ಕೋಲಾರ: ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ 2009 ರಲ್ಲಿ ನಮ್ಮ ರಾಜ್ಯದ ಹುಬ್ಬಳ್ಳಿ ನಗರದಲ್ಲಿ ಸ್ಥಾಪಿತವಾಗಿದ್ದು, ಈ ವಿಶ್ವವಿದ್ಯಾನಿಲಯದಡಿ ಸುಮಾರು 96 ಕಾನೂನು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ನೂರಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಕಾಲೇಜುಗಳ ಪೈಕಿ ಸುಮಾರು 50 ಕ್ಕೂ ಅಧಿಕ ಕಾಲೇಜುಗಳು ಅತಿ ಹೆಚ್ಚಿನ ಪ್ರವೇಶಾತಿಯೊಂದಿಗೆ ಬೆಂಗಳೂರು ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾನಾ ಬಗೆಯ ಆಡಳಿತಾತ್ಮಕ ಸಮಸ್ಯೆಗಳಿಂದ ಈ ಭಾಗದ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಕಾನೂನು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದರು.
ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿಗೆ ಸ್ಪಂದಿಸಬೇಕಾದ ವಿಶ್ವವಿದ್ಯಾನಿಲಯ ಆಡಳಿತ ಕೇಂದ್ರಗಳು ಬೆಂಗಳೂರು ವಲಯದಿಂದ ಸುಮಾರು 500 ಕೀ.ಮೀ.ಗೂ ದೂರದಲ್ಲಿರುವುದರಿಂದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕೂಡಲೇ ಸ್ಪಂದನೆ ಸಿಗುತ್ತಿಲ್ಲ. ವಿದ್ಯಾರ್ಥಿಗಳು ಸಾಕಷ್ಟು ಬಾರಿ ಮೌಲ್ಯಮಾಪನದಲ್ಲಿನ ದೋಷಗಳ ಬಗ್ಗೆ ವಿಶ್ವನಿಲಯದ ಗಮನಕ್ಕೆ ತಂದರೂ ಸಹ ಯಾವುದೇ ಪ್ರತಿಫಲ ಸಿಗದೇ ಪರದಾಡುತ್ತಿದ್ದಾರೆ.
ಮರು ಮೌಲ್ಯಮಾಪನ ಚಾಲೆಂಜಿಂಗ್ ಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಗಳ ಪ್ರತಿಗಳಿಗೆ ಹಾಗೂ ಇತ್ಯಾದಿ ವಿಷಯಗಳಿಗೆ ಸಲ್ಲಿಸಿದ ಅರ್ಜಿಗಳನ್ನು ಸರಿಯಾಗಿ ಮೌಲ್ಯಯುತವಾಗಿ ಪರಿಗಣಿಸದೇ ಇರುವುದು ಹಾಗೂ ಮೌಲ್ಯಮಾಪನ ಸರಿಯಾಗಿ ನಡೆಸದೇ ಇರುವುದು, ಉತ್ತರ ಪತ್ರಿಕೆಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು ಸಹ ವಿಶ್ವವಿದ್ಯಾಲಯ ಕೆಲವು ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನೇ ನೀಡದ ಕಾರಣ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿದೆ ಎಂದರು.
ಒಟ್ಟಾರೆ, ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯವು ಹಲವು ಸಮಸ್ಯೆಗಳ ಆಗರವಾಗಿದ್ದು, ಕಾನೂನು ಸಮುದಾಯದ ಆಶೋತ್ತರಗಳನ್ನು ಹಿಡೇರಿಸುವಲ್ಲಿ ನಿಷ್ಕ್ರಿಯವಾಗಿದೆ. ನೂರಾರು ಕನಸನ್ನು ಹೊತ್ತು ಸಮಾಜದ ಒಳಿತಗಾಗಿ ಕಾನೂನು ಪದವಿಯನ್ನು ಪಡೆಯಲು ಹೊರಟ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕರ್ನಾಟಕ ಕಾನೂನು ವಿವಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಬೇಕೆಂದರು.
ನಿಯೋಗದಲ್ಲಿ ಪರಿಷತ್‌ನ ಸಹ ಸಂಚಾಲಕ ಸುನೀಲ್‌ಕುಮಾರ್, ಚಂದ್ರಶೇಖರ್, ಚರಣ್, ಅಭಿಮ, ಅವಿನಾಶ್, ಭಾರ್ಗವ್, ಗೋವರ್ಧನ್ ಇನ್ನಿತರಿದ್ದರು.