Advertisement

ಘನತ್ಯಾಜ್ಯ ನಿರ್ವಹಣೆ, ಶೌಚಾಲಯ ನಿರ್ಮಾಣ ಇರಾದೆ 

04:06 PM Sep 26, 2017 | |

ಮಹಾನಗರ : ಮುಂಬಯಿ ಹಾಗೂ ಪುಣೆಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಹಾಗೂ ಶೌಚಾಲಯ ನಿರ್ಮಾಣ ಪ್ರಕ್ರಿಯೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಇದೇ ಮಾದರಿಯನ್ನು ಮಂಗಳೂರಿನಲ್ಲೂ ಅನುಷ್ಠಾನ ಗೊಳಿಸುವ ಇರಾದೆಯಿಂದ  ಪಾಲಿಕೆಯ ಸ್ಥಾಯೀ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಅಧ್ಯಯನ ಪ್ರವಾಸಕ್ಕೆ ಮುಂದಾಗಿದ್ದಾರೆ.

Advertisement

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ ಅವರು ಪಾಲಿಕೆಗೆ ಪತ್ರ ಬರೆದಿದ್ದು, ಮುಂದಿನ ಪಾಲಿಕೆ ಸಭೆಯಲ್ಲಿ ಇದು ಪ್ರಸ್ತಾವನೆಗೆ ಬರಲಿದೆ.

ಜುಲೈನಲ್ಲಿ ನಡೆದ  ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ  ಪಾಲಿಕೆಯ ಸ್ವಚ್ಛ ಭಾರತ ಯೋಜನೆ, ಶೌಚಾಲಯಗಳ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದ ಉತ್ತಮ ಕೆಲಸಗಳನ್ನು ಪರಿಶೀಲಿಸಲು ಸ್ಥಾಯೀ ಸಮಿತಿ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಮುಂಬಯಿ ಹಾಗೂ ಪುಣೆಗೆ ಕಳುಹಿಸಲು ತೀರ್ಮಾನಿಸಲಾಗಿದೆ.

2016-17ನೇ ಸಾಲಿನಲ್ಲಿ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲು ಅನುಮತಿ ನೀಡುವ ಕುರಿತು ಸರಕಾರಕ್ಕೆ ಪತ್ರ ಬರೆದಿದ್ದಾಗ, ಈ ಸಂಬಂಧ ಅಂಗೀಕರಿಸಿರುವ ಠರಾವು ಪ್ರತಿ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲು ಪರಿಷತ್ತಿಗೆ ಕಾರ್ಯಸೂಚಿ ಮಂಡಿಸಿ ನಿರ್ಣಯವನ್ನು ಸರಕಾರಕ್ಕೆ ಕಳುಹಿಸಬೇಕಾಗಿದೆ. ಪಾಲಿಕೆ ವತಿಯಿಂದ ಅಧ್ಯಯನ ಪ್ರವಾಸವನ್ನು ಕೈಗೊಳ್ಳುವ ಕುರಿತು 2017-18ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ಯಲ್ಲಿ ಸದಸ್ಯರ/ಅಧಿಕಾರಿಗಳ ಅಧ್ಯಯನ ಪ್ರವಾಸ (ದೇಶ/ವಿದೇಶ) ವೆಚ್ಚಗಳಿಗೆ 15 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.

ದಿನ 300 ಟನ್‌ ತ್ಯಾಜ್ಯ ಉತ್ಪತ್ತಿ
ಮಂಗಳೂರು ವ್ಯಾಪ್ತಿಯಲ್ಲಿ ಉತ್ಪತ್ತಿ ಯಾಗುತ್ತಿರುವ ತ್ಯಾಜ್ಯವನ್ನು ಪಚ್ಚನಾಡಿ ಪ್ರದೇಶದಲ್ಲಿರುವ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣ ಘಟಕಕ್ಕೆ ಸಾಗಾಟ ಮಾಡಲಾಗುತ್ತಿದೆ. ದಿನನಿತ್ಯ ಸುಮಾರು 300 ಟನ್‌ ತ್ಯಾಜ್ಯವನ್ನು ಈ ಘಟಕದಲ್ಲಿ ಸ್ವೀಕರಿಸಲಾಗುತ್ತದೆ. ಇದರಲ್ಲಿ ವಿವಿಧ ರೀತಿಯ ತ್ಯಾಜ್ಯವನ್ನು (ಹಸಿ ಕಸ ಹಾಗೂ ಒಣ ಕಸ) ಸ್ವೀಕರಿಸಿ ಸಂಸ್ಕರಿಸಲಾಗುತ್ತದೆ. ಮುಖ್ಯವಾಗಿ ಹೆಚ್ಚು ದುರ್ವಾಸನೆ ಬೀರುವ 30ರಿಂದ 35 ಟನ್‌ಗಳಷ್ಟು ಮಾಂಸ ಹಾಗೂ ಕೋಳಿ ತ್ಯಾಜ್ಯ ಪ್ರತಿನಿತ್ಯ ಮಂಗಳೂರು ನಗರದಿಂದಲೇ ಉತ್ಪತ್ತಿಯಾಗುತ್ತಿದೆ.

Advertisement

‘ಉದಯವಾಣಿ’ ಜತೆಗೆ ಮಾತನಾಡಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಮುಂಬಯಿ ನಗರ ಸಹಿತ ದೇಶದ ಪ್ರಮುಖ ಮಹಾನಗರ ಪಾಲಿಕೆಗಳ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಕಂಪೆನಿಯಿಂದಲೇ ಮಂಗಳೂರಿನಲ್ಲಿ ಕಸದ ನಿರ್ವಹಣೆ ನಡೆಯುತ್ತಿದೆ. 

ಮನೆ ಮನೆಯಿಂದ ಕಸ ಸಂಗ್ರಹ, ಹೈಟೆಕ್‌ ವಿಧಾನದಲ್ಲಿ ಅದರ ಸಾಗಾಟ ಹಾಗೂ ಡಂಪಿಂಗ್‌ ಯಾರ್ಡ್‌ನಲ್ಲಿ ಅದರ ವಿಲೇವಾರಿ ಹೀಗೆ ತ್ರಿವಳಿ ಪ್ಯಾಕೇಜ್‌ ವಿಧಾನದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. 

ಆದರೂ, ಕೆಲವೊಂದು ವ್ಯತ್ಯಾಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಲ್ಲಿನ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛ ಭಾರತ ಯೋಜನೆ ಅನುಷ್ಠಾನ ಕುರಿತು ಪರಿಶೀಲಿಸಲು ನಿರ್ಧರಿಸಿ ಪ್ರವಾಸ ಕೈಗೊಳ್ಳಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next