Advertisement

ಚಿಮಿಣಿ ದೀಪದ ಬದಲಿಗೆ ಸೋಲಾರ್‌ ವ್ಯವಸ್ಥೆ

11:53 PM Jun 29, 2020 | Sriram |

ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಬನ್ನೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಬೀರಿಗ ಮತ್ತು ಕುಂಬ್ರೊಗದಲ್ಲಿ ಚಿಮಿಣಿ ಬೆಳಕಲ್ಲಿ ಕತ್ತಲು ಕಳೆಯುತ್ತಿದ್ದ ಎರಡು ಬಡ ಕುಟುಂಬಗಳಿಗೆ ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ಅವರು ತನ್ನ ವೇತನದ ಒಂದಂಶವನ್ನು ಬಳಸಿ ಸೌರ ಶಕ್ತಿಯ ಮೂಲಕ ಬೆಳಕು ಹರಿಸಿದ್ದು, ಜೂ. 29ರಂದು ಅದನ್ನು ಹಸ್ತಾಂತರಿಸಿದರು.

Advertisement

ಜನಶಿಕ್ಷಣ ಟ್ರಸ್ಟ್‌, ತಾ| ಪತ್ರಕರ್ತರ ಸಂಘ, ಸೆಲ್ಕೊ ಸೋಲಾರ್‌ ಸಹಯೋಗದ ಯೋಜನೆಯಲ್ಲಿ ತಹಶೀ ಲ್ದಾರ್‌ ಅವರು ವಿಶೇಷ ಆಸಕ್ತಿ ವಹಿಸಿ ಸೋಲಾರ್‌ ದೀಪ ಅಳವಡಿಸಲು ಆರ್ಥಿಕ ನೆರವು ನೀಡಿದರು. ಮೂರು ತಿಂಗಳ ಹಿಂದೆ ಪುತ್ತೂರಿಗೆ ಬಂದ ಅಧಿಕಾರಿಯ ಮಾನವೀಯ ನಡೆಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

ಚಿಮಿಣಿ ದೀಪವೇ ಬೆಳಕಾಗಿತ್ತು
ಬೀರಿಗದ ಕಲ್ಯಾಣಿ ಅವರು ಪುತ್ರ, ಸೊಸೆ, ಇಬ್ಬರು ಪುಟ್ಟ ಮೊಮ್ಮಕ್ಕಳೊಂದಿಗೆ ಗುಡಿಸಲಿನಂಥ ಮನೆಯಲ್ಲಿ ವಾಸವಾಗಿದ್ದರು. ಇದೇ ಪರಿಸರದ ಇನ್ನೊಂದು ದಿಕ್ಕಿನ ಕುಂಬ್ರೊಗದಲ್ಲಿ ಕಮಲಾಕ್ಷಿ, ನಾರಾಯಣ ದಂಪತಿ, ಇಬ್ಬರು ಮಕ್ಕಳು ಸಿಮೆಂಟ್‌ ಶೀಟ್‌ ಹಾಸಿದ ಮನೆಯಲ್ಲಿ ದ್ದರು. ಎರಡೂ ಕುಟುಂಬಗಳು ಚಿಮಿಣಿ ದೀಪವನ್ನೇ ಬಳಸುತ್ತಿದ್ದವು. ಈಗ ಸೌರ ವ್ಯವಸ್ಥೆ ಮಾಡಲಾಗಿದ್ದು, ಎರಡು ಬಲ್ಬ್ ಮತ್ತು ಒಂದು ಫ್ಯಾನ್‌ ಬಳಸಬಹುದಾಗಿದೆ. ಇದೇ ಸಂದರ್ಭ ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಒಂದು ಮನೆಗೆ ಆರ್ಥಿಕ ನೆರವು ನೀಡಿದರು.

ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ ಅವರು, ಪ್ರತಿ ಮನೆಯಲ್ಲೂ ಬೆಳಕು ಕಾಣಬೇಕು ಎಂಬುದು ನಮ್ಮ ಉದ್ದೇಶ. ಇಂತಹ ಕಟ್ಟಕಡೆಯ ಕುಟುಂಬದಿಂದಲೇ ಸೌರಶಕ್ತಿ ಬೆಳಕು ಕಾಣಲು ಸಾಧ್ಯ. ಒಬ್ಬ ಅಧಿಕಾರಿ ಸಹಕಾರ ನೀಡಿ ಗುಡಿಸಲ ಮುಂದೆ ಬಂದು ನಿಂತಿರುವುದೇ ವಿಶೇಷ ಎಂದು ಹೇಳಿದ್ದಾರೆ.

ಅಧಿಕಾರಿ ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎನ್ನುವುದನ್ನು ಇಂತಹ ಸಾಮಾಜಿಕ ಚಟುವಟಿಕೆಯಿಂದ ಅರಿಯಲು ಸಾಧ್ಯ ಎಂದು ತಾ.ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಹೇಳಿದರು.

Advertisement

ಪುತ್ತೂರಿನಲ್ಲಿ ಈ ಹಿಂದೆ ತಹಶೀಲ್ದಾರ್‌ ಆಗಿದ್ದ ಕೋಚಣ್ಣ ರೈ ಇದೇ ರೀತಿ ಬಡವರಿಗೆ ನೆರವಾಗುತ್ತಿದ್ದರು. ಈಗ ಅಂಥದ್ದೇ ಕೆಲಸವನ್ನು ರಮೇಶ್‌ ಬಾಬು ಮಾಡುತ್ತಿದ್ದಾರೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್‌ ಸಂಪ್ಯ ಅವರು ಹೇಳಿದ್ದಾರೆ.

ಬನ್ನೂರು ಗ್ರಾ.ಪಂ. ಸದಸ್ಯ ರತ್ನಾಕರ ಪ್ರಭು, ಸೆಲ್ಕೋ ಸೋಲಾರ್‌ನ ರಂಜಿತ್‌, ಬನ್ನೂರು ಗ್ರಾ.ಪಂ. ಸದಸ್ಯೆ ಗಿರಿಜಾ, ಸಾಮಾಜಿಕ ಕಾರ್ಯಕರ್ತೆ ಗೀತಾ, ಸೆಲ್ಕೋ ಸೋಲಾರ್‌ನ ಸುಧಾಕರ್‌ ಉಪಸ್ಥಿತರಿದ್ದರು. ಅಂಗನನಾಡಿ ಕಾರ್ಯಕರ್ತೆ ಅರುಣಾ ವಂದಿಸಿದರು. ಜನಶಿಕ್ಷಣ ಟ್ರಸ್ಟ್‌ ಜಿಲ್ಲಾ ನಿರ್ದೇಶಕ ಕೃಷ್ಣ ಮೂಲ್ಯ ನಿರೂಪಿಸಿದರು.

 ಆತ್ಮತೃಪ್ತಿಯ ಕೆಲಸ
ಬಡವರ ಮಕ್ಕಳೂ ಬೆಳಕಿನ ದೀಪದಿಂದ ಶಿಕ್ಷಣ ಪಡೆದು ಉನ್ನತ ವ್ಯಕ್ತಿಗಳಾಗಿ ಸಮಾಜದಲ್ಲಿ ಬಾಳ್ವೆ ನಡೆಸಬೇಕು. ಹೀಗಾಗಿ ಸೌರ ಬೆಳಕು ನೀಡುವ ಯೋಜನೆಗೆ ಬೆಂಬಲ ನೀಡಿದ್ದೇನೆ.
-ರಮೇಶ್‌ ಬಾಬು,
ತಹಶೀಲ್ದಾರ್‌ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next