Advertisement

ಟೋಲ್‌ ಉಳಿಸಲು ಘನ ವಾಹನ ತಡೆಯೇ ನಿರ್ನಾಮ!

09:54 AM Dec 08, 2017 | |

ಸುರತ್ಕಲ್‌ : ಹೆದ್ದಾರಿ 66ರಲ್ಲಿ ಮೂರು ಕಡೆ ಟೋಲ್‌ ನೀಡುವುದನ್ನು ತಪ್ಪಿಸಲು ಲಭ್ಯವಿರುವ ಒಳ ರಸ್ತೆಗಳನ್ನು ಬಳಸುವುದು ಅತಿಯಾಗಿದ್ದು, ಇದರಿಂದಾಗಿ ಎನ್‌ಐಟಿಕೆ ಸಮೀಪದ ರಸ್ತೆಯೊಂದರಲ್ಲಿ ಘನ ವಾಹನಗಳಿಗೆ ಹಾಕಿರುವ ತಡೆಬೇಲಿಯೇ ಮುರಿದು ಹೋಗಿದೆ.

Advertisement

ಸುರತ್ಕಲ್‌ ಶ್ರೀ ಸದಾಶಿವ ಮಹಾ ಗಣಪತಿ ದೇವಸ್ಥಾನ ಮಾರ್ಗವಾಗಿ ಎನ್‌ ಐಟಿಕೆ ವರೆಗೆ ಬೀಚ್‌ ಉದ್ದಕ್ಕೂ ಇತ್ತೀಚೆಗೆ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ ಅಗಲ ಕಿರಿದಾಗಿದ್ದು, ಇಲ್ಲಿ ಲಘು ವಾಹನಗಳಿಗೆ ಮಾತ್ರ ಹೋಗಲು ಸಾಧ್ಯವಿದ್ದು, ಘನ ವಾಹನಗಳು ಪ್ರವೇಶಿಸದಂತೆ ಕಬ್ಬಿಣದ ತಡೆ ನಿರ್ಮಿಸಲಾಗಿತ್ತು. ಈಗ ಘನ ವಾಹನಗಳೂ ಟೋಲ್‌ ತಪ್ಪಿಸಲು ಈ ರಸ್ತೆಯಲ್ಲಿಯೇ ಸಾಗುತ್ತಿವೆ. ಹೆಚ್ಚಾಗಿ ಮೀನು ಸಾಗಾಟ ವಾಹನಗಳು, ಉಡುಪಿ ನೋಂದಣಿಯ ಘನ ವಾಹನಗಳು ಈ ರಸ್ತೆಯಾಗಿ ಮುಕ್ಕ ತಲುಪುತ್ತಿವೆ.

ಘನ ವಾಹನ ಓಡಾಟದಿಂದ ಈ ರಸ್ತೆ ಶಿಥಿಲಗೊಳ್ಳುತ್ತಿದೆ. ಕೇವಲ ಲಘು ವಾಹನಗಳ ಓಡಾಟಕ್ಕೆಂದೇ ಇದನ್ನು ನಿರ್ಮಿಸಲಾಗಿದ್ದು, ಘನ ವಾಹನಗಳ ಭಾರ ತಾಳಿಕೊಳ್ಳುವ ಶಕ್ತಿ ಈ ರಸ್ತೆಗಿಲ್ಲ. ಬೀಚ್‌ ಉದ್ದಕ್ಕೂ ಮಣ್ಣು ತುಂಬಿ ಎತ್ತರಗೊಳಿಸಿ ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ರಸ್ತೆಯಿರುವ ಕೆಲವು ಕಡೆಗಳಲ್ಲಿ ಕುಗ್ಗಿ ಹೋಗಿರುವ ಅಪಘಾತವಾಗುವ ಸಾಧ್ಯತೆಯಿದೆ.

