Advertisement
ಕೇಂದ್ರ ಸರ್ಕಾರ 2022ರ ಫೆಬ್ರವರಿಯಲ್ಲಿ ರಾಜ್ಯದ ಬೇಲೂರು, ಹಳೇಬೀಡು, ಸೋಮನಾಥಪುರ ಚನ್ನಕೇಶವ ದೇಗುಲವನ್ನು ಯುನೆಸ್ಕೋಗೆ ನಾಮನಿರ್ದೇಶನ ಮಾಡಿತ್ತು. ಇದೀಗ ಈ ಅತ್ಯದ್ಭುತ ಶಿಲ್ಪಕಲೆ ಹೊಂದಿರುವ ಸೋಮನಾಥಪುರ ಚನ್ನಕೇಶವ ದೇಗುಲಕ್ಕೆ ಯುನೆಸ್ಕೋ ಅಧಿಕೃತ ಮುದ್ರೆ ಹೊತ್ತಿದೆ. ಹೊಯ್ಸಳರು ನಿರ್ಮಿಸಿರುವ ಈ ದೇಗುಲ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದು ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಅಸಾಧಾರಣ ಹಾಗೂ ಆಕರ್ಷಕ ವಾಸ್ತುಶಿಲ್ಪವನ್ನೂ ಒಳಗೊಂಡಿದೆ.
Related Articles
Advertisement
ಯುನೆಸ್ಕೋ ಪ್ರಕ್ರಿಯೆ ಹೇಗಿತ್ತು?: ಕೇಂದ್ರ ಸರ್ಕಾರ 2022ರ ಫೆಬ್ರವರಿಯಲ್ಲಿ ಯುನೆಸ್ಕೋ ಪಟ್ಟಿಗೆ ಸೋಮನಾಥಪುರ ಚನ್ನಕೇಶವ ದೇವಾಲಯ, ಬೇಲೂರು ಹಾಗೂ ಹಳೇಬಿಡು ಚನ್ನಕೇಶವ ದೇಗುಲವನ್ನು ಕೇಂದ್ರ ಸರ್ಕಾರ ಶಿಫಾರಸು ಮಾಡಿತ್ತು. ಬಳಿಕ ಯುನೆಸ್ಕೋ ತಜ್ಞರ ತಂಡ ಈ ಐತಿಹಾಸಿಕ ತಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೌಲ್ಯಮಾಪನ ನಡೆಸಿತ್ತು. 2023ರ ಮಧ್ಯಭಾಗದಲ್ಲಿ ಈ ದೇಗುಲಗಳ ಬಗ್ಗೆ ಯುನೆಸ್ಕೋ ದಸ್ತಾವೇಜು ಸಿದ್ಧಪಡಿಸಿತ್ತು. ರಿಯೋದಲ್ಲಿ ಇತ್ತೀಚೆಗೆ ನಡೆದ ಯುನೆಸ್ಕೋ ಸಭೆಯಲ್ಲಿ ಅಂತಿಮ ಘೋಷಣೆ ಪ್ರಕಟಗೊಂಡಿದೆ. ಈ 3 ದೇಗುಲಗಳು ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ್ದು, ಇಲ್ಲಿನ ಶಿಲ್ಪಕಲೆ ವಿದೇಶಿಗರ ಮೆಚ್ಚುಗೆಗೆ ಪಾತ್ರವಾಗಿವೆ.
