ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನಾಡದೆಯೂ, ಚಿತ್ರದ ಬಗ್ಗೆ ಪ್ರಚಾರ ಪಡೆಯುವುದು ಅಷ್ಟು ಸುಲಭವಲ್ಲ. ಕನ್ನಡದಲ್ಲಿ ಕೆಲವರಿಗಷ್ಟೇ ಈ ವಿದ್ಯೆ ಸಿದ್ಧಿಸಿದ್ದು, ಆ ಪೈಕಿ ಗುರು ದೇಶಪಾಂಡೆ ಸಹ ಒಬ್ಬರು. ಅವರು ಕೆಳೆದ ಕೆಲವು ತಿಂಗಳುಗಳಿಂದ ತಮ್ಮ ಹೊಸ ಚಿತ್ರ “ಸಂಹಾರ’ದಿಂದ ಸುದ್ದಿಯಾಗುತ್ತಲೇ ಇದ್ದಾರೆ. ಬರೀ ಫಸ್ಟ್‌ಲುಕ್, ಟೀಸರ್, ಟ್ರೇಲರ್, ಪೋಸ್ಟರ್ ಬಿಡುಗಡೆ ಅಂತ ಚಿತ್ರವು ಸುದ್ದಿಯಾಗುತ್ತಿದೆಯೇ ಹೊರತು, ಅದರ ಸಾರದಿಂದಲ್ಲ.
ಚಿರಂಜೀವಿ ಸರ್ಜಾ ಬರ್ತ್‌ಡೇಗೊಂದು ಟ್ರೇಲರ್, ಚಿಕ್ಕಣ್ಣ ಬರ್ತ್‌ಡೇಗೊಂದು ಟೀಸರ್, ಹರಿಪ್ರಿಯ ಹುಟ್ಟುಹಬ್ಬಕ್ಕೊಂದು ಪೋಸ್ಟರ್, ಕಾವ್ಯ ಶೆಟ್ಟಿ ಹುಟ್ಟಿದಹಬ್ಬಕ್ಕೊಂದು ಫೋಟೋ … ಹೀಗೆ ಇಷ್ಟರಲ್ಲೇ ಸುದ್ದಿ ಮಾಡುತ್ತಿರುವ ಅವರು, “ಸಂಹಾರ’ ಬಗ್ಗೆ ಬರೆಯೋಕೆ ಏನನ್ನೂ ಹೇಳಿಕೊಂಡಿಲ್ಲ. ಯಾಕೆ ಈ ಮಾತು ಅಂದರೆ, ಇತ್ತೀಚೆಗೆ ಬಿಡುಗಡೆಯಾದ ಆಡಿಯೋ ಸಿಡಿ ಕಾರ್ಯಕ್ರಮ ಕೂಡ ಅದಕ್ಕೆ ಹೊರತಾಗಿರಲಿಲ್ಲ.
ಧ್ರುವ ಸರ್ಜಾ ಬಂದು ಆಡಿಯೋ ಸಿಡಿ ಬಿಡುಗಡೆ ಮಾಡಿದರು ಅನ್ನೋದೇ ಅಂದಿನ ಹೈಲೈಟ್. ಅದು ಬಿಟ್ಟರೆ, ಆಡಿಯೋ ಬಿಡುಗಡೆ ಸಮಾರಂಭ ಸಹ ಚಿತ್ರದ ಇನ್ನಿತರ ಸಮಾರಂಭಗಳ ತರಹ ನೀರಸವಾಗಿತ್ತು. ಅಂದು ಧ್ರುವ ಬಿಟ್ಟರೆ ಆ ಕಾರ್ಯಕ್ರಮದಲ್ಲಿ ವಿತರಕ, ನಿರ್ಮಾಪಕ ಜಾಕ್ ಮಂಜು, ಯೋಗಿ ದ್ವಾರಕೀಶ್, ಕೆ. ಮಂಜು, ಚಿರು, ಕಾವ್ಯ, ಗುರು ದೇಶಪಾಂಡೆ ಸೇರಿದಂತೆ ಹಲವರು ಹಾಜರಿದ್ದರು. ಝೇಂಕಾರ್ ಸಂಸ್ಥೆ ಹಾಡುಗಳನ್ನು ಹೊರತಂದಿದೆ.
ಚಿತ್ರದಲ್ಲಿ ಜಯಂತ್ ಕಾಯ್ಕಿಣಿ ಅವರು ಬರೆದಿರುವ “ಏನ್ ಅಚ್ಚರಿಯಾಗಿದೆಯೋ …’ ಹಾಡಿಗೆ ಪುನೀತ್ ರಾಜಕುಮಾರ್ ದನಿಯಾಗಿದ್ದಾರೆಂಬುದು ಚಿತ್ರದ ಪ್ಲಸ್ ಎನ್ನಬಹುದು. ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಹಿನ್ನೆಲೆ ಸಂಗೀತ ನಿರ್ದೇಶಕರಿಗೆ ಹಾಲಿವುಡ್ ರೇಂಜ್‌ಗಿದೆಯಂತೆ. ಬೆಂಗಳೂರು, ಮಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದರೆ, ರವಿವರ್ಮ ಸಾಹಸವಿದೆ. ಈ ಚಿತ್ರಕ್ಕೆ ಎ. ವೆಂಕಟೇಶ್ ಮತ್ತು ಆರ್. ಸುಂದರ ಕಾಮರಾಜು ನಿರ್ಮಾಪಕರು.