ನವದೆಹಲಿ: ದೆಹಲಿಯ ಕೆಲವು ವ್ಯಕ್ತಿಗಳು ನನಗೆ ಪ್ರಜಾಪ್ರಭುತ್ವದ ಪಾಠ ಕಲಿಸಲು ಬಯಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ(ಡಿಸೆಂಬರ್ 26, 2020) ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದತ್ತ ಪ್ರತಿಭಟನೆ ಮೂಲಕ ಸಾಗುತ್ತಿದ್ದಾಗ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಸುದ್ದಿಗಾರರ ಜತೆ ಮಾತನಾಡುತ್ತ, ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ. ಯಾರು ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಾರೋ ಅವರನ್ನು ಉಗ್ರರು ಎಂದು ಹಣೆಪಟ್ಟಿ ಕಟ್ಟುತ್ತಾರೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ಪರೋಕ್ಷವಾಗಿ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ದೆಹಲಿಯ ಕೆಲವು ವ್ಯಕ್ತಿಗಳು ಯಾವಾಗಲೂ ಟೀಕಿಸುತ್ತಾ ನನ್ನ ಅವಮಾನಿಸುತ್ತಿದ್ದಾರೆ. ಅವರು ನನಗೆ ಪ್ರಜಾಪ್ರಭುತ್ವದ ಪಾಠ ಕಲಿಸಲು ಬಯಸುತ್ತಿದ್ದಾರೆ. ನಾನು ಅವರಿಗೆ ಜಮ್ಮು-ಕಾಶ್ಮೀರದ ಡಿಡಿಸಿ ಚುನಾವಣೆಯನ್ನೇ ಪ್ರಜಾಪ್ರಭುತ್ವದ ಉದಾಹರಣೆಯನ್ನಾಗಿ ತೋರಿಸುತ್ತೇನೆ ಎಂದು ಜಮ್ಮು-ಕಾಶ್ಮೀರದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಉದ್ಘಾಟಿಸಿ ಮಾತನಾಡುತ್ತ ಹೇಳಿದರು.
ಇದನ್ನೂ ಓದಿ:ನಗರದಲ್ಲಿ ನಕಲಿ ಮಾರ್ಷಲ್‌ನಿಂದ ದಂಡ ಸಂಗ್ರಹ ! ಹಿಡಿದು ಪೊಲೀಸರಿಗೊಪ್ಪಿಸಿದ ಅಸಲಿ ಮಾರ್ಷಲ್ಸ್
ಕೆಲವು ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಬಗ್ಗೆ ಪಾಠ ಕಲಿಸುತ್ತಿವೆ. ಆದರೆ ಇವರ ವಂಚನೆ ಮತ್ತು ಪೊಳ್ಳುತನ ಗಮನಿಸಿ. ಪಾಂಡಿಚೇರಿಯಲ್ಲಿ ಆಡಳಿತ ನಡೆಸುವ ಈ ಪಕ್ಷಕ್ಕೆ ಸುಪ್ರೀಂಕೋರ್ಟ್ ಆದೇಶದಿಂದಾಗಿ ಸ್ಥಳೀಯ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಆದರೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಒಂದು ವರ್ಷದೊಳಗೆ ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಮಟ್ಟದ ಚುನಾವಣೆ ನಡೆಸಿದ್ದೇವೆ ಎಂದು ಪ್ರಧಾನಿ ಹೇಳಿದರು.