ಎಲ್ಲಿದೆ ಸೋಮನಾಥಪುರ ಕೇಶವ ದೇಗುಲ?: ಈ ದೇಗುಲ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿದೆ. ಸೋಮನಾಥಪುರ ಗ್ರಾಮೀಣ ಪ್ರದೇಶವಾಗಿದ್ದು ಚನ್ನಕೇಶವ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇಗುಲದ ಸಮೀಪ ಕಾವೇರಿ ನದಿ ಹರಿಯ ಲಿದ್ದು, ರಮಣೀಯ ಪ್ರಕೃತಿ ಸೌಂದರ್ಯ ಹೊಂದಿದೆ. ತಾಲೂಕು ಕೇಂದ್ರದಿಂದ 10 ಕಿ.ಮೀ.ದೂರದಲ್ಲಿದ್ದರೆ, ಮೈಸೂರು ನಗರದಿಂದ 40 ಕಿ.ಮೀ. ಹಾಗೂ ಬೆಂಗಳೂರಿನಿಂದ 130 ಕಿ.ಮೀ. ದೂರದಲ್ಲಿದೆ. ದೇಗುಲಗಳ ತೊಟ್ಟಿಲು ಎಂದು ಕರೆಯಲ್ಪಡುವ ಈ ತಿ.ನರಸೀಪುರ ತಾಲೂಕು ಪ್ರವಾಸಿ ತಾಣಕ್ಕೆ ಹೇಳಿ ಮಾಡಿಸಿದಂತಿದೆ. ತಾಲೂಕಿನಲ್ಲಿ ಮೂಗೂರು ತ್ರಿಪುರ ಸುಂದರಿ ದೇಗುಲ, ತ್ರಿವೇಣಿ ಸಂಗಮ, ತಲಕಾಡು(ಪಂಚಲಿಂಗ ದರ್ಶನ), ಮುಡುಕತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಗುಂಜಾ ನರಸಿಂಹ ದೇವಸ್ಥಾನ ಇದೆ. ಜತೆಗೆ ತ್ರಿವೇಣಿ ಸಂಗಮದಲ್ಲಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯಲಿದ್ದು, ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿದೆ.
ಕಾವೇರಿ, ಕಪಿಲಾ ನದಿ ಹಾಗೂ ಸ್ಫಟಿಕ ಸರೋವರ ಹರಿಯುವುದರಿಂದ ತ್ರಿವೇಣಿ ಸಂಗಮ ಎಂದು ಕರೆಯಲಾಗಿದೆ. ಸ್ಫಟಿಕ ಸರೋವರ ಕಣ್ಣಿಗೆ ಕಾಣುವುದಿಲ್ಲ. ಅದೃಶ್ಯವಾಗಿ ಹರಿಯುತ್ತದೆ. ಈ ತ್ರಿವೇಣಿ ಸಂಗಮ ಕಾಶಿಗಿಂತ ಗುಲಗಂಜಿ ತಕ್ಕಕ್ಕಿಂತ ಹೆಚ್ಚು ಪವಿತ್ರ ಕ್ಷೇತ್ರವಾಗಿದೆ ಎಂಬ ಪ್ರತೀತಿ ಇದೆ. ಒಂದು ದಿನದಲ್ಲಿ ಈ ಎಲ್ಲ ದೇಗುಲ ಹಾಗೂ ಪ್ರವಾಸಿ ತಾಣ ವೀಕ್ಷಿಸಬಹುದಾಗಿದೆ.
ತಾಲೂಕಿನ ಸೋಮನಾಥಪುರದ ಶ್ರೀಚನ್ನಕೇಶವ ದೇವಾಲಯ ವಿಶ್ವಪಾರಂಪರಿಕ ತಾಣದ ಪಟ್ಟಿಗೆ ಸೇರ್ಪಡೆಯಾಗಿರುವುದು ಬಹಳ ಹೆಮ್ಮೆಯ ವಿಷಯ. ನಾನು ಶಾಸಕನಾಗಿದ್ದ ಅವಧಿಯಲ್ಲಿ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಒಂದು ಕಡೆ ಸಂತೋಷವಾದರೂ ಮತ್ತೂಂದೆಡೆ ಸ್ಥಳೀಯ ನಿವಾಸಿಗಳಿಗೆ ಇದರಿಂದ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ, ಸರ್ಕಾರ ಗಮನಹರಿಸಬೇಕು. – ಎಂ.ಅಶ್ವಿನ್ ಕುಮಾರ್, ಮಾಜಿ ಶಾಸಕ
ನಾಡಿನ ಹೆಮ್ಮೆಯ ಶಿಲ್ಪಕಲೆಗೆ ಹೆಸರಾದ ಸೋಮನಾಥಪುರದ ದೇಗುಲ ಜಾಗತಿಕ ಮಾನ್ಯತೆ ಪಡೆದಿರುವುದು ನಿಜಕ್ಕೂ ಸಂತಸ ತಂದಿದೆ. ಆದರೆ ಸೋಮನಾಥಪುರ ಗ್ರಾಮ ಚಿಕ್ಕದಿರುವುದರಿಂದ ಇಲ್ಲಿನ ಸ್ಥಳೀಯ ಜನರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. – ಕೆ.ಎನ್.ಪ್ರಭುಸ್ವಾಮಿ, ವಿಚಾರವಾದಿ, ತಿ.ನರಸೀಪುರ
-ಎಸ್.ಬಿ.ಪ್ರಕಾಶ್