Advertisement

ಕೋಟ್ಯಂತರ ರೂ. ಚಿನ್ನಾಭರಣ ವಂಚಿಸಿ ಸಿಕ್ಕಿಬಿದ್ದ ಸೋಮಣ್ಣ

10:37 AM Apr 04, 2018 | Team Udayavani |

ಬೆಂಗಳೂರು: ನಾನು ಎಂಎಲ್‌ಸಿ ಸೋಮಣ್ಣ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡು ಸಾಮೂಹಿಕ ವಿವಾಹದ ನೆಪದಲ್ಲಿ ಚಿನ್ನದಂಗಡಿಯಿಂದ 1.88 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಸಹಕಾರ ನಗರ ನಿವಾಸಿ ಎಲ್‌. ಸೋಮಣ್ಣ (39) ಬಂಧಿತ. ಕೆಲ ತಿಂಗಳ ಹಿಂದೆ ಬಸವೇಶ್ವರನಗರದ ಬಟ್ಟೆ ಅಂಗಡಿ ಮಾಲೀಕರಾದ ಸೂರಜ್‌ ಮತ್ತು ಚಿನ್ನದಂಗಡಿ ಮಾಲೀಕ ಧೀರಜ್‌ರಿಗೆ ವಿಧಾನಪರಿಷತ್‌ ಸದಸ್ಯ ಎಂದು ಪರಿಚಯಿಸಿಕೊಂಡು 1.88 ಕೋಟಿ ರೂ. ವಂಚಿಸಿದ್ದ. ಈ ಸಂಬಂಧ ಇಬ್ಬರೂ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್‌ ತಿಳಿಸಿದ್ದಾರೆ.

ಮೈಸೂರು ಮೂಲದ ಆರೋಪಿ ಕೆಲ ವರ್ಷಗಳ ಹಿಂದೆ ಸಹಕಾರನಗರಕ್ಕೆ ಬಂದು ನೆಲೆಸಿದ್ದು, ಬಳಿಕ ಸ್ನೇಹಿತನ ಮೂಲಕ 2017ರ ಜುಲೈನಲ್ಲಿ ಬಟ್ಟೆ ಅಂಗಡಿ ಮಾಲೀಕ ಸೂರಜ್‌ರನ್ನು ಪರಿಚಯಸಿ ಕೊಂಡಿದ್ದ. ಈ ವೇಳೆ ನಾನು ವಿಧಾನ ಪರಿಷತ್‌ ಸದಸ್ಯ ಎಂದು ಹೇಳಿಕೊಂಡಿದ್ದ. ನಂತರ ತನ್ನ ಹುಟ್ಟುಹಬ್ಬದಂದು ಪತ್ನಿ ಮತ್ತು ಮಕ್ಕಳೊಂದಿಗೆ ಅದೇ ಬಟ್ಟೆ ಅಂಗಡಿಯಲ್ಲಿ 30 ಸಾವಿರ ರೂ. ಮೌಲ್ಯದ ಬಟ್ಟೆ ಖರೀದಿಸಿದ್ದ. ಹೀಗೆ ವಿಶ್ವಾಸ ಗಳಿಸಿದ್ದ.

ಕೊಲೆ ಬೆದರಿಕೆ: ನಿಮ್ಮ ಅಂಗಡಿ ಚಿಕ್ಕದಾಗಿದ್ದು, ದೊಡ್ಡ ಅಂಗಡಿ ಮಾಡಿಕೊಳ್ಳಲು ನಮ್ಮ ಟ್ರಸ್ಟ್‌ನಿಂದ ಸಾಲ ಕೊಡುತ್ತೇನೆ ಎಂದು ನಂಬಿಸಿದ್ದ ಆರೋಪಿ, ಈ ಸಂಬಂಧ ಕೆಲ ಚೆಕ್‌, ಬಾಂಡ್‌ ಪೇಪರ್‌ ಹಾಗೂ ಗುರುತಿನ ಚೀಟಿ ಪಡೆದುಕೊಂಡಿದ್ದ. ಅನಂತರ ಟ್ರಸ್ಟ್‌ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸಿದ್ದು, 6 ಗ್ರಾಂ ತೂಕದ 187 ತಾಳಿಗಳು, 30 ಗ್ರಾಂ ತೂಕದ ಚಿನ್ನದ ಬಿಸ್ಕತ್‌ಗಳು, 50 ಗ್ರಾಂ ತೂಕದ 5 ಬಿಸ್ಕತ್‌ ಬೇಕಿದೆ. ನೀವು ಇವುಗಳನ್ನು ಪೂರೈಸಿದರೆ ಕೂಡಲೇ 3.5 ಕೋಟಿ ರೂ. ಸಾಲ ಮಂಜೂರು ಮಾಡುತ್ತೇನೆ ಎಂದು ಹೇಳಿದ್ದ. 

