ಹೊಸದಿಲ್ಲಿ: ಭಾರತೀಯ ಯೋಧರು ದೇಶ ರಕ್ಷಣೆಯ ಜತೆಜತೆಗೇ ತಮ್ಮ ಮಾನವೀಯ ವರ್ತನೆಯ ಕಾರಣಕ್ಕೆ ವಿಶ್ವಾದ್ಯಂತ ಗೌರವ ಪಡೆದಿದ್ದಾರೆ. ಅಂತಹದ್ದೊಂದು ಅತ್ಯಪೂರ್ವ ಮಾನವೀಯ ನಡತೆಯ ಕಾರಣಕ್ಕೆ ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಮೂವರು ಯೋಧರಿಗೆ ಸ್ಮರಣಿಕೆ, ಪದಕಗಳನ್ನು ನೀಡಿ ಗೌರವಿಸಲಾಗಿದೆ. ವಿಶೇಷವೆಂದರೆ ಇದರಲ್ಲಿ ಇಬ್ಬರು ಕನ್ನಡಿಗರು. ಈ ಮೂವರು ಸೇರಿ; 30 ವರ್ಷಗಳ ಹಿಂದೆ ತನ್ನ ಕುಟುಂಬದಿಂದ ಬೇರ್ಪಟ್ಟು ಅಲೆಯುತ್ತಿದ್ದ ಕರ್ನಾಟಕದ ಕೆಂಚಪ್ಪ ಗೋವಿಂದಪ್ಪ ಎನ್ನುವವರನ್ನು ಮರಳಿ ಮನೆಗೆ ಮುಟ್ಟಿಸಿದ್ದಾರೆ. ಅಂದಹಾಗೆ ಗೋವಿಂದಪ್ಪನವರ ವಯಸ್ಸು 70!
ಉತ್ತರಾಖಂಡದ ಲೋಹಘಾಟ್‌ನಲ್ಲಿ ಭಾರತ-ಚೀನ ಗಡಿಕಾಯುವ ಐಟಿಬಿಪಿಯಲ್ಲಿ ಈ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. 36ನೇ ಬೆಟಾಲಿಯನ್‌ನಲ್ಲಿದ್ದುಕೊಂಡು ಅತ್ಯಂತ ಹೃದಯ ಸ್ಪರ್ಶಿ ಸೇವೆ ಮಾಡಿದ್ದನ್ನು ಗೌರವಿಸಿ ಐಟಿಬಿಪಿಯ ಮಹಾನಿರ್ದೇಶಕರ ಸ್ಮರಣಿಕೆ ಹಾಗೂ ಬೆಳ್ಳಿ ತಟ್ಟೆಯನ್ನು ನೀಡಲಾಗಿದೆ. ಅದನ್ನು ಅತ್ಯಪೂರ್ವ ಸೇವೆ ಸಲ್ಲಿಸಿದವರಿಗೆ ಮಾತ್ರ ನೀಡಲಾಗುತ್ತದೆ.
ಆಗಿದ್ದೇನು? :
ಉತ್ತರಾಖಂಡದ ಲೋಹಘಾಟ್ ಸನಿಹದ ಚಲ್ತಿ ಹಳ್ಳಿಯಲ್ಲಿ ಅತ್ಯಂತ ದುರವಸ್ಥೆಯಲ್ಲಿದ್ದ ಕೆಂಚಪ್ಪ ಗೋವಿಂದಪ್ಪ ಅವ ರ ನ್ನು ಯೋಧ ರಿಯಾಜ್ ಸುಂಕದ್ ಈ ವರ್ಷಾರಂಭದಲ್ಲಿ ನೋಡಿದ್ದಾರೆ. ಸಣ್ಣ ಹೊಟೇಲ್‌ವೊಂದರಲ್ಲಿ ಗೋವಿಂದಪ್ಪ ನಿಂತುಕೊಂಡಿದ್ದರು. ಆ ದುಸ್ಥಿತಿಯನ್ನು ನೋಡಿ ಕರಗಿದ ರಿಯಾಜ್, ಕರ್ನಾಟಕದಿಂದಲೇ ಬಂದಿರುವ ತನ್ನಿಬ್ಬರು ಹಿರಿಯ ಯೋಧರಿಗೆ ವಿಷಯ ಮುಟ್ಟಿಸಿದ್ದಾರೆ. ಆ ಕೂಡಲೇ ಕರ್ನಾಟಕದ ಪ್ರೇಮಾನಂದ ಪೈ, ಶರಣ ಬಸವ ರಾಗಾಪುರ ಹೊಟೇಲ್‌ಗೆ ತೆರಳಿದ್ದಾರೆ.
