Advertisement

ಕೆಲ ಸರಕಾರಿ ಕಿ.ಪ್ರಾ. ಶಾಲೆಗೆ ಬೇಕಿದೆ ಖಾಯಂ ಶಿಕ್ಷಕರು

11:16 PM Oct 05, 2019 | Sriram |

ಹಾಲಾಡಿ: ಇಲ್ಲಿಗೆ ಸಮೀಪದ ಅಮಾಸೆಬೈಲು ಗ್ರಾಮದ “ಸರಕಾರಿ ಕಿರಿಯ ಪ್ರಾಥಮಿಕ ಶಾಲೆ “ಕೆಲ’ ಇಲ್ಲಿಗೆ ಖಾಯಂ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಕೊರತೆಯಿಂದ ಶಾಲೆ ಮುಚ್ಚುವುದು ಎಲ್ಲೆಡೆ ಸರ್ವೇ ಸಾಮಾನ್ಯವಾದರೆ, ಇಲ್ಲಿ ಶಿಕ್ಷಕರೇ ಇಲ್ಲದ ಕಾರಣ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ. ಈ ಬಗ್ಗೆ ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಿದರೂ, ಪ್ರಯೋಜನ ಮಾತ್ರ ಶೂನ್ಯ.

Advertisement

ಪಶ್ಚಿಮ ಘಟ್ಟದ ತಪ್ಪಲಿ ನಲ್ಲಿರುವ ಪ್ರಕೃತಿ ದತ್ತ ಸೌಂದರ್ಯದ ಮಧ್ಯೆ ಇರುವ, ನಕ್ಸಲ್‌ ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿರುವ ಅಮಾಸೆಬೈಲು ಗ್ರಾಮದಲ್ಲಿರುವ “ಕೆಲ’ ಎನ್ನುವ ಪುಟ್ಟ ಊರಿನಲ್ಲಿರುವ ಈ ಶಾಲೆಯೀಗ ಖಾಯಂ ಶಿಕ್ಷಕರಿಲ್ಲದ ಕಾರಣ ಮುಚ್ಚುವ ಭೀತಿಯಲ್ಲಿದೆ.

ಸುಮಾರು 45 ವರ್ಷಗಳ ಇತಿಹಾಸವಿರುವ ಈ ಸರಕಾರಿ ಕಿ.ಪ್ರಾ. ಶಾಲೆ ಕೆಲದಲ್ಲಿ ಈಗ 18 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಇಲ್ಲಿ ಇದ್ದ ಶಿಕ್ಷಕರಿಗೆ ನಿವೃತ್ತಿಯಾಗಿದ್ದು, ಆ ಬಳಿಕ ಇಲ್ಲಿಗೆ ಪ್ರಭಾರ ನೆಲೆಯಲ್ಲಿ ಓರ್ವರನ್ನು ನಿಯೋಜಿಸಲಾಗಿದೆ. ಆದರೆ ಅವರು ಎಷ್ಟು ದಿನ ಇರುತ್ತಾರೆ ಎನ್ನುವ ಆತಂಕ ಪೋಷಕರದ್ದು. ಮತ್ತೂರ್ವರು ಅತಿಥಿ ಶಿಕ್ಷಕರಿದ್ದಾರೆ.

ಬೇರೆ ಶಾಲೆಗೆ ಹೋಗಲು ಸಮಸ್ಯೆ
ಇದು ತೀರಾ ಗ್ರಾಮೀಣ ಭಾಗದ ಶಾಲೆಯಾಗಿದ್ದು, ಇಲ್ಲಿ ವಾಸಿಸುವ ಜನರು ಕೂಡ ಬಡ ಕುಟುಂಬದವರಾಗಿದ್ದಾರೆ. ದೂರದ ಖಾಸಗಿ ಶಾಲೆಗೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಪಕ್ಕದ ಶಾಲೆಗೆ ಹೋಗೋಣವೆಂದರೆ, 5ರಿಂದ 10 ಕಿ.ಮೀ. ವರೆಗೂ ನಿರ್ಜನ ಕಾಡಿನ ಮಧ್ಯೆ ನಡೆದೇ ಹೋಗಬೇಕಾದ ದುಃಸ್ಥಿತಿ. ಇದರಿಂದ ಈ ಶಾಲೆಯನ್ನು ಶಿಕ್ಷಕರಿಲ್ಲದೆ ಮುಚ್ಚಿ, ಇಲ್ಲಿನ ಮಕ್ಕಳನ್ನು ಹತ್ತಿರದ ಶಾಲೆಗೆ ಕಳುಹಿಸುವ ಯೋಜನೆ ಸಚಿವರು ಹಾಗೂ ಇಲಾಖೆಯದ್ದು ಎನ್ನುವ ಮಾಹಿತಿ ತಿಳಿದು ಬಂದಿದೆ. ಆದರೆ ವಾಹನದ ಮೂಲಕ ಬೇರೊಂದು ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೆತ್ತವ‌ರಿಗೆ ಕಷ್ಟವಾಗಲಿದ್ದು, ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತರಾಗಬಹುದು ಎನ್ನುವ ಆತಂಕ ಊರವರದ್ದು.

