Advertisement

“ಜೋಳ ನೋಂದಣಿ ಸಮಸ್ಯೆ ಪರಿಹರಿಸುವೆ”

01:01 PM Feb 10, 2022 | Team Udayavani |

ಸಿಂಧನೂರು: ಜೋಳ ಖರೀದಿಗೆ ನೋಂದಣಿ ಕೆಲಸ ಆರಂಭಿಸಿದ್ದು, ತಾಂತ್ರಿಕ ತೊಡಕುಗಳಿದ್ದರೆ ಅವುಗಳನ್ನು ಪರಿಹರಿಸಲು ಸೂಚನೆ ನೀಡುವೆ ಎಂದು ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ನಗರದ 40ನೇ ಉಪಕಾಲುವೆ ಮಾರ್ಗದ ರಸ್ತೆ ಸುಧಾರಣೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂಗಾರು-ಮುಂಗಾರು ಬೆಳೆ ನಮೂದು ಮಾಡುವಾಗ ಆಗಿರುವ ಸಮಸ್ಯೆ ನಿವಾರಿಸಲು ತಿಳಿಸುವೆ. ಯಾರೇ ನೋಂದಣಿ ಮಾಡಲು ಹೋದರೂ ಅವರಿಗೆ ಸ್ಪಂದಿಸಬೇಕು. ನೋಂದಣಿಗೆ ಬ್ರೇಕ್‌ ಬಿದ್ದಿದ್ದರೆ, ತಕ್ಷಣವೇ ಪರಿಹರಿಸಲು ತಿಳಿಸುತ್ತೇನೆ. ಪ್ರತಿಯೊಬ್ಬ ರೈತನಿಂದ ಕೇವಲ 20 ಕ್ವಿಂಟಲ್‌ ಜೋಳ ಮಾತ್ರ ಖರೀದಿ ಮಾಡಬೇಕು ಎಂಬ ಷರತ್ತು ತೆಗೆಯುವ ವಿಷಯದಲ್ಲಿ ಈಗಾಗಲೇ ಸರಕಾರದ ಗಮನ ಸೆಳೆದಿರುವೆ. ವಿಧಾನ ಮಂಡಲ ಅಧಿವೇಶನದಲ್ಲಿ ರೈತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದರು.
3 ಕೋಟಿ ರೂ. ವೆಚ್ಚದಲ್ಲಿ ಕೆಲಸ

40ನೇ ಉಪಕಾಲುವೆ ರಸ್ತೆ ಸುಧಾರಣೆ ಬಹುದಿನಗಳ ಬೇಡಿಕೆಯಾಗಿತ್ತು. 7 ಮೀಟರ್‌ ರಸ್ತೆ ಸಿಸಿ ಕಾಮಗಾರಿಯಾಗಲಿದ್ದು, ಎರಡು ಬದಿಯಲ್ಲಿ 10 ಅಡಿ ಅಂತರ ಬಿಟ್ಟು ಕೆಲಸ ಮಾಡಲು ತಿಳಿಸುವೆ. ಈಗಾಗಲೇ ಒತ್ತುವರಿ ತೆರವುಗೊಳಿಸುವುದಕ್ಕಾಗಿ ಗುರುತು ಹಾಕಲಾಗಿದೆ. ಕಾಲುವೆ ಎಡ-ಬಲದಲ್ಲಿನ 99 ಅಡಿ ರಸ್ತೆಯನ್ನು ಸ್ವಯಂ ಪ್ರೇರಿತವಾಗಿ ತೆರವು ಮಾಡಿಕೊಳ್ಳಲು ಮನವಿ ಮಾಡುತ್ತೇನೆ. ಇಲ್ಲವಾದರೆ, ಇಲಾಖೆ ಅಧಿಕಾರಿಗಳು ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ಉಪಾಧ್ಯಕ್ಷ ಮುರ್ತುಜಾ ಹುಸೇನ್‌, ಜೆಡಿಎಸ್‌ ಮುಖ್ಯಸಂಚಾಲಕ ಬಿ.ಹರ್ಷ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ವಿಎಸ್‌ ಎಸ್‌ಎನ್‌ ಮಾಜಿ ಅಧ್ಯಕ್ಷ ಅಮರೇಶಪ್ಪ ಮೈಲಾರ್‌, ಅಲ್ತಾಪ್‌ ಸಾಹುಕಾರ್‌, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಂ.ಡಿ. ನದಿಮುಲ್ಲಾ, ತಾಲೂಕು ನಗರ ಘಟಕದ ಅಧ್ಯಕ್ಷ ಕೆ.ವೆಂಕಟೇಶ್‌, ನಗರ ಯುವ ಘಟಕದ ಅಧ್ಯಕ್ಷ ಅಜಯ್‌ ದಾಸರಿ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ್‌, ದಾಸರಿ ಸತ್ಯನಾರಾಯಣ, ಮುನಿರ್‌ಪಾಷಾ, ವೆಂಕೋಬ ಕಲ್ಲೂರು, ವೆಂಕಟೇಶ್‌ ನಂಜಲದಿನ್ನಿ ಸೇರಿದಂತೆ ಅನೇಕರು ಇದ್ದರು.

Advertisement

ಈ ವಿವಾದ ಯಾಕೆ ಗೊತ್ತಾಗುತ್ತಿಲ್ಲ?

ಹಿಜಾಬ್‌ ವಿವಾದವನ್ನು ಯಾಕೆ ಎತ್ತಿದ್ದಾರೋ ಗೊತ್ತಿಲ್ಲ. ವಿಷಯ ಕೋರ್ಟ್‌ ಮೆಟ್ಟಿಲೇರಿದೆ. ಅದು ಇತ್ಯರ್ಥವಾಗುವ ತನಕ ಎಲ್ಲರೂ ಶಾಂತಿಯುತವಾಗಿ ವರ್ತಿಸಬೇಕು ಎಂದು ಶಾಸಕ ವೆಂಕಟರಾವ್‌ ನಾಡಗೌಡ ಮನವಿ ಮಾಡಿದರು. ಕಾಲೇಜುಗಳಿಗೆ ಡ್ರೆಸ್‌ ಕೋಡ್‌ ಇಲ್ಲ. ಗಲಾಟೆ ಪ್ರಾರಂಭವಾಗಿ 3 ದಿನ ರಜೆ ಘೋಷಣೆ ಮಾಡಲಾಗಿದೆ. ಎಲ್ಲ ಸಮಾಜದ ಮುಖಂಡರಿಗೆ ಮನವಿ ಮಾಡುತ್ತೇನೆ. ಇಂತಹ ವಿಷಯದಲ್ಲಿ ರಾಜಕೀಯ ಬೇಡ ಎಂದು ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next