Advertisement

ಕನ್ನಡ್ಕ ರಕ್ಷಿತಾರಣ್ಯದಿಂದ ಘನತ್ಯಾಜ್ಯ ತೆರವು

02:40 PM Oct 22, 2018 | Team Udayavani |

ಈಶ್ವರಮಂಗಲ: ಕನ್ನಡ್ಕ ರಕ್ಷಿತಾರಣ್ಯದ ಮಧ್ಯೆ ಹಾದುಹೋಗುವ ರಸ್ತೆ ಪಕ್ಕದಲ್ಲೇ ರಾಶಿ ಬಿದ್ದಿದ್ದ ಘನ ತ್ಯಾಜ್ಯವನ್ನು ಗ್ರಾ.ಪಂ. ತೆರವುಗೊಳಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಘನತ್ಯಾಜ್ಯದ ರಾಶಿ ಬಗ್ಗೆ ಉದಯವಾಣಿ-ಸುದಿನ ಅ. 16ರಂದು ಸಚಿತ್ರ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಪಂಚಾಯತ್‌ ಹಾಗೂ ಅರಣ್ಯ ಇಲಾಖೆಯ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಕ್ರಮದ ಭರವಸೆ ನೀಡಿದ್ದರು.

Advertisement

ಎರಡು ಲೋಡು ಘನ ತ್ಯಾಜ್ಯ
ಬಡಗನ್ನೂರು ಗ್ರಾ.ಪಂ. ಬಾಡಿಗೆಯ ಪಿಕಪ್‌ ಮತ್ತು ಇಬ್ಬರು ಕಾರ್ಮಿಕರ ಮೂಲಕ ರಕ್ಷಿತಾರಣ್ಯದಲ್ಲಿದ್ದ ಸುಮಾರು ಎರಡು ಲೋಡು ತ್ಯಾಜ್ಯವನ್ನು ಸಂಗ್ರಹಿಸಿ, ಸುಳ್ಯಪದವಿನಲ್ಲಿರುವ ತ್ಯಾಜ್ಯ ಘಟಕಕ್ಕೆ ಸಾಗಿಸಿದೆ. ಇದೀಗ ರಕ್ಷಿತಾರಣ್ಯ ಸ್ವಚ್ಛಗೊಂಡಿದ್ದು, ಇನ್ನು ಮುಂದೆ ತ್ಯಾಜ್ಯ ಎಸೆಯುವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ಪಂಚಾಯತ್‌, ಅರಣ್ಯ ಮತ್ತು ಪೊಲೀಸ್‌ ಇಲಾಖೆಯಿಂದ ಆಗಬೇಕಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

ಸ್ವಂತ ಖರ್ಚಿನಲ್ಲಿ ಸೂಚನ ಫಲಕ
ಪಾಣಾಜೆ ಅರಣ್ಯ ಉಪವಲಯದ ಅರಣ್ಯ ಸಿಬಂದಿ ಉಮೇಶ್‌, ವೆಂಕಪ್ಪ ನೇತೃತ್ವದಲ್ಲಿ ಘನ ತ್ಯಾಜ್ಯ ಸಾಗಿಸಲಾಯಿತು. ಅರಣ್ಯ ಇಲಾಖೆ ಸಿಬಂದಿ ಉಮೇಶ್‌ ಅವರು ರಕ್ಷಿತಾರಣ್ಯದಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಸುವ ಫ‌ಲಕವನ್ನು ಸ್ವಂತ ಖರ್ಚಿನಲ್ಲಿ ಇನ್ನೆರಡು ದಿನಗಳಲ್ಲಿ ಅಳವಡಿಸುವುದಾಗಿ ತಿಳಿಸಿದ್ದಾರೆ. ಕಸ ಎಸೆಯುವವರನ್ನು ಪತ್ತೆ ಹಚ್ಚಿ, ಸ್ವಚ್ಛತೆಗೆ ಸಹಕರಿಸುವಂತೆ ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next