ಬೀದರ: ಪ್ರಸಕ್ತ ಶೈಕ್ಷಣಿಕ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ತೀವ್ರ ಗೊಂದಲ, ಆತಂಕದಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ ಎಂದು ಅತಿಥಿ ಉಪನ್ಯಾಸಕರ ಒಕ್ಕೂಟ ದೂರಿದೆ.
ಜಿಲ್ಲಾಧ್ಯಕ್ಷ ಅನಿಲಕುಮಾರ ಶಿಂಧೆ ನೇತೃತ್ವದಲ್ಲಿ ಶುಕ್ರವಾರ ಪ್ರಮುಖರು ಕಲಬುರಗಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ಉನ್ನತ ಶಿಕ್ಷಣ ಸಚಿವರು ಮತ್ತು ಸಿಎಂಗೆ ಬರೆದ ಮನವಿ ಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 430 ಪದವಿ ಕಾಲೇಜುಗಳಿದ್ದು ಸುಮಾರು 12 ಸಾವಿರಕ್ಕಿಂತ ಅಧಿಕ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಫೆಬ್ರವರಿಯಯಲ್ಲಿ ಮೆರಿಟ್ ಕೌನ್ಸಿಲಿಂಗ್ ಮಾಡಿ ನೇಮಕಾತಿ ಮಾಡಿಕೊಳ್ಳಲಾಗಿದ್ದು, 10 ತಿಂಗಳ ಅವಧಿಗಾಗಿ ಶೈಕ್ಷಣಿಕ ಸಾಲಿನಲ್ಲಿ ಗೌರವ ನೀಡುವುದು ಎಂಬ ಸುತ್ತೋಲೆ ಹೊರಡಿಸಿ ಉಪನ್ಯಾಸಕರುಗಳ ಸೇವೆಯನ್ನು ಬಳಸಿಕೊಂಡಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳ ಸೇವೆ ವಿವಿಗಳ ಶೈಕ್ಷಣಿಕ ಅವಧಿಗೆ ಅನುಗುಣವಾಗಿ ಸೇವೆ ತೆಗೆದುಕೊಳ್ಳಲಾಗುವುದು ಎಂಬುದಾಗಿ ಆಯುಕ್ತರು ಆದೇಶ ಹೊರಡಿಸಿರುತ್ತಾರೆ ಎಂದಿದ್ದಾರೆ.
ಈಗಾಗಲೇ ಹಲವಾರು ವಿವಿಗಳ ಶೈಕ್ಷಣಿಕಾವಧಿ ಮುಕ್ತಾಯಗೊಂಡು 2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗಿವೆ. ಆದರೆ, ಈ ಹಿಂದಿನ ಸಾಲಿನಲ್ಲಿ ನೇಮಕಗೊಂಡ ಅತಿಥಿ ಉಪನ್ಯಾಸಕರು ಪ್ರಥಮ ಶೈಕ್ಷಣಿಕ ತರಗತಿಗಳನ್ನು ತೆಗೆದುಕೊಳ್ಳುವಂತಿಲ್ಲ ಎಂಬ ಮೌಖೀಕ ಆದೇಶ ಎಷ್ಟರ ಮಟ್ಟಿಗೆ ಸೂಕ್ತ. ಇಂದು ಪದವಿ ಕಾಲೇಜುಗಳು ನಡೆಯುತ್ತಿರುವುದು ಶೇ.75- 80ರಷ್ಟು ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.
ಸರ್ಕಾರ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಅವಧಿಗೋಸ್ಕರ ವಿದ್ಯಾರ್ಥಿಗಳ ಭವಿಷ್ಯತ್ತಿನ ಹಿತ ದೃಷ್ಟಿಯಿಂದ ತರಗತಿಗಳನ್ನು ನೀಡಿ ಪರೀಕ್ಷಾ ಕಾರ್ಯ ಮೌಲ್ಯಮಾಪನ ನ್ಯಾಕ್ ಕೆಲಸಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕು. ಉಪನ್ಯಾಸಕರುಗಳನ್ನು ಆಧುನಿಕ ಹೈಟೆಕ್ ಜಿತದಾಳುಗಳಂತೆ ದುಡಿಸಿಕೊಳ್ಳುವ ಪ್ರವೃತ್ತಿ ಸರ್ಕಾರ ಬಿಡಬೇಕು. ಅತಿಥಿ ಉಪನ್ಯಾಸಕರುಗಳಿಗೆ ಮಾನವೀಯತೆ ದೃಷ್ಟಿಯಿಂದ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಪ್ರಮುಖರಾದ ಬಸವರಾಜ ಸೇರಿ, ಚಂದ್ರಕಾಂತ ನಾರಾಯಣಪುರ, ಡಾ| ಧನರಾಜ ತುಡುಮೆ, ಡಾ| ಬುಕ್ಕಲ್ ನಾಗೇಂದ್ರಪ್ಪ, ನರಸಪ್ಪ, ಡಾ| ಭಂಡಾರಿ, ಬಂಡೆಪ್ಪ ಬಾಲಕುಂದಿ, ಬಾಲಾಜಿ, ಶರಣಪ್ಪ ಬದ್ದುರೆ, ವೆಂಕಟ ಜಾಧವ್ ಸೇರಿದಂತೆ ಇತರರು ಇದ್ದರು.