Advertisement
ಪಾವಂಜೆ ಗ್ರಾಮವು ಕೊಳುವೈಲು, ಅರಾಂದ್, ರಾಮನಗರದಂತಹ ಸಣ್ಣ ಪ್ರದೇಶ ವನ್ನು ಒಳಗೊಂಡಿದೆ. ಒಂದು ಭಾಗ ದಲ್ಲಿ ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗುತ್ತಿದ್ದರೆ, ಗ್ರಾಮದ ಸುತ್ತ ವಿಶಾಲವಾದ ನಂದಿನಿ ನದಿಯು ಸಮುದ್ರಕ್ಕೆ ಸೇರುವ ತವಕದಲ್ಲಿ ಸಾಗುತ್ತದೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ಇದೇ ಇಲ್ಲಿನ ವಿಶೇಷತೆಯಾಗಿದೆ.
Related Articles
Advertisement
ಅರಾಂದ್ ಪ್ರದೇಶವನ್ನು ಪ್ರವೇಶಿಸುವ ನದಿ ಬದಿಯ ರಸ್ತೆಯು ಸಂಪೂರ್ಣ ಕಾಂಕ್ರೀಟೀಕರಣಗೊಂಡಿದ್ದರೂ ಕುಸಿಯುವ ಭೀತಿಯನ್ನು ಆವರಿಸಿದೆ. ಇದೇ ರಸ್ತೆಯೂ ಅಗ್ಗಿದಕಳಿಯವನ್ನು ಸಂಪರ್ಕಿಸುವ ಸುಲಭ ಮಾರ್ಗವಾದರೂ ಕಿರು ಸೇತುವೆಯ ಅನಂತರ ಸರಿಯಾದ ರಸ್ತೆ ಇಲ್ಲ. ನದಿಯ ಒಂದು ಬದಿಯಲ್ಲಿ ತಡೆಗೋಡೆಯ ಅಗತ್ಯವಿದೆ. ಅರಾಂದ್-ಅಗ್ಗಿದಕಳಿಯ ಪ್ರದೇಶದಲ್ಲಿನ ಕಿಂಡಿ ಅಣೆಕಟ್ಟು 16 ಬಾಗಿಲುಗಳಿದ್ದು ಇದರ ನಿರ್ವಹಣೆ ಇಲ್ಲದೆ ಉಪ್ಪುನೀರು ಸೋರುತ್ತಿದೆ. ಇದರಲ್ಲಿ ಕನಿಷ್ಠ ಆರು ಕಿಂಡಿಗಳನ್ನು ದುರಸ್ತಿ ಮಾಡಿ, ಉಳಿದವನ್ನು ಮುಚ್ಚಿದರೂ ಸಹ ಈ ಪ್ರದೇಶಕ್ಕೆ ಹೇರಳವಾಗಿ ನೀರು ಸಿಗುವಂತಾಗುತ್ತದೆ.
ಮೂರು ದೇಗುಲಗಳ ಸುಂದರ ತಾಣ
ಪಾವಂಜೆಯಲ್ಲಿ ಪ್ರಮುಖ ಮೂರು ದೇವಸ್ಥಾನಗಳು ಒಂದೇ ಪ್ರದೇಶದಲ್ಲಿರುವುದು ವಿಶೇಷ. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಪ್ರಸಿದ್ಧಿಯೊಂದಿಗೆ ತುಳುನಾಡಿನ ಧಾರ್ಮಿಕ ಕ್ಷೇತ್ರದ ಇತಿಹಾಸದಲ್ಲಿ ವಿಶೇಷ ಮನ್ನಣೆ ಪಡೆದಿದೆ. ಮಹಾಲಿಂಗೇಶ್ವರ ದೇಗುಲವು ಎತ್ತರದ ಪ್ರದೇಶದಲ್ಲಿದ್ದು, ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಇಲ್ಲಿಂದ ನೋಡುವುದೇ ಒಂದು ವಿಶೇಷ ಅನುಭವ. ಪಾವಂಜೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಹಲವಾರು ಯಾಗ ಯಜ್ಞಾಧಿಗಳು ಪ್ರಸಿದ್ಧಿಯನ್ನು ಪಡೆದಿದೆ. ಯಕ್ಷಗಾನಕ್ಕೆ ವಿಶೇಷ ಆದ್ಯತೆ ನೀಡುವ ಕ್ಷೇತ್ರವಾಗಿರುವುದು ಉಲ್ಲೇಖನೀಯ.
ಅಭಿವೃದ್ಧಿಗೆ ಆದ್ಯತೆ: ಪಾವಂಜೆ ಗ್ರಾಮದಲ್ಲಿ ಉಪ್ಪು ನೀರಿನಿಂದ ಕುಡಿಯುವ ನೀರಿನ ಸಮಸ್ಯೆಗೆ ಜಲಜೀವನ್ ಯೋಜನೆಯಲ್ಲಿ ವಿಶೇಷವಾಗಿ ಪ್ರಯತ್ನ ನಡೆಸಲಾಗಿದೆ. ಉಪ್ಪು ನೀರಿನ ತಡೆಗೋಡೆಗೆ ವಿಶೇಷ ಅನುದಾನವನ್ನು ಬಳಸಿಕೊಳ್ಳುವ ಭರವಸೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೀಡಿದ್ದಾರೆ. ಒಂದೆರಡು ತಿಂಗಳಿನಲ್ಲಿ ಈ ಬಗ್ಗೆ ಬೃಹತ್ ಯೋಜನೆಯೊಂದು ಕಾರ್ಯಗತಗೊಳ್ಳಲಿದೆ.. – ಪೂರ್ಣಿಮಾ, ಅಧ್ಯಕ್ಷರು, ಹಳೆಯಂಗಡಿ ಗ್ರಾ.ಪಂ
ನದಿ ತೀರಕ್ಕೆ ವಿಶೇಷ ಅನುದಾನೆ ಪಾವಂಜೆ ಪ್ರದೇಶದ ಕೊಳುವೈಲು ಮತ್ತು ಅರಾಂದ್‌ನ ಒಂದು ಭಾಗದಲ್ಲಿ ನದಿ ತೀರ ಇರುವುದರಿಂದ ಇದನ್ನೇ ಪರಿಗಣಿಸಿ ವಿಶೇಷ ಅನುದಾನಕ್ಕೆ ಜನಪ್ರತಿನಿಧಿಗಳು ಬಳಸಿಕೊಂಡಲ್ಲಿ ನಮ್ಮ ಗ್ರಾಮವೂ ಸಹ ಅಭಿವೃದ್ಧಿ ಹೊಂದಲು ಹಾಗೂ ಪ್ರಮುಖ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿದೆ. ಕೃಷಿಗೆ ಹಾನಿಯಾಗುವುದನ್ನು ಮೊದಲು ತಡೆ ಹಿಡಿಯಲು ಪ್ರಯತ್ನ ನಡೆಯಲಿ. – ಪುರಷೋತ್ತಮ ದೇವಾಡಿಗ, ಗ್ರಾಮಸ್ಥ, ಅರಾಂದ್-ಪಾವಂಜ
-ನರೇಂದ್ರ ಕೆರೆಕಾಡು