ರಬಕವಿ-ಬನಹಟ್ಟಿ: ಈ ಭಾಗದ ಮೂಲ ಸಮಸ್ಯೆಗಳಾದ ತೇರದಾಳದ ಸಾವರಿನ್ ಸುರ‍್ಸ್ನ ಕಬ್ಬಿನ ಬಾಕಿ ಬಿಲ್, ಸಸಾಲಟ್ಟಿ ಏತ ನೀರಾವರಿ ಯೋಜನೆ, ಕಲ್ಲೋಳ್ಳಿ ಏತ ನೀರಾವರಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಧನ ಸಿಗಬೇಕು ಎಂದು ಬೆಳಗಾವಿ ಸುವರ್ಣ ಸೌಧದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದೇವು, ಪ್ರತಿಭಟನಾ ಸ್ಥಳಕ್ಕೆ ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಹಾಗೂ ಸಹಕಾರ ಸಚಿವ ಟಿ. ಸೋಮಶೇಖರ ಆಗಮಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಹೇಳಿದರು.
ಅವರು ಶುಕ್ರವಾರ ರಬಕವಿಯ ನಿರೀಕ್ಷಣಾ ಮಂದಿರದ ಎದಿರು ನಡೆದ ಸುದ್ದಿ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಕ್ಕರೆ ಸಚಿವ ಮುನೇನಕೊಪ್ಪ ಅವರು ಸಮಾರು ಅರ್ಧ ಗಂಟೆಗಳ ಕಾಲ ನಮ್ಮ ಜೊತೆ ಚರ್ಚೆ ಮಾಡಿ, ಜನವರಿ ತಿಂಗಳ ಮೊದಲ ವಾರದಲ್ಲಿ ಒಂದು ಪ್ರತ್ಯೇಕ ಸಭೆ ಮಾಡಿ ಅದರಲ್ಲಿ ನಿಮ್ಮ ಎಲ್ಲ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅದೇ ರೀತಿ ಸಹಕಾರಿ ಸಚಿವ ಎಸ್. ಟಿ. ಸೋಶೇಖರ ಭೇಟಿ ನೀಡಿ ತಮ್ಮ ಸಹಕಾರಿ ಸಂಘದಿಂದ ಅಪೇಕ್ಸ್ ಬ್ಯಾಂಕಿಗೆ ನಿರ್ದೇಶನ ನೀಡುತ್ತೇವೆ. ನಾವು ಹಾಗೂ ಸಕ್ಕರೆ ಸಚಿವರು ಕೂಡಿಕೊಂಡು ಮುಂದಿನ ತಿಂಗಳು ಸಭೆಯನ್ನು ಆಯೋಜನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಹಿನ್ನಲೆಯಲ್ಲಿ ನಾವು ರೈತ ಚಳವಳಿಯನ್ನು ಹಿಂಪಡೆದೆವು ಎಂದರು.
ಈ ಭಾಗದ ಮೂಲ ಯೋಜನೆಯಾಗಿರವ ಸಸಾಲಟ್ಟಿ ಏತ ನೀರಾವರಿ ಯೋಜನೆಯ ಬಗ್ಗೆ ನಮ್ಮ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಭಾಗವಹಿಸುತ್ತಾರೆ ಎಂದು ಬಹಳ ನಿರೀಕ್ಷೆ ಇತ್ತು. ಆದರೆ ಅದು ಆಗಲಿಲ್ಲ. ನಮ್ಮ ಭಾಗದ ಸಚಿವರಾಗಿ, ಉಪಮುಖ್ಯ ಮಂತ್ರಿಗಳಾಗಿ ನಮ್ಮ ಭಾಗದ ಯೋಜನೆಗೆ ಸ್ಪಂದನೆ ನೀಡಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಕುರಿತು ಈ ಭಾಗದ ಜನ ಕೂಡಿಕೊಂಡು ಒತ್ತಡ ಹಾಕುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಬಕವಿ-ಬನಹಟ್ಟಿ ತಾಲೂಕು ಹೊನ್ನಪ್ಪ ಬಿರಡಿ, ತೇರದಾಳ ಮತಕ್ಷೇತ್ರದ ಅಧ್ಯಕ್ಷ ಶ್ರೀಕಾಂತ ಘೂಳನ್ನವರ, ಭೀಮಸಿ ಕರಿಗೌಡರ, ಸುರೇಶ ದೇಸಾಯಿ, ಖಲೀಲ ಮುಲ್ಲಾ, ಬಸೀರ ಜಮಾದಾರ, ಕೆಂಚಪ್ಪ ಕರಿಕಟ್ಟಿ, ಕಾಸಿಂ ಹುದ್ದಾರ ಸೇರಿದಂತೆ ಅನೇಕರು ಇದ್ದರು.