತ್ತದೆ. ಚಿತ್ರದಲ್ಲಿ ಚಿಕ್ಕಣ್ಣ, ಜಹಾಂಗೀರ್‌, ಕಾಶಿ, ಕಲ್ಯಾಣಿ, ಮೈಕೋ ನಾಗರಾಜ್‌, ವೀಣಾ ಸುಂದರ್‌ ಸೇರಿದಂತೆ ಒಂದಿಷ್ಟು ಪ್ರತಿಭಾವಂತರ ದಂಡೇ ಇದೆ. ಆದರೆ, ಯಾರಿಗೂ ಹೆಚ್ಚು ಕೆಲಸವಿಲ್ಲ. ಕೆಲಸವಿದ್ದರೂ ಅದರಿಂದ ಪ್ರೇಕ್ಷಕರೇನೂ ಖುಷಿಯಾಗುವುದಿಲ್ಲ.

ಕೃಷ್ಣ ಮಾಸ್‌ ಆಗಿಯೂ, ಮಾನಸಿ ಗ್ಲಾಮರಸ್‌ ಆಗಿಯೂ ಕಾಣಿಸುತ್ತಾರೆ. ದೃಶ್ಯಗಳು ನಗಿಸುವುದರಲ್ಲಿ ವಿಫ‌ಲವಾಗುವುದು ಒಂದು ಕಡೆಯಾದರೆ, ಕಲಾವಿದರಿಗೆ ನಗಿಸುವುದಕ್ಕೆ ಹೆಚ್ಚು ವಿಷಯ ಚಿತ್ರದಲ್ಲಿಲ್ಲ ಎಂಬುದು ಮಹತ್ವದ ಸಂಗತಿ. ಆ ನಿಟ್ಟಿನಲ್ಲಿ ಚಿತ್ರಕಥೆಗೆ, ಸಂಭಾಷಣೆಗಳಿಗೆ ಒಂದಿಷ್ಟು ಪಂಚ್‌ ಕೊಡುವ ಅವಶ್ಯಕತೆ ಇತ್ತು. ಒಟ್ಟಿನಲ್ಲಿ ಜಾಲಿ ಬಾರು ಮತ್ತು ಪೋಲಿ ಗೆಳೆಯರಿಗಿಂಥ ಎದ್ದು ಕಾಣುವುದು ಬೋರೋ ಬೋರು. ಚಿತ್ರ ಹೆಂಗಾದರೂ ಇರಲಿ, ಒಂದಿಷ್ಟು ವಿಚಿತ್ರ ಪಾತ್ರಗಳನ್ನು ನೋಡುವ ಎನ್ನುವವರು ಖಂಡಿತಾ ಚಿತ್ರ ನೋಡಬಹುದು.

ಚಿತ್ರ: ಜಾಲಿ ಬಾರು ಮತ್ತು ಪೋಲಿ ಗೆಳೆಯರು
ನಿರ್ದೇಶನ: ಶ್ರೀಧರ್‌
ತಾರಾಗಣ: ಕೃಷ್ಣ, ಮಾನಸಿ, ಕಲ್ಯಾಣಿ, ಜಹಾಂಗೀರ್‌, ಚಿಕ್ಕಣ್ಣ, ಮೈಕೋ ನಾಗರಾಜ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next