Advertisement

ಸೋಲಾರ್‌ ಸೆಲ್ವಮ್ಮ 

12:30 AM Mar 02, 2019 | |

ವಿಧಾನಸೌಧದ ಎದುರು ಓಡಾಡುವ ಬಹುತೇಕರಿಗೆ ಈ ಅಜ್ಜಿ ಕಣ್ಣಿಗೆ ಬಿದ್ದಿರುತ್ತಾಳೆ… ನೆತ್ತಿಯ ಮೇಲೆ
ಕೆಂಡದಂತೆ ಸುಡುತ್ತಿರುವ ಸೂರ್ಯ, ಎದುರಲ್ಲಿ ಕೆಂಡದ ಒಲೆ ಮತ್ತು ಅದು ಉರಿಯುತ್ತಲೇ ಇರುವಂತೆ
ನೋಡಿಕೊಳ್ಳುವ ಅನಿವಾರ್ಯತೆ. 75 ವರ್ಷದ ಸೆಲ್ವಮ್ಮ ಕಳೆದ 20 ವರ್ಷಗಳಿಂದ ಹೀಗೆ ಬೆಂಕಿಯಲ್ಲಿ
ಬೇಯುತ್ತಲೇ ಹೊಟ್ಟೆಪಾಡು ಹೊರೆಯುತ್ತಿದ್ದಾರೆ. ವಿಧಾನಸೌಧದ ಎದುರು ಸಣ್ಣ ತಳ್ಳುವ ಗಾಡಿಯಲ್ಲಿ,
ಸುಟ್ಟ ಜೋಳವನ್ನು ಮಾರುವುದು ಆಕೆಯ ಕಾಯಕ. ಜೋಳ ಸುಡುತ್ತಾ, ಬೆಂಕಿ ಆರಿ ಹೋಗದಂತೆ ಕೆಂಡಕ್ಕೆ ಬೀಸಣಿಕೆಯಿಂದ ಗಾಳಿ ಹಾಕುತ್ತಾ ಕೈ ನೋವಿನಿಂದ ಬಳಲುತ್ತಿದ್ದ ಅವರಿಗೆ ಈಗ ಆ ಕಷ್ಟವಿಲ್ಲ. ಯಾಕಂದ್ರೆ, ಜೋಳವನ್ನು ಸುಡಲು ಸೂರ್ಯನೇ ನೆರವಾಗುತ್ತಿದ್ದಾನೆ! ಹೇಗೆ ಗೊತ್ತೇ? ವಿಧಾನಸೌಧದ ಬಳಿ ನಿತ್ಯ ಓಡಾಡುವ ಯುವಕುಮಾರ್‌ ಎಂಬವರು ಸೆಲ್ವಮ್ಮನ ಕಷ್ಟವನ್ನು ಗಮನಿಸುತ್ತಿದ್ದರು. ಅವರು ಸೆಲ್ಕೋ ಸೋಲಾರ್‌ ಲೈಟ್‌ ಪ್ರೈ. ಲಿಮಿಟೆಡ್‌ನ‌ ಉದ್ಯೋಗಿ.

Advertisement

ಬಲಹೀನ ಕೈಗಳಿಂದ ಗಾಳಿ ಹಾಕುತ್ತಾ, ನಿತ್ಯ ಬಳಲುವ ಆಕೆಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ, ಆ ವಿಷಯವನ್ನು ಸೆಲ್ಕೋ ಫೌಂಡೇಷನ್‌ ನ ಗಮನಕ್ಕೆ ತಂದರು. ಸೌರಶಕ್ತಿಯನ್ನು ಬಳಸಿಕೊಂಡೇ ಸೆಲ್ವಮ್ಮನಿಗೆ ನೆರವಾಗಲು ಸೆಲ್ಕೋ ಮುಂದೆ ಬಂತು. ಅಜ್ಜಿಯ ವ್ಯಾಪಾರಕ್ಕೆ ಅನುಕೂಲವಾಗುವಂತೆ 20 ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ ಅನ್ನು ರಚಿಸಲಾಯ್ತು. 9 ಸಾವಿರ ರೂ. ವೆಚ್ಚದ ಈ ಪ್ಯಾನಲ್‌ ಅನ್ನು ಸೆಲ್ಕೋನವರೇ ಉಚಿತವಾಗಿ ಸೆಲ್ವಮ್ಮನ ತಳ್ಳುಗಾಡಿಗೆ ಅಳವಡಿಸಿದರು. ಸೌರಶಕ್ತಿಯಿಂದ ಬ್ಯಾಟರಿ ಚಾರ್ಜ್‌ ಆಗಿ, ಫ್ಯಾನ್‌ ಮತ್ತು ಲೈಟ್‌ ಉರಿಯುತ್ತದೆ. ಕೆಂಡಕ್ಕೆ ಗಾಳಿ ಬೀಸುವ ಕಷ್ಟವೇ ಇಲ್ಲ. ಬೀಸಣಿಕೆ ಮಾಡುತ್ತಿದ್ದ ಕೆಲಸವನ್ನೀಗ ಸೋಲಾರ್‌ ಫ್ಯಾನ್‌ ಮಾಡುತ್ತದೆ. ಸಂಜೆಯಾದ ಮೇಲೂ ಎರಡೂ¾ರು ಗಂಟೆ ಫ್ಯಾನ್‌ ತಿರುಗುತ್ತದೆ. ಯಥೇತ್ಛವಾಗಿ ಸಿಗುವ ಸೌರಶಕ್ತಿಯನ್ನು ಹೀಗೂ ಬಳಸಬಹುದು ಎಂದು ತೋರಿಸಿಕೊಟ್ಟ ಸೆಲ್ಕೋ ಕಂಪನಿಗೊಂದು ಸಲಾಂ

ನಮ್ಮೂರು ಭದ್ರಾವತಿ. ಸುಮಾರು ವರ್ಷಗಳಿಂದ ಸುಟ್ಟ ಜೋಳ ಮಾರಿ ಜೀವನ ನಡೆಸುತ್ತಿದ್ದೇನೆ. ನನ್ನವರು ಅನ್ನಿಸಿಕೊಂಡೋರ್ಯಾರು ನನ್ನನ್ನು ನೋಡಿಕೊಳ್ಳುತ್ತಿಲ್ಲ. ದುಡಿಯಬೇಕು, ತಿನ್ನಬೇಕು. ಮೊದಲೆಲ್ಲ ಕೆಂಡಕ್ಕೆ ಗಾಳಿ ಹಾಕಿ ಹಾಕಿ ಕೈ ಬತ್ತಿಬರುತ್ತಿತ್ತು. ಈಗ ಈ ಫ್ಯಾನ್‌ನಿಂದ ತುಂಬಾ ಉಪಯೋಗವಾಗಿದೆ. ಬಹಳ ಬೇಗ ಜೋಳ ಸುಡಬಹುದು.-ಸೆಲ್ವಮ್ಮ

Advertisement

Udayavani is now on Telegram. Click here to join our channel and stay updated with the latest news.

Next