Advertisement

ಟ್ರಾಫಿಕ್ ಸಮಸ್ಯೆಗೆ ಪರಿಹಾರ ಮರೀಚಿಕೆ

10:32 AM Apr 25, 2022 | Team Udayavani |

ನವಲಗುಂದ: ಹುಬ್ಬಳ್ಳಿಯಿಂದ ಪಟ್ಟಣದ ಮಾರ್ಗವಾಗಿ ನರಗುಂದ, ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ ಕಡೆ ಪ್ರಯಾಣಿಸುವವರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆಯೇ ಹುಬ್ಬಳ್ಳಿ-ಸೊಲ್ಲಾಪುರ ಹಾಗೂ ಗೋವಾ-ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ ಯಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ಇದೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸಂಚಾರ ತಾಪತ್ರಯ ಉಂಟಾಗುತ್ತಿದೆ.

Advertisement

ಹುಬ್ಬಳ್ಳಿ ರಸ್ತೆಯಿಂದ ನರಗುಂದ ಮಾರ್ಗದುದ್ದಕ್ಕೂ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ ಎಂಬುದೇ ತಿಳಿಯದಂತೆ ಅತೀ ಇಕ್ಕಟ್ಟಾದ ರಸ್ತೆ ಇದೆ. ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾದರೂ ಹುಬ್ಬಳ್ಳಿ-ಸೊಲ್ಲಾಪುರ ಹಾಗೂ ಗೋವಾ-ಹೈದರಾಬಾದ್‌ ರಸ್ತೆಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಇದರಿಂದ ರಾಜ್ಯ-ಕೇಂದ್ರ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುವಂತಾಗಿದೆ.

ಜಿಲ್ಲೆಯವರೇ ಕೇಂದ್ರ-ರಾಜ್ಯ ಮಂತ್ರಿಗಳಾಗಿದ್ದರೂ ನವಲಗುಂದ ಪಟ್ಟಣದಲ್ಲಿ ಹಾದುಹೋದ ಹುಬ್ಬಳ್ಳಿ-ಸೊಲ್ಲಾಪುರ, ಗೋವಾ-ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಣದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪಟ್ಟಣದಲ್ಲಿ ಹೆದ್ದಾರಿ ಅಗಲೀಕರಣ ಮಾಡುತ್ತಾರೆಯೋ ಅಥವಾ ಬೈಪಾಸ್‌ ಮಾಡುತ್ತಾರೋ ಎಂಬ ಗೊಂದಲದಲ್ಲಿಯೇ ಜನರು ನಿತ್ಯ ಗಂಟೆಗಟ್ಟಲೇ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು ಸಹ ಟ್ರಾಫಿಕ್ ಸಮಸ್ಯೆಯ ಅನುಭವ ಪಡೆದಿದ್ದಾರೆ. ಆದರೂ ಸಹ ರಾಷ್ಟ್ರೀಯ ಹೆದ್ದಾರಿಗೆ ಮಾತ್ರ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಸರಕಾರ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ತೊರುತ್ತಿರುವ ಕಾಳಜಿ ಈ ಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಿಗೂ ನೀಡಬೇಕಾಗಿದೆ.

ತಾಲೂಕಿನ ಜನತೆ ಜಿಲ್ಲಾ ಕೇಂದ್ರ ಧಾರವಾಡಕ್ಕೆ ತೆರಳಬೇಕೆಂದರೆ ಈ ರಸ್ತೆ ತೀರಾ ಹದಗೆಟ್ಟಿದೆ. ಹೆಚ್ಚು ಹಣ ವ್ಯಯಿಸಿ ಹುಬ್ಬಳ್ಳಿ ಮಾರ್ಗವಾಗಿಯೇ ತೆರಳಬೇಕಿದೆ. ಇನ್ನು ಹುಬ್ಬಳ್ಳಿಯಿಂದಲೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣ ಇದ್ದರೂ ಕಾಲವಾಡ ಹತ್ತಿರ ಟೋಲ್‌ ನಾಕಾ ಸುಂಕ ವಸೂಲಿಗೆ ತಯಾರಾಗಿ ನಿಂತಿದೆ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಹಳವಾಗಿದ್ದು, ರಸ್ತೆ ದಾಟಿ ಹೋಗುವುದು ದುಸ್ತರವಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿದ್ದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಅಗಲೀಕರಣ ಅಥವಾ ಬೈಪಾಸ್‌ ಮಾಡಿ ಸಂಚಾರ ಸುಗಮವಾಗುವಂತೆ ನೋಡಿಕೊಳ್ಳಬೇಕಾಗಿದೆ. ಧಾರವಾಡ ರಸ್ತೆಯೂ ಬಹಳ ಹದಗೆಟ್ಟಿರುವುದರಿಂದ ಸಂಬಂಧ ಪಟ್ಟ ಅಧಿ ಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. –ಗಿರಿಯಪ್ಪ ಗಾಣಿಗೇರ, ತುಪ್ಪದಕುರಹಟ್ಟಿ ಗ್ರಾಮದ ರೈತ

Advertisement

ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಆಗಬಾರದೆಂದು 1985-86ರಲ್ಲಿ ಪಿಒಟಿ (ಪಿಟ್‌ ಆಪರೇಟಿಂಗ್‌ ಟ್ರಾನ್ಸ್‌ಪೋರ್ಟ್) ಕಾಮಗಾರಿ ಮೂಲಕ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ಆಗಬೇಕೆಂಬುದನ್ನು ಸರಕಾರಕ್ಕೆ ಮನವಿ ಮೂಲಕ ಒತ್ತಾಯಿಸಿದ್ದೆವು. ಆದರೂ ಇಲ್ಲಿಯವರೆಗೂ ಆಗದೇ ಇರುವುದು ವಿಪರ್ಯಾಸವಾಗಿದೆ.ಆನಂದ ಹೊಸಗೌಡರ, ಹೋರಾಟಗಾರ

ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಅಡಿಗಿಂತ ದೊಡ್ಡ ಮಶಿನರಿಗಳು ವಾಹನದಲ್ಲಿ ಹೋಗುತ್ತವೆ. ರಾಜ್ಯ-ಹೊರರಾಜ್ಯದಿಂದ ವಾಹನಗಳ ಸಂಚಾರ ಅತೀ ಹೆಚ್ಚಾಗಿದೆ. 1990ರಲ್ಲಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ಗಾಗಿ ಹೋರಾಟ ನಡೆಸಿ ಸರಕಾರದ ಗಮನಕ್ಕೆ ತಂದರೂ ಏಕೆ ನನೆಗುದಿಗೆ ಬಿದ್ದಿದೆ ಗೊತ್ತಾಗುತ್ತಿಲ್ಲ. ಈಗ ನಿತ್ಯ ಟ್ರಾಫಿಕ್ ನಿಂದ ಸಾರ್ವಜನಿಕರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಶೋಕ ಮಜ್ಜಿಗುಡ್ಡ            

-ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next