ಬಳ್ಳಾರಿ: ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಕುರಿತು ಶಾಸಕ ಜಿ.ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಕನಕ ದುರ್ಗಮ್ಮ ದೇವಸ್ಥಾನ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಆದರೆ ಕೋವಿಡ್ ಸಂದರ್ಭದಲ್ಲಿ ಇದನ್ನು ವ್ಯಕ್ತಪಡಿಸುವ ಅವಶ್ಯಕತೆ ಇರಲಿಲ್ಲ. ರಾಜ್ಯದ ಸಿಎಂ ಆಗಿ ಯಡಿಯೂರಪ್ಪನವರೇ ಮುಂದುವರೆಯುವುದು ಒಳ್ಳೆಯದು ಎಂದ ಅವರು, ಬಳ್ಳಾರಿಯಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ. ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀರಾಮುಲುಗೆ ಉಸ್ತುವಾರಿ ನೀಡಲಿ: ಇದೇ ವೇಳೆ ಬಳ್ಳಾರಿ ಜಿಲ್ಲೆ ವಿಭಜನೆಯಾದರೂ ಬಳ್ಳಾರಿ ಜಿಲ್ಲಾ ಉಸ್ತುವರಿ ಸಚಿವರನ್ನು ಬದಲಾವಣೆ ಮಾಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರನ್ನು ಬದಲಾವಣೆ ಮಾಡಿ ಸಚಿವ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ನೀಡಬೇಕು. ಇಲ್ಲದಿದ್ದರೆ ಬದಲಾಣೆಯಾಗುವ ವರೆಗೂ ಬಿಡುವುದಿಲ್ಲ. ಅದಕ್ಕಾಗಿ ಉಗ್ರ ಹೋರಾಟ ಮಾಡಿಯಾದರೂ ಬದಲಾವಣೆ ಮಾಡುತ್ತೇವೆ ಎಂದು ಆನಂದ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಗುಂಪಿನಲ್ಲಿ ಅಲ್ಲ, ಒಬ್ಬೊಬ್ಬರಾಗಿ ಬನ್ನಿ: ಶಾಸಕರಿಗೆ ಅರುಣ್ ಸಿಂಗ್ ತಾಕೀತು
ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದ್ದೇ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಸೋಲಲು ಕಾರಣ. ಇದಕ್ಕೆ ನೇರವಾಗಿ ಆನಂದ ಸಿಂಗ್ ಕಾರಣ.. ಚುನಾವಣೆ ವೇಳೆ ಉಸ್ತುವಾರಿ ಬದಲಾವಣೆ ಮಾಡಿದ್ದರೆ ಪಾಲಿಕೆಯಲ್ಲಿ ಗೆಲ್ಲುತ್ತಿದ್ದೇವು ಎಂದು ತಿಳಿಸಿದರು.
ದೇವರ ಕೃಪೆ ಇದ್ದರೆ ಸಚಿವನಾಗುವೆ. ಸಚಿವ ಸ್ಥಾನಕೊಟ್ಟರೆ ನಿಭಾಯಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.