Advertisement

ಸಿರಿಧಾನ್ಯ ಮೇಳ ಇಂದಿನಿಂದ

06:06 AM Jan 18, 2019 | Team Udayavani |

ಬೆಂಗಳೂರು: ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಈಗ ಕ್ಷಣಗಣನೆ. ಶುಕ್ರವಾರದಿಂದ ಮೂರು ದಿನ ನಡೆಯಲಿರುವ ಈ ಮೇಳಕ್ಕೆ ಅರಮನೆ ಮೈದಾನದ ತ್ರಿಪುರವಾಸಿನಿ ಸಜ್ಜುಗೊಂಡಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಆಹಾರ ಕಂಪನಿಗಳು, ವಿಜ್ಞಾನಿಗಳು, ರೈತರು ಈ ಸಿರಿಧಾನ್ಯಗಳ ಸಂತೆಗೆ ಸಾಕ್ಷಿಯಾಗಲಿದ್ದಾರೆ.

Advertisement

ವಾಣಿಜ್ಯ ಮೇಳದಲ್ಲಿ ಸುಮಾರು 350 ಮಳಿಗೆಗಳು ತಲೆಯೆತ್ತಲಿವೆ. ಈ ಪೈಕಿ ಈಗಾಗಲೇ 225 ಕಂಪೆನಿಗಳು ಖಚಿತಪಡಿಸಿದ್ದು, ಉಳಿದವು ಖರೀದಿದಾರರಾಗಿ ಭಾಗವಹಿಸುವ ಭರವಸೆ ನೀಡಿವೆ. ಸುಮಾರು 25 ಸಂಶೋಧಕರು, ವ್ಯಾಪಾರ, ವೈಜ್ಞಾನಿಕ ಅಂಶಗಳು ಮತ್ತು ನೀತಿ-ನಿರೂಪಣೆ ಬಗ್ಗೆ ಚರ್ಚೆ ನಡೆಸಲಿ¨ªಾರೆ. ಮೂರು ದಿನಗಳಲ್ಲಿ ಒಟ್ಟು 63 ಉಪನ್ಯಾಸ, ಸಂವಾದಗಳು ನಡೆಯಲಿವೆ ಎಂದು ಕೃಷಿ ಸಚಿವ ಎನ್‌.ಎಸ್‌. ಶಿವಶಂಕರ್‌ ರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೇಳಕ್ಕೆ ಚಾಲನೆ ನೀಡಲಿದ್ದು, ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ವಸ್ತುಪ್ರದರ್ಶನ ಉದ್ಘಾಟಿಸುವರು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಡಿ.ವಿ. ಸದಾನಂದಗೌಡ, ಅನಂತಕುಮಾರ್‌ ಹೆಗಡೆ, ಹರ್‌ಸಿಮ್ರತ್‌ ಕೌರ್‌ ಬಾದಲ್‌, ಸಚಿವರಾದ ಕೃಷ್ಣ ಬೈರೇಗೌಡ, ಕೆ.ಜೆ. ಜಾರ್ಜ್‌, ಎಸ್‌.ಎಸ್‌. ಮಲ್ಲಿಕಾರ್ಜುನ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 20ರಂದು ಸಮಾರೋಪದಲ್ಲಿ ಸಚಿವ ಆರ್‌.ವಿ. ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.   

ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್‌, ಮಣಿಪುರ, ಕೇರಳ ಮತ್ತು ತೆಲಂಗಾಣ ಸೇರಿದಂತೆ ಚಿಲಿ, ಪೋಲಂಡ್‌, ಶ್ರೀಲಂಕ, ಯುಎಇ, ಜರ್ಮನಿ, ಸ್ವಿಡ್ಜರ್‌ಲ್ಯಾಂಡ್‌ ಮತ್ತಿತರ ದೇಶಗಳ ಪ್ರತಿನಿಧಿಗಳು ಹಾಗೂ ಸುಮಾರು 16 ಸ್ಟಾರ್ಟ್‌ಅಪ್‌ ಸಂಸ್ಥೆಗಳು ಭಾಗವಹಿಸಲಿವೆ. ಈ ಮೇಳದಲ್ಲಿ ಐದು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ 23 ಸಾವಯವ ಮತ್ತು ಸಿರಿಧಾನ್ಯ ಖಾದ್ಯಗಳ ಮಳಿಗೆಗಳು ತಲೆಯೆತ್ತಲಿವೆ ಎಂದು ಎಂದರು.