ಹೆಚ್ಚಾಗಿ ಪ್ರವಾಸಿಗಳು, ಎನ್‌ಐಟಿಕೆ ವಿದ್ಯಾರ್ಥಿಗಳು ಸೈಕ್ಲಿಂಗ್‌ಗಾಗಿ ಈ ರಸ್ತೆಯನ್ನು ಬಳಸುತ್ತಾರೆ. ಮಾತ್ರವಲ್ಲ ಹಿರಿಯರು ವಾಕಿಂಗ್‌ ಹಾಗೂ ವಾಯು ವಿಹಾರಕ್ಕಾಗಿ ಸಮುದ್ರ ದಂಡೆಗೆ ಬರುತ್ತಾರೆ. ಘನ ವಾಹನಗಳ ಅನಿಯಮಿತ ಓಡಾಟದಿಂದ ಇವರಿಗೂ ಅಪಾಯವಾಗುವ ಸಾಧ್ಯತೆ ಇದೆ.

ತತ್‌ಕ್ಷಣ ಸಂಚಾರ ವಿಭಾಗದ ಪೊಲೀಸರು ಇಲ್ಲಿನ ಘನ ವಾಹನ ತಡೆಯನ್ನು ಪುನಃ ನಿರ್ಮಿಸಿ ರಸ್ತೆಯು ಟೋಲ್‌ ತಪ್ಪಿಸಲು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಹಾಗೂ ರಸ್ತೆಯ ಸುರಕ್ಷೆಯನ್ನು ಕಾಯ್ದುಕೊಳ್ಳಬೇಕಿದೆ.

Advertisement

ಆಯುಕ್ತರಿಗೆ ಪತ್ರ ಬರೆಯಲಾಗಿದೆ
ಸದಾಶಿವ ಗಣೇಶ ದೇವಸ್ಥಾನದ ಬಳಿಯಿಂದ ಹಾದು ಹೋಗುವ ರಸ್ತೆಯಲ್ಲಿನ ಘನ ವಾಹನ ತಡೆಯನ್ನು ಪುನರ್‌ ನಿರ್ಮಿಸುವಂತೆ ಕೋರಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಇಲ್ಲಿ ಘನ ವಾಹನ ಓಡಾಟಕ್ಕೆ ಅನುಮತಿಯಿಲ್ಲ. ರಸ್ತೆಯ ಅಗಲ ಕಿರಿದಾಗಿದೆ. ಸುಂಕ ತಪ್ಪಿಸುವ ಉದ್ದೇಶದಿಂದ ವಾಹನಗಳು ಈ ಭಾಗದಲ್ಲಿ ಹೆಚ್ಚು ಓಡಾಟ ನಡೆಸಿ ಅಪಘಾತಕ್ಕೀಡಾದರೆ ಮತ್ತಷ್ಟು ಸಮಸ್ಯೆಯಾಗುತ್ತದೆ.
ಮಂಜುನಾಥ್‌, ಇನ್‌ಸ್ಪೆಕ್ಟರ್‌ ಮಂಗಳೂರು ಉತ್ತರ ಸಂಚಾರ ಠಾಣೆ 

ಉದ್ದೇಶವೇ ಅಡಿಮೇಲು
ಉಡುಪಿ ಮತ್ತು ದಕ್ಷಿಣ ಕನ್ನಡ ನೋಂದಣಿಯ ವಾಹನಗಳು ನಿತ್ಯ ಹಲವು ಬಾರಿ ಮಂಗಳೂರು ಉಡುಪಿ ನಡುವೆ ಸಂಚಾರಿಸುತ್ತವೆ. ಪ್ರತಿ ಬಾರಿಯೂ ಟೋಲ್‌ ನೀಡಬೇಕಾಗಿರುವುದರಿಂದ ಪ್ರವಾಸಿಗರ ಅನುಕೂಲಕ್ಕಾಗಿ ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ಈಗ ಅದು ಟೋಲ್‌ ತಪ್ಪಿಸಲು ಬಳಕೆಯಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.