ಶಿರಸಿ: ಜಿಲ್ಲೆಯಲ್ಲಿ ಸುಮಾರು 9136 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಅಲ್ಲಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ.
ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ರೂಪಾ ಪಾಟೀಲ್ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಉಪ ನಿರ್ದೇಶಕ ಶಿವಪ್ರಸಾದ ಗಾಂವಕರ್, ಇನ್ನಿತರ ಕೃಷಿ ಇಲಾಖೆ ಅಧಿಕಾರಿಗಳು ಹಳಿಯಾಳ ತಾಲೂಕಿನ ಸಾಂಬ್ರಾಣಿ, ಗುಂಡೊಳ್ಳಿ, ಅಜುಮನಾಳ ತಾಂಡ, ತಿಪ್ಪಣಗೇರಿ ಹಾಗೂ ಯಲ್ಲಾಪುರ ತಾಲೂಕಿನ ಬೈಲಂದೂರು, ಮಂಗ್ಯಾನ ತಾವರಗೇರೆ, ಮದನೂರು ಭಾಗದಲ್ಲಿನ ಸೈನಿಕ ಹುಳು ಬಾಧಿತ ಮೆಕ್ಕೆ ಜೋಳ ತಾಕುಗಳಿಗೆ ಭೇಟಿ ನೀಡಿ ಪರಿಶಿಲಿಸಿದರು.
ಮೆಕ್ಕೆಜೋಳ ಬೆಳೆ 10 ರಿಂದ 15 ದಿವಸವಿದ್ದಾಗ ಶೈನಿಕ ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತವೆ. ಕೀಟದ ವೈಜ್ಞಾನಿಕ ಹೆಸರು ನ್ಪೊಡೋಪ್ಟೆರಾ ಪ್ರೊಜಿಪರ್ಡ್ ಪತಂಗ ಜಾತಿಗೆ ಸೇರಿದೆ. ಈ ಕೀಟದ ಪ್ರಥಮ ಹಂತದ ಮರಿ ಕೀಡೆಗಳು ಎಲೆಯ ಪತ್ರ ಹರಿತ್ತನ್ನು ಕೆರೆದು ತಿನ್ನುವುದರಿಂದ ಎಲೆಯ ಮೇಲೆ ಪಾರದರ್ಶಕ ಪದರಿನ ಕಿಂಡಿಗಳನ್ನು ಕಾಣಬಹುದು. ದ್ವಿತೀಯ ಮತ್ತು ತೃತೀಯ ಹಂತದ ಕೀಡೆಗಳು ಸುಳಿಯಲ್ಲಿರುವ ಎಲೆಗಳಲ್ಲಿ ರಂಧ್ರ ಮಾಡುತ್ತವೆ. ನಂತರ ಬೆಳೆದಂತೆಲ್ಲ ಹುಳುಗಳು ಪಕ್ಕದ ಗಿಡಗಳಿಗೆ ಹರಡಿ ಗಿಡದ ಸುಳಿಯಲ್ಲಿ ಉಳಿದುಕೊಂಡು ಎಲೆಯನ್ನು ತಿಂದು ಬದುಕುತ್ತವೆ. ಸುಳಿಯಲ್ಲಿ ಮತ್ತು ಎಲೆಯ ಮೇಲೆ ಹುಳುವಿನ ಹಿಕ್ಕೆ, ಲದ್ದಿ ಕಂಡು ಬರುವುದು ಸಾಮಾನ್ಯ. ಈ ಕೀಡೆ ಕೆಲಮೊಮ್ಮೆ ತೆನೆ ಮತ್ತು ಕಾಳನ್ನು ಕೂಡ ಭಕ್ಷಿಸುತ್ತವೆ. ಈ ಕೀಟ ಹೆಚ್ಚಾಗಿ 40 ರಿಂದ 50 ದಿನದೊಳಗೆ ಬೆಳೆಗೆ ಹಾನಿ ಮಾಡುತ್ತವೆ. ಈ ಕೀಟದ ಹತೋಟಿ ಸರಿಯಾದ ಸಮಯದಲ್ಲಿ ಆಗದೇ ಹೋದಲ್ಲಿ ಶೇ.30 ರಿಂದ 80 ರಷ್ಟು ಇಳುವರಿ ಕುಂಠಿತವಾಗುತ್ತವೆ ಎಂದು ತಿಳಿಸಿದರು.
ಈ ಕೀಟದ ಸಮೀಕ್ಷೆಗಾಗಿ ಯಲ್ಲಾಪುರ ತಾಲೂಕಿನ ಬೈಲಂದೂರು ಹಾಗೂ ಹಳಿಯಾಳ ತಾಲೂಕಿನ ತಿಪ್ಪಣಗೇರಿ ಗ್ರಾಮದಲ್ಲಿ ಎಕರೆಗೆ 5 ರಂತೆ ಮೋಹಕ ಬಲೆಗಳನ್ನು ಪ್ರಾತ್ಯಕ್ಷಿಕೆಗಾಗಿ ಅಳವಡಿಸಲಾಗಿದೆ. ಪ್ರತಿ ಮೋಹಕ ಬಲೆಯಲ್ಲಿ ಸುಮಾರು 3 ರಿಂದ 10 ಪತಂಗಗಳು ಬಿದ್ದಿದ್ದು, ಕೀಟದ ಮೊಟ್ಟೆಯಿಡುವ ಪ್ರಮಾಣ ಕಡಿಮೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಕೀಡೆಯು ಹತೋಟಿಗೆ ಮೆಟರೈಜಿಯಂ(ನೊಮೊರಿಯಾ) ರಿಲೈ ಜೈವಿಕ ಕೀಟನಾಶಕವನ್ನು 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ 15 ರಿಂದ 20 ದಿನದ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು. ಪ್ರತಿ ಎಕರೆಗೆ ಸುಮಾರು 400 ಗ್ರಾಂ ಜೈವಿಕ ಕೀಟನಾಶಕ ಬೇಕಾಗುವುದು. ನಂತರ ಪ್ರತಿ 10 ದಿನದ ಅಂತರದಲ್ಲಿ ಸಿಂಪಡಣೆ ಪುನರಾವರ್ತಿಸಬೇಕು. ಎಮಾಮೆಕ್ಟಿನ್ ಬೆಂಜೋಯೇಟ್ 0.2 ಗ್ರಾಂ ಅಥವಾ ಕ್ಲೋರ್‍ಯಾಂಟ್ರಿನಿಲಿಪ್ರೋಲ್ 0.2 ಮಿಲಿ ಅಥವಾ ಸ್ಪೈನೊಟೊರಮ್ 0-5 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು ಎಂದೂ ರೈತರಿಗೆ ಸಲಹೆ ವಿವರಿಸಿದ್ದಾರೆ.