Advertisement

ಹಸಿವು ನೀಗಿಸುವ “ಸೈನಿಕರು’

11:31 AM Dec 15, 2019 | Lakshmi GovindaRaj |

ಬೆಂಗಳೂರಿನ ಎಷ್ಟೋ ಅಲೆಮಾರಿಗಳು‌, ಸ್ಲಂ ವಾಸಿಗಳು ಹೀಗೆ ಅನ್ನಕ್ಕಾಗಿ ಆಕಾಶ ನೋಡ್ತಾರೆ. ಹರ್ಷಿಲ್‌ ಮಿತ್ತಲ್‌ ಎಂಬ ಹುಡುಗನಿಗೆ ಕಾಡಿದ್ದೂ ಇಂಥವರೇ. ಈತ ಹುಟ್ಟುಹಾಕಿದ “ಲೆಟ್ಸ್‌ ಫೀಡ್‌ ಬೆಂಗಳೂರು’ ಎಂಬ ಸ್ವಯಂ ಸೇವಕ ಗುಂಪು, ಹಸಿವು ನೀಗಿಸುವುದನ್ನೇ ಕಾಯಕ ಮಾಡಿಕೊಂಡಿದೆ…

Advertisement

ಬಿರು ಬಿಸಿಲು. “ಅನ್ನ, ಅನ್ನಾ…’ ಎಂದು ಅಂಗೈ ಒಡ್ಡುವ ಮಕ್ಕಳ ದನಿ. ಅವರ ಹೊಟ್ಟೆ ತುಂಬಿಸಲು, ಹಗಲಿಡೀ ಬೀದಿ ಬೀದಿ ತಿರುಗುವ ದೊಡ್ಡವರ ಗುಂಪು. ಯಾರಾದರೂ ಕರೆದು ಒಂದ್ಹೋತ್ತಿನ ಊಟ ಕೊಟ್ಟಾರು ಎಂದು ನೋಡುವ ಅವರ ಬತ್ತಿದ ಕಣ್ಣುಗಳು… ಬೆಂಗಳೂರಿನ ಎಷ್ಟೋ ಅಲೆಮಾರಿಗಳ, ಸ್ಲಂ ವಾಸಿಗಳು ಹೀಗೆ ಅನ್ನಕ್ಕಾಗಿ ಆಕಾಶ ನೋಡ್ತಾರೆ. ಹರ್ಷಿಲ್‌ ಮಿತ್ತಲ್‌ ಎಂಬ ಹುಡುಗನಿಗೆ ಕಾಡಿದ್ದೂ ಇಂಥವರೇ.

ಇವರ ಹಸಿವಿನ ಆಕ್ರಂದನವನ್ನು ಆತ ಮೊದಲ ಸಲ ಕೇಳಿದಾಗ, ಒಂದಿಷ್ಟು ಆಹಾರದ ಪೊಟ್ಟಣಗಳನ್ನು ಹಿಡಿದು, ತಿಲಕ್‌ ನಗರದ ಸ್ಲಂಗೆ ಹೋಗಿದ್ದನಂತೆ. ಅವನು ಕೊಟ್ಟ ಆಹಾರದಿಂದ, ಹೊಟ್ಟೆ ತುಂಬ ಉಂಡ ಪುಟಾಣಿಗಳನ್ನು ಕಂಡು, ಹರ್ಷನಿಗೆ ಈ ಜನ್ಮ ಸಾರ್ಥಕ ಆಯಿತು ಅಂತನ್ನಿಸಿತಂತೆ. ಹರ್ಷನ ಈ ಉಪಕಾರ, ಸ್ನೇಹಿತರ ಕಿವಿಗೂ ಬಿತ್ತು. “ಲೆಟ್ಸ್‌ ಫೀಡ್‌ ಬೆಂಗಳೂರು’ ಎಂಬ ಗುಂಪು ಹುಟ್ಟಿಕೊಂಡಿತು. ಸ್ಲಂಗಳಿಗೆ ಊಟವನ್ನು ನೀಡುವುದೇ ಆ ಗುಂಪಿನ ಉದ್ದೇಶವಾಯಿತು. ಇಂದು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು ಸೇರಿದಂತೆ ಬೆಂಗಳೂರಿನ 500ಕ್ಕೂ ಅಧಿಕ ಮಂದಿ, ಲೆಟ್ಸ್‌ ಫೀಡ್‌ನ‌ ಸದಸ್ಯರು.