ಆಗ ಟ್ರಕ್ ಒಂದರಲ್ಲಿ ಚಲ್ತಿ ಹಳ್ಳಿಗೆ ಈ ವ್ಯಕ್ತಿ ಬಂದಿರುವುದು ತಿಳಿದಿದೆ. ಆದರೆ ಗೋವಿಂದಪ್ಪನವರಿಗೆ ಕನ್ನಡ ಬಿಟ್ಟು ಬೇರೇನೂ ಬರದಿರುವುದರಿಂದ ಯಾರಿಗೂ ಏನೂ ಅರ್ಥವಾಗಿಲ್ಲ. ಪರಿಣಾಮ 1991ರಿಂದ ಇಲ್ಲಿಯವರೆಗೆ ಅವರು ಹೊಟೇಲ್ ಸನಿಹದ ಬಸ್‌ನಿಲ್ದಾಣವೊಂದರಲ್ಲಿ ಮಲಗಿ ಕಾಲ ಕಳೆಯುತ್ತಿದ್ದರು. ಹೊಟೇಲ್ ಕೆಲಸ ಮಾಡುತ್ತಿದ್ದರಿಂದ ಚಿಲ್ಲರೆ ಹಣವನ್ನು ನೀಡಲಾಗುತ್ತಿತ್ತು. ಆ ವೇಳೆ ತನ್ನವರನ್ನು ಸೇರಲಾಗದ ದುಃಖದಿಂದ ಗೋವಿಂದಪ್ಪ ಆಘಾತಕ್ಕೊಳಗಾಗಿದ್ದು ಕಂಡುಬಂತು. ಆ ವ್ಯಕ್ತಿಯ ಕುರಿತು ಒಂದು ವೀಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹಾಕಲಾಯಿತು. ಕರ್ನಾಟಕದ ವಕೀಲ ರೊಬ್ಬರು, ಅವರು ತನಗೆ ಗೊತ್ತು. ಧಾರವಾಡದ ಕಲಘಟಗಿ ಹಳ್ಳಿಯವರು ಎಂದು ತಿಳಿಸಿದರು.
ಕೂಡಲೇ ಗೋವಿಂದಪ್ಪನವರನ್ನು ದಿಲ್ಲಿಗೆ ಒಯ್ದು ಅಲ್ಲಿನ ಹೊಟೇಲೊಂದರಲ್ಲಿ ಉಳಿಸಿ, ûೌರ, ಸ್ನಾನ ಮಾಡಿಸಿ, ಹೊಸಬಟ್ಟೆ ಹಾಕಿಸಿ, ಕರ್ನಾಟಕದ ರೈಲಿನಲ್ಲಿ ಕರೆದೊಯ್ದಿದ್ದಾರೆ. ಅಂತಿಮವಾಗಿ ಕುಟುಂಬಕ್ಕೆ ತಲುಪಿಸಿದ್ದಾರೆ. ಗೋವಿಂದಪ್ಪನವರನ್ನು ಮನೆ ಸೇರಿಸಲು ಒಟ್ಟು 2,000 ಕಿ.ಮೀ. ದೂರವನ್ನು ಯೋಧರು ಕ್ರಮಿಸಿದ್ದಾರೆ! ಗೋವಿಂದಪ್ಪನವರಿಗೆ 4 ಗಂಡು, 2 ಹೆಣ್ಣು ಸೇರಿ ಒಟ್ಟು ಆರು ಮಕ್ಕಳು. ಅವರು 1991ರಲ್ಲೇ ಕೆಲಸ ಹುಡುಕಿಕೊಂಡು ಊರುಬಿಟ್ಟಿದ್ದರು. ಮೊದಲು ಮಹಾರಾಷ್ಟ್ರಕ್ಕೆ ಹೋಗಿ, ಅನಂತರ ಉತ್ತರಾಖಂಡ ಸೇರಿಕೊಂಡಿದ್ದರು.