ದೇವರಹಿಪ್ಪರಗಿ: ಬೇಡ ಜಂಗಮ ಪ್ರಮಾಣಪತ್ರದ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಿ ನ್ಯಾಯ ಒದಗಿಸುವಂತೆ ಹಾಗೂ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಕೈಗೊಂಡಿರುವ ಬೇಡ ಜಂಗಮರನ್ನು ಬಂಧಿಸಿರುವ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ 1008 ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಭೆ ಸೇರಿದ ತಾಲೂಕಿನ ಜಂಗಮ ಸಮುದಾಯದವರು ಬೇಡ ಜಂಗಮ ಪ್ರಮಾಣಪತ್ರದ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಆಗ್ರಹಿಸಿದರು.
ಈ ವೇಳೆ ಜಡಿ ಮಠದ ಜಡಿಸಿದ್ದೇಶ್ವರ ಸ್ವಾಮೀಜಿ, ಕೆರುಟಗಿ ಹಿರೇಮಠದ ಶಿವಬಸವ ಸ್ವಾಮೀಜಿ, ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ, ನಿವೃತ್ತ ಕೃಷಿ ಅಧಿಕಾರಿ ಮಡಿವಾಳಯ್ಯ ಬುದ್ನಿ, ಬಸಯ್ಯ ಹಿರೇಮಠ ಮಾತನಾಡಿ, ನಮ್ಮ ಹೋರಾಟ ನಮ್ಮ ಹಕ್ಕಿಗಾಗಿಯೇ ವಿನಃ ಯಾರ ವಿರುದ್ಧವೂ ಅಲ್ಲ. ಡಾ| ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿರುವ ಮೀಸಲಾತಿಯನ್ನು ಪಡೆಯಲು ಕೇಳುತ್ತಿದ್ದೇವೆ ಎಂದರು.
ಕಾಯಕ ನಿರತ ಜಂಗಮ ಸಮುದಾಯ ಹಿಂದಿನಿಂದಲೂ ನಿರ್ಲಕ್ಷéಕ್ಕೆ ಒಳಗಾಗಿದೆ. ಇನ್ನೂ ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ಬೆಂಗಳೂರಿನಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಕೈಗೊಂಡಿರುವ ಬೇಡ ಜಂಗಮರನ್ನು ಬಂಧಿಸಿರುವ ಸರ್ಕಾರದ ಕ್ರಮ ಖಂಡನೀಯ. ಎಂದ ಅವರು, ನಮಗೆ ಸಲ್ಲಬೇಕಾದ ಮೀಸಲಾತಿ ನೀಡಿ ಎಂದು ಒತ್ತಾಯಿಸಿದರು.
ಸಭೆ ನಂತರ ಪಂಚಾಚಾರ್ಯ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಡಾ| ಅಂಬೇಡ್ಕರ್ ವೃತ್ತ ತಲುಪಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತಹಶೀಲ್ದಾರ್ ಕಚೇರಿ ತಲುಪಿತು. ಈ ಸಂದರ್ಭದಲ್ಲಿ ಪರದೇಶಿ ಮಠದ ಶಿವಯೋಗಿ ಶ್ರೀ ಮಾತನಾಡಿದರು.
ನಂತರ ತಹಶೀಲ್ದಾರ್ ಸಿ.ಎ. ಗುಡದಿನ್ನಿ ಅವರಿಗೆ ಮನವಿ ಸಲ್ಲಿಸಿದರು. ಕಡಕೋಳ ಹಿರೇಮಠದ ಮಹಾಲಿಂಗೇಶ್ವರ ಸ್ವಾಮೀಜಿ, ಯಾಳವಾರ ಗುರುಮಠದ ಕೇದಾರ ಶ್ರೀ, ಕೋರವಾರ ಚೌಕಿಮಠದ ಕಾಶಿಲಿಂಗ ಶ್ರೀ, ಅಯ್ಯಪ್ಪಯ್ಯಸ್ವಾಮಿ ಹಿರೇಮಠ, ಗುರುಬಸಯ್ಯ ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ, ಶಾಂತಯ್ಯ ಜಡಿಮಠ, ಎಸ್.ವಿ. ಆಲಾಳಮಠ, ಡಾ| ಮಹಾಂತೇಶ ಹಿರೇಮಠ, ಡಾ| ಮಂಜುನಾಥ ಮಠ, ಶಿವಾನಂದಯ್ಯ ಹಿರೇಮಠ, ಸೋಮಶೇಖರ ಹಿರೇಮಠ, ವೀರಘಂಟಯ್ಯ ಗದ್ದಿಗೆಮಠ, ಮಹೇಶ ಬುದ್ನಿ, ಅರನಾಥ ಹಿರೇಮಠ, ಪ್ರಕಾಶ ಡೋಣೂರಮಠ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಜಂಗಮ ಸಮುದಾಯದ ಪ್ರಮುಖರು ಇದ್ದರು.