ನಿಡಗುಂದಿ: ದೇಶದಲ್ಲಿ ಜನರ ನೆಮ್ಮದಿ ಜೀವನಕ್ಕೆ ಸೈನಿಕರ ತ್ಯಾಗ ಬಲಿದಾನವೇ ಕಾರಣ. ವೈಯಕ್ತಿಕ ಜೀವನ ಬದಿಗೊತ್ತಿ ದೇಶ ರಕ್ಷಣೆ ಧ್ಯೇಯವಾಗಿಸಿಕೊಂಡಿರುವ ಅವರ ಕಾರ್ಯ ಎಲ್ಲರಿಗೂ ಮಾದರಿ ಎಂದು ಉಪನ್ಯಾಸಕ ಬಸವರಾಜ ಹಂಚಲಿ ಹೇಳಿದರು.
ರವಿವಾರ ಪಟ್ಟಣದ ರುದ್ರೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ನಡೆದ ನೂತನ ನಿಡಗುಂದಿ ತಾಲೂಕು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಸುಭ್ರದತೆಗಾಗಿ ಗಡಿ ಭಾಗದಲ್ಲಿ ದೇಶದ್ರೋಹಿಗಳ ವಿರುದ್ಧ ಸೈನಿಕರು ನಿತ್ಯ ರಣಕಹಳೆ ಮೊಳಗಿಸಿ ಹೋರಾಟ ನಡೆಸುತ್ತಾರೆ. ಅವರ ದೇಶ ರಕ್ಷಣೆ ಕಾರ್ಯದಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟು ಸುಂದರ ಬದುಕು ನಡೆಸಲು ಕಾರಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ದೇಶಕ್ಕಾಗಿ ದುಡಿದು ನಿವೃತ್ತಿ ಪಡೆದರೂ ತಮ್ಮ ಸೇವೆ ಮುಂದುವರಿಸುವ ನಿಟ್ಟಿನಲ್ಲಿ ಸದ್ಯ ನಿಡಗುಂದಿ ಪಟ್ಟಣದಲ್ಲಿ ನಿವೃತ್ತ ಸೈನಿಕರು ಸಂಘ ನಿರ್ಮಿಸಿ ಸಮಾಜ ರಕ್ಷಣೆಯ ಪಣ ತೊಡುತ್ತಿರುವ ಕಾರ್ಯ ಅನನ್ಯವಾಗಿದೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಗಮೇಶ ಕೆಂಭಾವಿ ಮಾತನಾಡಿ, ಹಲವಾರು ವರ್ಷಗಳಿಂದ ದೇಶದ ಗಡಿಯಲ್ಲಿ ಹಗಲು, ರಾತ್ರಿ ಮಳೆ, ಚಳಿ, ಬಿಸಿಲು ಎನ್ನದೇ ದೇಶವೇ ನನ್ನ ಉಸಿರು ಎಂದು ಕೆಚ್ಚದೆಯಿಂದ ದೇಶದ್ರೋಹಿಗಳನ್ನು ಸದೆಬಡಿದು ನಮ್ಮ ದೇಶದ ಶಕ್ತಿ ಹೆಚ್ಚಿಸುತ್ತಿರುವ ಸೈನಿಕರ ಕೆಲಸವನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು. ಜಾತಿ, ಭೇದ ಲೆಕ್ಕಿಸದೆ ತಮ್ಮ ಜೀವನವನ್ನು ತಾಯಿ ನಾಡಿಗೆ ಅರ್ಪಿಸುವ ಅವರು ದೇಶದ ರಿಯಲ್ ಹೀರೋಗಳು ಎಂದರು.
ನಿಡಗುಂದಿ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜಿ.ಎಲ್. ಮನಹಳ್ಳಿ ಮಾತನಾಡಿ, ದೇಶ ಮೊದಲು, ದೇಶದ ಜನರ ನೆಮ್ಮದಿ ನಮಗೆ ಅತ್ಯವಶ್ಯ. ಅವರ ರಕ್ಷಣೆಗೆ ಸೈನಿಕರು ಸದಾ ಸಿದ್ಧರಾಗಿರುತ್ತಾರೆ. ಹಲವಾರು ವರ್ಷಗಳ ಕಾಲ ದೇಶಸೇವೆ ಮಾಡಿದ ನಾವೆಲ್ಲ ಈಗ ನಾಡ ಸೇವೆಗೆ ಸಿದ್ಧರಾಗಿದ್ದೇವೆ. ನಮ್ಮ ಕಷ್ಟ ನಷ್ಟಗಳ ಮಧ್ಯ ನಿಮ್ಮ ರಕ್ಷಣೆಗೆ ನಾವುಗಳು ದಿನಪೂರ್ತಿ ಕಾಯಕ ಮಾಡಲು ಸಿದ್ಧರಾಗಿದ್ದೇವೆ ಎನ್ನುವ ಸಂಕಲ್ಪದೊಂದಿಗೆ ಸಂಘಟನೆಗೆ ಚಾಲನೆ ನೀಡಲಾಗಿದೆ ಎಂದರು.
ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿಕ್ಷಣ ಪ್ರೇಮಿ ಸಿದ್ದಣ್ಣ ನಾಗಠಾಣ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಜಿ.ಬಿ. ಬಿರಾದಾರ, ಪ್ರಭಾರಿ ಮುಖ್ಯಾಧಿಕಾರಿ ಡಿ.ಎನ್. ತಹಶೀಲ್ದಾರ್ ಮಾತನಾಡಿದರು.
ರಾಮನಗೌಡ ಬಿರಾದಾರ, ಶಿವಾನಂದ ರೂಢಗಿ, ವೈ.ಎಸ್. ಗಂಗಶೆಟ್ಟಿ, ಎಸ್.ಆರ್. ವಿಭೂತಿ, ಬಸವರಾಜ ಗಣಿ, ಭೀಮಣ್ಣ ವಿಭೂತಿ, ಹೊಳಿಬಸಪ್ಪ ಮನಹಳ್ಳಿ, ಗೂಳಪ್ಪ ಅಂಗಡಿ, ಜಟ್ಟೆಪ್ಪ ಯಲಗೂರ, ಸಂಗಪ್ಪ ಕೂಡಗಿ, ಬಸವರಾಜ ಬಿರಾದಾರ, ಮಲ್ಲಪ್ಪ ಗುಂಡಿನಮನಿ, ಶ್ರೀಶೈಲ ದೊಡಮನಿ, ಆನಂದ ಕಮತಗಿ, ಬಿ.ಐ. ಯಡ್ರಾಮಿ ಮುಂತಾದವರಿದ್ದರು. ಯಾಸಿನ್ ಮುಲ್ಲಾ ನಿರೂಪಿಸಿದರು. ಎಸ್.ಎಸ್. ಹುಬ್ಬಳ್ಳಿ ವಂದಿಸಿದರು.