ಇದನ್ನು ನಂಬಿದ ಸೂರಜ್‌, ನೆರೆ ರಾಜ್ಯದಿಂದ ಆಭರಣ ತರಿಸಿ ಜ.22ರಂದು ಸೋಮಣ್ಣಗೆ ನೀಡಿದ್ದರು. ಕೆಲ ದಿನಗಳು ಕಳೆದರೂ ಸಾಲದ ಹಣ ಬಾರದಿದ್ದಾಗ ಅನುಮಾನಗೊಂಡು ಪ್ರಶ್ನಿಸಿದಾಗ ಆರೋಪಿ ಸೂರಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ. 

Advertisement

ಧೀರಜ್‌ಗೂ ವಂಚನೆ: ಅದೇ ರೀತಿ ಧೀರಜ್‌ಗೂ ಆರೋಪಿ ವಂಚಿಸಿದ್ದಾನೆ. ಸಾಮೂಹಿಕ ವಿವಾಹಕ್ಕೆ ತಾಳಿ, ಮುಖ್ಯಅತಿಥಿಗಳಿಗೆ ಉಡುಗೊರೆ ಕೊಡಲು ಚಿನ್ನದ ಬಿಸ್ಕತ್‌ ನೀಡಬೇಕು ಎಂದು ಹೇಳಿಕೊಂಡಿದ್ದ. ಅದರಂತೆ ಧೀರಜ್‌ ಚಿನ್ನಾಭರಣಗಳನ್ನು ಬೇರೆಡೆ ಅಡಮಾನ ಇಟ್ಟು ಫೆ. 19ರಂದು ಸೋಮಣ್ಣಗೆ ತಾಳಿ ಮತ್ತು ಚಿನ್ನದ ಬಿಸ್ಕೆಟ್‌ ಕೊಟ್ಟಿದ್ದರು. ಹಣ ಕೇಳಿದಾಗ ಪ್ರಾಣಬೆದರಿಕೆ ಹಾಕಿದ್ದ.

ಕೆಲಸದ ಆಮಿಷವೊಡ್ಡಿ ಮೋಸ ತಾನು ವಿಧಾನ ಪರಿಷತ್‌ ಸದಸ್ಯ ಎಂದು ಹೇಳಿಕೊಂಡು ಆರೋಪಿ ಉದ್ಯೋ
ಗಾಂಕ್ಷಿಗಳಿಗೆ ಸರ್ಕಾರಿ ಕೆಲಸ ಹಾಗೂ ಕೆಲವರಿಗೆ ನಿವೇಶನ ಅಥವಾ ಬ್ಯಾಂಕ್‌ನಲ್ಲಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ. ಈತನ ವಿರುದ್ಧ ವೈಯಾಲಿ ಕಾವಲ್‌, ಕೊಡಿಗೆಹಳ್ಳಿ, ಇತರೆಡೆ 7ಕ್ಕೂ ಹೆಚ್ಚು ದೂರು ದಾಖಲಾಗಿವೆ

ನೇರವಾಗಿ ಭೇಟಿ ಆಗುವುದಿಲ
ವಿಧಾನಪರಿಷತ್‌ನ ಬಿಜೆಪಿ ಸದಸ್ಯ ವಿ. ಸೋಮಣ್ಣ ಹೆಸರನ್ನು ದುರುಪಯೋಗ ಪಡಿಸಿಕೊಂಡ ಆರೋಪಿ, ನಾನು ಎಂಎಲ್‌ಸಿ ಸೋಮಣ್ಣ ಎಂದ ಷ್ಟೇ ಪರಿಚಯಿಸಿಕೊಳ್ಳುತ್ತಿದ್ದ. ಆದರೆ, ನೇರವಾಗಿ ಭೇಟಿಯಾಗು ತ್ತಿರಲಿಲ್ಲ. ಕೇವಲ ಮೊಬೈಲ್‌ನಲ್ಲಿ ಮಾತ ನಾಡುತ್ತಿದ್ದ. ಸೋಮಣ್ಣ ಎಂದರೆ ವಿ. ಸೋಮಣ್ಣ ಎಂದು ಭಾವಿಸಿ ಜನ ಮೋಸ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣೆಗೆ ದೂರು ನೀಡಿ
ಆರೋಪಿ ಸೋಮಣ್ಣನಿಂದ ಮೋಸ ಹೋದವರು ಬಸವೇಶ್ವರನಗರ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಡಿಸಿಪಿ ರವಿ ಡಿ. ಚನ್ನಣ್ಣನವರ್‌ ಮನವಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಲು ದೂರವಾಣಿ ಸಂಖ್ಯೆ 080-22942516, ಪಶ್ಚಿಮ ವಿಭಾಗ ಕಂಟ್ರೋಲ್‌ ರೂಂ ನಂ- 22943232 ಮತ್ತು ಮೊಬೈಲ್‌ ನಂ. 94808 01729
ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next