ಈ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವು ಅತಿದೊಡ್ಡ ಕಾರ್ಯಕ್ರಮವಾಗಿದ್ದು, ಸಾವಯವ ವಲಯ ಮತ್ತು ಸಿರಿಧಾನ್ಯ ಸಮುದಾಯದ ಸಮಾಗಮ, ಕಲಿಕೆ ಮತ್ತು ವ್ಯಾಪಾರಕ್ಕೆ ವೃತ್ತಿಪರ ವೇದಿಕೆಯನ್ನು ಕಲ್ಪಿಸಲಿದೆ. ರಾಜ್ಯದ 60 ಮಳಿಗೆಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ರೈತರ ಒಕ್ಕೂಟಗಳು, ರೈತರ ಉತ್ಪಾದಕ ಸಂಸ್ಥೆಗಳ ಮತ್ತು ರಾಜ್ಯದ ವಿವಿಧ ಸಾವಯವ ಮತ್ತು ಸಿರಿಧಾನ್ಯ ಗುಂಪುಗಳ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ. 15 ಪ್ರಾದೇಶಿಕ ಒಕ್ಕೂಟಗಳು,

Advertisement

ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರತಿನಿಧಿಸುವ 85 ರೈತರ ಗುಂಪುಗಳು ಭಾಗವಹಿಸಲಿವೆ. ಇದಲ್ಲದೆ, ಮೂರು ದಿನಗಳ ಕಾಲ ರೈತರಿಗಾಗಿ ಪ್ರತ್ಯೇಕವಾಗಿ ಕನ್ನಡದಲ್ಲಿ ಕಾರ್ಯಾಗಾರಗಳನ್ನು ನಾಲ್ಕು ಅಧಿವೇಶನದಲ್ಲಿ ಆಯೋಜಿಸಲಾಗಿದ್ದು, 29 ಮಂದಿ ತಜ್ಞರು ಉಪನ್ಯಾಸ ನೀಡಲಿದ್ದಾರೆ ಎಂದು ಶಿವಶಂಕರ ರೆಡ್ಡಿ ಹೇಳಿದರು. ಕೃಷಿ ಇಲಾಖೆ ಆಯುಕ್ತ ಡಾ.ಕೆ.ಜಗದೀಶ್‌, ಇಕೋವಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್‌ ಮೆನನ್‌ ಮತ್ತಿತರರು ಉಪಸ್ಥಿತರಿದ್ದರು.

ಸಿರಿಧಾನ್ಯಕ್ಕೂ ಬೆಂಬಲ ಬೆಲೆ?: ಸಿರಿಧಾನ್ಯಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲು ಕನಿಷ್ಠ ಬೆಂಬಲ ಬೆಲೆ ಯೋಜನೆ ಪರಿಚಯಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿ, ಮುಂದಿನ ಬಜೆಟ್‌ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವಶಂಕರ್‌ ರೆಡ್ಡಿ ತಿಳಿಸಿದರು. 

ಅಲ್ಲದೆ, ಬೆಂಗಳೂರಿನಲ್ಲಿ ಕೆಎಂಎಫ್ನ ನಂದಿನಿ ಔಟ್‌ಲೆಟ್‌ಗಳು ಹಾಗೂ ಹಾಪ್‌ಕಾಮ್ಸ್‌ಗಳಲ್ಲಿ ಸಿರಿಧಾನ್ಯಗಳನ್ನು ಮಾರಾಟ ಮಾಡುವ ಸಂಬಂಧ ಬಿಬಿಎಂಪಿ ಮೇಯರ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಇದಕ್ಕೆ ಪೂರಕ ಸ್ಪಂದನೆ ದೊರಕಿದ್ದು, ಮುಂದಿನ ಎರಡು ಮೂರು ತಿಂಗಳಲ್ಲಿ ಹಾಪ್‌ಕಾಮ್ಸ್‌ ಮತ್ತು ನಂದಿನಿ ಔಟ್‌ಲೆಟ್‌ಗಳಲ್ಲಿ ಸಿರಿಧಾನ್ಯ ಸಿಗಲಿದೆ. ಹಂತ-ಹಂತವಾಗಿ ಇದು ಅನುಷ್ಠಾನಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next