Advertisement

1-2 ದಿನದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಿ

02:11 PM Mar 20, 2022 | Niyatha Bhat |

ಶಿವಮೊಗ್ಗ/ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಪಂ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ  ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ ‘ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಆರ್‌. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

Advertisement

ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆಯಿಂದಾಗಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂಬ ಗ್ರಾಮಸ್ಥರ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರು ಪೂರೈಕೆಗೆ ವಿದ್ಯುತ್‌ ಒದಗಿಸಲು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್‌ ಬಳಸಬೇಕು. ನಿರಂತರ ವಿದ್ಯುತ್‌ ಪೂರೈಕೆಯನ್ನು ಒಂದೆರಡು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಖಾತ್ರಿಪಡಿಸಬೇಕು ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.

ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಈ ಸ್ವತ್ತು, ಸ್ಮಶಾನ ಭೂಮಿ, ಪಹಣಿ, ಗ್ರಾಮಗಳ ಒಳಗಿನ ರಸ್ತೆಗಳ ನಿರ್ಮಾಣ, ರಿಪೇರಿ ಹಾಗೂ ನಿವೇಶನ ಮಂಜೂರಾತಿ ಸೇರಿದಂತೆ ವಿವಿಧ ವಿಷಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ನೊಣಬೂರಿನ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಲಾ ಶೈಕ್ಷಣಿಕ ಮತ್ತು ಇತರೆ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು. ತೀರ್ಥಹಳ್ಳಿ ತಾಲೂಕಿನ ಮಲ್ಲೇಸರಕ್ಕೆ ಭೇಟಿ ನೀಡಿ ಅಲ್ಲಿನ ಅಂಗನವಾಡಿಯಲ್ಲಿ ಆಯೋಜಿಸಲಾಗಿದ್ದ ಪೋಷಣ್‌ ಅಭಿಯಾನ ಕಾರ್ಯಕ್ರಮಕ್ಕೆ ಜಿಲಾಧಿಕಾರಿಗಳು ಚಾಲನೆ ನೀಡಿದರು. ನಂತರ ಮಲ್ಲೇಸರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಶೈಕ್ಷಣಿಕ ಚಟುವಟಿಕೆ ಕುರಿತು ಸಂವಾದ ನಡೆಸಿದರು.

ಮಲ್ಲೇಸರ ಗ್ರಾಮದ ಪ್ರಗತಿಪರ ಕೃಷಿಕ ಶ್ರೀಧರ್‌ ಭಟ್‌ ಅವರ ತೋಟಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ತೋಟದ ಬೆಳೆಗಳ ಕುರಿತು ಪರಿಶೀಲಿಸಿದರು ಹಾಗೂ ಅಲ್ಲಿ ಅವರು ಬಳಸುತ್ತಿರುವ ಕೃಷಿ ಯಂತ್ರಗಳನ್ನು ವೀಕ್ಷಿಸಿ ಚಾಲನೆ ಮಾಡಿದರು. ನೊಣಬೂರಿನ ಗ್ರಾಪಂ ಆವರಣದಲ್ಲಿ ಸಂಜೆ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಗೃಹ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಸೌಲಭ್ಯ ವಿತರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ| ನಾಗೇಂದ್ರ ಎಫ್‌. ಹೊನ್ನಳ್ಳಿ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌, ತೀರ್ಥಹಳ್ಳಿ ತಹಶೀಲ್ದಾರ್‌ ಶ್ರೀಪಾದ್‌ ಮತ್ತಿತರರು ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next