ಶಿಕ್ಷಣ ಸಚಿವರಿಗೂ ಮನವಿ
ಈ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ ಎನ್ನುವುದನ್ನು ಈ ಊರಿನ ನೆರಳು ಎನ್ನುವ ತಂಡವು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆದರೆ ಇದು ನಕ್ಸಲ್‌ ಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿಗೆ ಶಿಕ್ಷಕರು ಬರಲು ಒಪ್ಪುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಇಲ್ಲಿನ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟು, ಸಮೀಪದ ಶಾಲೆಯಲ್ಲಿ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದರು.

Advertisement

ಇಲ್ಲಿಗೆ ಬರಲು ಹಿಂದೇಟು
ಇದು ತೀರಾ ಗ್ರಾಮೀಣ, ಮಾತ್ರವಲ್ಲದೆ ನಕ್ಸಲ್‌ ಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿಗೆ ಶಿಕ್ಷಕರಾಗಿ ಬರಲು ಹಲವರು ಹಿಂದೇಟು ಹಾಕಿರುವುದೇ ಇಲ್ಲಿನ ಖಾಯ ಶಿಕ್ಷಕರ ಸಮಸ್ಯೆಗೆ ಮುಖ್ಯ ಕಾರಣ. 10 ವರ್ಷಗಳ ಹಿಂದೆ ಈ ಶಾಲೆಯಲ್ಲಿ ಇಬ್ಬರು ಖಾಯಂ ಶಿಕ್ಷಕರಿದ್ದರು. ಆಗ ವಿದ್ಯಾರ್ಥಿಗಳು ಕೂಡ ತುಂಬಾ ಇದ್ದರು. ಈಗ ಶಿಕ್ಷಕರಿಲ್ಲದೆ, ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಶಿಕ್ಷಣ ಇಲಾಖೆಯು ಖಾಯಂ ಶಿಕ್ಷಕರನ್ನು ನಿಯೋಜಿಸಲು ಮುಂದಾದರೂ ಇಲ್ಲಿಗೆ ಯಾರೂ ಕೂಡ ಬರಲು ಒಪ್ಪುವುದಿಲ್ಲ. ಹಾಗಾಗಿ ಆಗಾಗ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನೇ ನಿಯೋಜಿಸಬೇಕಾಗುತ್ತದೆ ಎನ್ನುವುದು ಇಲಾಖೆಯ ಸಮಜಾಯಿಷಿ.

ಖಾಯಂ ಶಿಕ್ಷಕರು ಬರಲಿ
ಪದೇ ಪದೇ ಶಿಕ್ಷಣಾಧಿಕಾರಿಗಳು ಎರಡು ಮೂರು ತಿಂಗಳು ಬಿಟ್ಟು ನಿವೃತ್ತರಾಗುವ ಪಕ್ಕದ ಶಾಲೆಯ ಶಿಕ್ಷಕರನ್ನು ನಮ್ಮ ಶಾಲೆಗೆ ನೀಡಿ ಕೇವಲ ತಾತ್ಕಾಲಿಕ ಪರಿಹಾರ ನೀಡಿ ಸಮಾಧಾನ ಮಾಡಲು ನೋಡುತ್ತಿದ್ದಾರೆ. ಈ ಬಗ್ಗೆ ನಾವು ಶಿಕ್ಷಣ ಸಚಿವರಿಗೂ ಮನವಿ ಮಾಡಿದ್ದು, ಈಗ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಈ ಶಾಲೆಗೂ ಕೂಡ ಖಾಯಂ ಶಿಕ್ಷಕರನ್ನು ಕೊಡುವಂತಾಗಲಿ.
– ಆದರ್ಶ್‌ ಕೆಲ, ಊರವರು

ತಾತ್ಕಾಲಿಕ ನಿಯೋಜನೆ
ಅಲ್ಲಿನ ಮಕ್ಕಳಿಗೆ ಈಗ ತೊಂದರೆಯಾಗ ದಂತೆ ಸಮೀಪದ ಶಾಲೆಯ ಶಿಕ್ಷಕರೊಬ್ಬ ರನ್ನು ತಾತ್ಕಲಿಕವಾಗಿ ನಿಯೋಜಿಸಲಾಗಿದೆ. ಒಬ್ಬರು ಗೌರವ ಶಿಕ್ಷಕರಿದ್ದಾರೆ. ಶಿಕ್ಷಕರ ನೇಮಕಾತಿ, ನಿಯೋಜನೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅದರಲ್ಲಿ ಈ ಶಾಲೆಗೆ ಒಬ್ಬರು ಖಾಯಂ ಶಿಕ್ಷಕರನ್ನು ನೀಡುವ ಕುರಿತಂತೆ ಗಮನಹರಿಸಲಾಗುವುದು.
– ಅಶೋಕ ಕಾಮತ್‌, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next