ಯಲಬುರ್ಗಾ: ಒಂದು ಊರಿನಿಂದ ಅಬ್ಬಬ್ಟಾ ಎಂದರೆ ಎಷ್ಟು ಜನರು ಸೈನ್ಯ ಸೇರಿರಬಹುದು ಎಂದರೆ ಒಬ್ಬರೋ..ಇಬ್ಬರೋ..ಇರಬಹುದು. ಆದರೆ ಇಲ್ಲೊಂದು ಊರಲ್ಲಿ 15ಕ್ಕೂ ಹೆಚ್ಚು ಯುವಕರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, 30ಕ್ಕೂ ಹೆಚ್ಚು ಸೈನಿಕರು ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳುವ ಹಿರಿಯ ಯೋಧರು ಸೇನೆ ಸೇರಲು ಊರಿನ ಯುವಕರಲ್ಲಿ ಸ್ಫೂರ್ತಿ ತುಂಬುತ್ತಾರೆ. ಯುವಕರಿಗೆ ತರಬೇತಿ ನೀಡುತ್ತಾರೆ. ಮಕ್ಕಳನ್ನು ದೇಶ ಸೇವೆಗೆ ಕಳುಹಿಸಲು ಯಾವುದೇ ಪಾಲಕರು ಹಿಂಜರಿಯಲ್ಲ. ಮಕ್ಕಳನ್ನು ಹೆಮ್ಮೆಯಿಂದ ಸೈನ್ಯಕ್ಕೆ ಕಳುಹಿಸಿಕೊಡುತ್ತಾರೆ. ಸೈನ್ಯ ಸೇರಬೇಕೆನ್ನುವ ಈ ಊರಿನ ಯುವಕರ ಉತ್ಸಾಹ ಪ್ರತಿ ವರ್ಷ ಹೆಚ್ಚುತ್ತಲೆ ಇದೆ.
ಸೈನಿಕರು ರಜಾ ದಿನಕ್ಕೆಂದು ಗ್ರಾಮಕ್ಕೆ ಗ್ರಾಮಕ್ಕೆ ಬಂದರೆ ಸುಮ್ಮನೆ ಕೂಡ್ರುವುದಿಲ್ಲ. ಗ್ರಾಮದಲ್ಲಿ ರಕ್ತದಾನ ಶಿಬಿರ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಗ್ರಾಮದ ಸೈನಿಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ದೇಶದ ಭದ್ರತೆ, ಗಡಿ ವಿಚಾರ ಸೇರಿದಂತೆ ಹಲವಾರು ವಿಷಯಗಳ ಕುರಿತು ತಾಲೂಕಿನಲ್ಲಿ ಎಲ್ಲಿಯಾದರೂ ಜನತೆ ಚರ್ಚೆಗೆ ಬಂದರೆ ಸಂಗನಹಾಲ ಗ್ರಾಮದ ಸೈನಿಕರನ್ನು ಜನರು ಸ್ಮರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸರಕಾರ, ಸರ್ಕಾರೇತರ ಸಂಘ-ಸಂಸ್ಥೆಗಳಿಂದ ದೇಶ ಕಾಯುವ ಯೋಧರನ್ನು ಗೌರವಿಸುವ ಸಂಪ್ರದಾಯ ಹೆಚ್ಚಾಗಬೇಕು. ಸೈನಿಕರು ತ್ಯಾಗ ಜೀವಿಗಳು. ದೇಶ ಕಾಯಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ದೇಶ ಕಾಯುವ ಸೈನಿಕರನ್ನು ಪ್ರತಿಯೊಬ್ಬರು ಆದರ್ಶವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ ಸಂಗನಹಾಲ ಗ್ರಾಮಸ್ಥರು.
Advertisement
ಹೌದು. ತಾಲೂಕಿನ ಪುಟ್ಟ ಗ್ರಾಮ ಸಂಗನಹಾಲದ ಯಾವ ಓಣಿಗೆ ಹೋದರೂ ಅಲ್ಲಿ ವೀರ ಯೋಧರನ್ನು ಹೆತ್ತವರು ಸಿಗುತ್ತಾರೆ. ಉಗ್ರರೊಂದಿಗಿನ ಯುದ್ಧದ ರೋಚಕ ಕಥೆಗಳೇ ಈ ಊರಿನ ಕಟ್ಟೆಗಳಲ್ಲಿ ಚರ್ಚೆಯಾಗುತ್ತವೆ. ಅಷ್ಟೇ ಅಲ್ಲ ಈ ಊರಿನ ಸಮೀಪದಲ್ಲಿ ಎಲ್ಲಿಯಾದರೂ ಸೇನಾ ಭರ್ತಿ ರ್ಯಾಲಿ ಇದ್ದರೂ ಅಲ್ಲಿ ಸಂಗನಹಾಲ ಗ್ರಾಮದ ಯುವಕರ ತಂಡವೇ ನೆರೆದಿರುತ್ತದೆ. ಯಲಬುರ್ಗಾ ತಾಲೂಕಿನಲ್ಲಿಯೇ ಈ ಗ್ರಾಮದ ಯುವಕರೇ ಹೆಚ್ಚು ಸೈನ್ಯಕ್ಕೆ ಸೇರಿದ್ದಾರೆ.