ಉಳ್ಳವರಿಂದ ಹಸಿದವರ ತಟ್ಟೆಗೆ…: ಲೆಟ್ಸ್‌ ಫೀಡ್‌ನ‌ ಸದಸ್ಯರು, ಬೆಂಗಳೂರಿನ ವಿವಿಧ ಅಪಾರ್ಟ್‌ ಮೆಂಟ್‌ಗಳಿಗೆ ಪ್ರತಿ ತಿಂಗಳು ಅಲೆಮಾರಿ, ಸ್ಲಂ ಮಕ್ಕಳಿಗೆ ಎಷ್ಟು ಊಟದ ಅಗತ್ಯವಿದೆ ಎಂಬುದರ ವಿವರ ಕಳುಹಿಸುತ್ತಾರೆ. ಇಂತಿಷ್ಟು ಊಟ ಸಿಗುವ ಬಗ್ಗೆ ಕೂಡಲೇ ಖಾತ್ರಿ ಆಗುತ್ತದೆ. ಪ್ರತಿ ತಿಂಗಳಿಗೆ 450ಕ್ಕೂ ಹೆಚ್ಚು ಮಂದಿ ಈ “ಅನ್ನದಾನ’ದ ಯೋಜನೆಗೆ ಹೆಸರು ನೋಂದಾಯಿಸುತ್ತಾರೆ. ತಯಾರಾದ ಫ್ರೆಶ್‌ ಊಟವನ್ನು, ಆಯಾ ಏರಿಯಾದ ಲೆಟ್ಸ್‌ ಫೀಡ್‌ನ‌ ಸದಸ್ಯರು, ಸಮೀಪದ ಸ್ಲಮ್‌ನ ಮಕ್ಕಳಿಗೆ, ಹಸಿದವರಿಗೆ ಮುಟ್ಟಿಸುತ್ತಾರೆ. ಪ್ರತಿ ಮನೆಯಿಂದ 5-10 ಪ್ಯಾಕೇಟ್‌ಗಳ ಊಟ ಸಿದ್ಧಗೊಳ್ಳುತ್ತದೆ.

ಬಾಕ್ಸ್‌ನಲ್ಲಿ ಏನಿರುತ್ತೆ?
– ಇಡ್ಲಿ, ಚಿತ್ರಾನ್ನ, ಪೂರಿ, ಚಪಾತಿ, ಅನ್ನ ಸಾಂಬಾರ್‌, ಪಲಾವ್‌, ನೂಡಲ್ಸ್‌.
– ಸ್ವೀಟ್ಸ್‌, ಚಕ್ಕುಲಿ, ನಿಪ್ಪಟ್ಟು, ಸಂಡಿಗೆ…
– ಆಹಾರದ ಜೊತೆಗೆ ಕೆಲವರು ಶುಭಾಶಯ ಪತ್ರಗಳನ್ನು ಬರೆದಿರುತ್ತಾರೆ.

Advertisement

ಊಟ ತಲುಪಿಸುವ ಸ್ಲಮ್‌ಗಳು…: ನಾಯಂಡನಹಳ್ಳಿ, ತಿಲಕ್‌ ನಗರ, ಬನ್ನೇರುಘಟ್ಟ, ವೈಟ್‌ಫೀಲ್ಡ್‌, ಜೆ.ಪಿ. ನಗರ… ಸೇರಿದಂತೆ 10-12 ಸ್ಲಮ್‌ಗಳ ಬಡ ಮಕ್ಕಳಿಗೆ ಊಟ ತಲುಪಿಸಲಾಗುತ್ತದೆ.

ಸ್ಲಮ್‌ನಲ್ಲಿ ಹಸಿದ ಮಕ್ಕಳು ನಮ್ಮ ದಾರಿಯನ್ನೇ ಕಾಯುತ್ತಿರುತ್ತವೆ. “ಅನ್ನ ಬಂತು ಅನ್ನಾ, ಎಲ್ರೂ ಸಾಲಾಗಿ ನಿಲ್ಲಿ’ ಅಂತ ಅವರುಗಳೇ ಇರುವೆಯಂತೆ ಸಾಲುಗಟ್ಟುತ್ತಾರೆ. ಕುತೂಹಲದಿಂದ ಪ್ಯಾಕೇಟ್‌ ತೆಗೆದಾಗ, ಅವರ ಆನಂದಕ್ಕೆ ಪಾರವೇ ಇರುವುದಿಲ್ಲ.
-ಭಾರ್ಗವ್‌, ಲೆಟ್ಸ್‌ ಫೀಡ್‌ ಸದಸ್ಯ

* ಯೋಗೇಶ್‌ ಮಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next