ಮುಂಡರಗಿ: ಬರದೂರು ಗ್ರಾಮದ ಜನತಾ (ಹುಡ್ಕೊ) ಪ್ಲಾಟ್‌ನ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಮಹಿಳೆ ಪಾದಗಳು ಸುಟ್ಟು ವರ್ಷ ಉರುಳಿದರೂ ಪರಿಹಾರ ಮರೀಚಿಕೆಯಾಗಿದೆ. ಇದರಿಂದ ಕುಟುಂಬ ಪರಿತಪಿಸುವಂತಾಗಿದ್ದು, ಹೆಸ್ಕಾಂ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಬರದೂರು ಗ್ರಾಮದ (ಹುಡ್ಕೊ) ಹೈತಾಪುರ ರಸ್ತೆಯಲ್ಲಿರುವ ಪ್ಲಾಟ್‌ನಲ್ಲಿ ಮನೆಯ ಮೇಲೆ ಇದ್ದ ಹೈಟೆನ್ಷನ್ ವಿದ್ಯುತ್ ತಂತಿಯಿಂದಾಗಿ ಅವಘಡವು ಸಂಭವಿಸಿ ಸಂಬಂಧಿ ಕರಾದ ಶಿವಪ್ಪ ಹೆಗ್ಗಣ್ಣವರ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಜೊತೆಗೆ ಜಯಶ್ರೀ ಯಲ್ಲಪ್ಪ ನಿಟ್ಟಾಲಿ ಕಾಲುಗಳಿಗೆ ಸುಟ್ಟ ಗಾಯಗಳು ಆಗಿದ್ದವು. ಪತ್ನಿ ಜಯಶ್ರೀಯನ್ನು ಗದಗ, ಹುಬ್ಬಳ್ಳಿ, ದಾವಣಗೆರೆಯ ಖಾಸಗಿ ಆಸ್ಪತ್ರೆಗಳಲ್ಲಿ ಪತಿಯಲ್ಲಪ್ಪನು ಚಿಕಿತ್ಸೆ ಕೊಡಿಸಿದ್ದನು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಏನಿಲ್ಲವೆಂದರೂ 4 ಲಕ್ಷ ರೂ. ಖರ್ಚು ಆಗಿದೆ. ಕುಟುಂಬದ ಬಿಪಿಎಲ್ ಕಾರ್ಡ್ ಇರುವುದರಿಂದಾಗಿ ಆಸ್ಪತ್ರೆಗಳಲ್ಲಿ ಬರೀ 70 ಸಾವಿರ ರೂ.ಗಳಷ್ಟು ಖರ್ಚಿನಲ್ಲಿ ರಿಯಾಯತಿ ದೊರಕಿದೆ. ಉಳಿದಂತೆ ಈವರೆಗೂ ಹೆಸ್ಕಾಂನಿಂದ ಚಿಕ್ಕಾಸಿನ ಪರಿಹಾರವು ದೊರಕಿಲ್ಲ.
ಕಳೆದ ವರ್ಷ ದುರಂತ: 2018ರ ನವೆಂಬರ್‌ನಲ್ಲಿ ಹುಡ್ಕೊ ಪ್ಲಾಟ್‌ನಲ್ಲಿ ನಿಟ್ಟಾಲಿ ಕುಟುಂಬದವರು ಕಟ್ಟುತ್ತಿದ್ದ ಮನೆಯ ಕುಂಬಿಯ ಮೇಲೆ ಹೆಸ್ಕಾಂನ ತ್ರೀ ಪೇಸ್ ತಂತಿಯು ಹಾಯ್ದು ಹೋಗಿತ್ತು. ಮನೆಯ ಮೇಲ್ಛಾವಣಿಯ ಮೇಲೆ ನೋಡಲು ಹೋಗಿದ್ದ ಸಂಬಂಧಿ ಶಿವಪ್ಪ ಹೆಗ್ಗಣ್ಣವರ ವಿದ್ಯುತ್ ತಂತಿಯು ತಾಗಿದೆ. ಪಕ್ಕದಲ್ಲಿಯೇ ಇದ್ದ ಜಯಶ್ರೀ ಬಿಡಿಸಲು ಹೋದಾಗ ಶಿವಪ್ಪನ ಮೃತ ದೇಹವು ಆಕೆಯ ಕಾಲುಗಳ ಮೇಲೆ ಬಿದ್ದು ಸುಟ್ಟು ಹೋಗಿತ್ತು.
ಚಿಕಿತ್ಸೆಗಾಗಿ ಸಾಲಸೋಲ: ದುರ್ಘಟನೆ ಸಂಭವಿಸಿದಾಗ ಜಯಶ್ರೀಯನ್ನು ಗದಗ ಜಿಲ್ಲಾಸ್ಪತ್ರೆಗೆ, ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ದೊರಕದೇ ಇದ್ದಾಗ ಅನಿವಾರ್ಯವಾಗಿ ನಿಟ್ಟಾಲಿ ಕುಟುಂಬವು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದೆ. ಜಯಶ್ರೀಯನ್ನು ಪತಿ ಯಲ್ಲಪ್ಪನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಪತ್ನಿಯ ಚಿಕಿತ್ಸೆಗಾಗಿ ಯಲ್ಲಪ್ಪನು ಸಾಲಸೋಲ ಮಾಡಿದ್ದು, ಏನಿಲ್ಲವೆಂದರೂ ಕನಿಷ್ಠ 4 ಲಕ್ಷ ರೂ. ಖರ್ಚಾಗಿದೆ. ಸಾಲದಲ್ಲಿ ಸಿಲುಕಿ ಅಸಹಾಯಕ ಸ್ಥಿತಿಯಲ್ಲಿರುವ ನಿಟ್ಟಾಲಿ ಕುಟುಂಬಕ್ಕೆ ಹೆಸ್ಕಾಂನವರು ಮಾನವೀಯತೆ ದೃಷ್ಟಿಯಿಂದ ನೆರವಾಗಬೇಕಿದೆ. ಶೀಘ್ರ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕಿದೆ.
ಪ್ರತಿದಿನವೂ ಕೂಲಿಯಿಂದಲೇ ಜೀವನ ಸಾಗಿಸಬೇಕು. ನಡೆಯಲು ಬಾರದ ಹೆಂಡತಿ,ಇಬ್ಬರು ಮಕ್ಕಳ ಸಂಸಾರವನ್ನು ಸಾಗಿಸಬೇಕು. ಜಯಶ್ರೀಯ ಚಿಕಿತ್ಸೆಗಾಗಿ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದೇನೆ. ಘಟನೆಯ ಸಂಭವಿಸಿದಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಸ್ಕಾಂನ ಅಧಿ ಕಾರಿಗಳು ಗ್ರಾಮಕ್ಕೆ ಬಂದು ಪರಿಹಾರದ ಭರವಸೆ ನೀಡಿ ಹೋದರೂ ಈವರೆಗೂ ಯಾವುದೇ ಪರಿಹಾರ ದೊರಕಿಲ್ಲ. ಸಾಲದಲ್ಲಿ ಸಿಲುಕಿ ಸಂಸಾರ ಸಾಗಿಸಲು ಅಸಹಾಯಕನಾಗಿದ್ದೇನೆ.
-ಯಲ್ಲಪ್ಪ ನಿಟ್ಟಾಲಿ, ಸಂತ್ರಸ್ತ
-ಹು.ಬಾ. ವಡ್ಡಟಿ