Advertisement

ಗ್ರಿಡ್‌ ಸಿದ್ಧವಾದರೂ ಸಿಗದ ಸೌರ ವಿದ್ಯುತ್‌!

12:49 AM Aug 31, 2019 | Team Udayavani |

ಬೆಂಗಳೂರು: ವರ್ಷಕ್ಕೆ ಎರಡೂವರೆ ಕೋಟಿ ವಿದ್ಯುತ್‌ ಬಿಲ್‌ ಪಾವತಿಸುವ ಬೆಂಗಳೂರು ವಿಶ್ವವಿದ್ಯಾಲಯ ಸೋಲಾರ್‌ ವಿದ್ಯುತ್‌ ಬಳಕೆಗೆ ಮುಂದಾಗಿದ್ದು, ಇದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರದ (ಕೆಇಆರ್‌ಸಿ) ನಿಯಮಾವಳಿ ಗೊಂದಲದಿಂದ ವಿಶ್ವವಿದ್ಯಾಲಯಕ್ಕೆ ಸೋಲಾರ್‌ ವಿದ್ಯುತ್‌ ಬಳಕೆ ಕಷ್ಟವಾಗಿದೆ.

Advertisement

ಕೇಂದ್ರ ಸರ್ಕಾರದ ಥಿಂಕ್‌ ಎನರ್ಜಿ ಯೋಜನೆ ಅಡಿ ಬೆಂಗಳೂರು ವಿವಿ, 2018ರ ಅಕ್ಟೋಬರ್‌ ತಿಂಗಳಲ್ಲೇ ತನ್ನ ಆರು ಕಟ್ಟಡಗಳಿಗೆ ರೂಫ್ಟಾಪ್‌ ಸೋಲಾರ್‌ ಪ್ಯಾನಲ್‌ ಅಳವಡಿಕೆ ಪೂರ್ಣಗೊಳಿಸಿದ್ದು, ಬೆಸ್ಕಾಂ ಅನುಮತಿಗಾಗಿ ಕಾಯುತ್ತಿದೆ. ಒಂದೊಮ್ಮೆ ನಿಯಮಾವಳಿ ಗೊಂದಲ ನಿವಾರಣೆ ಆಗದೆ ಅನುಮತಿ ದೊರೆಯದಿದ್ದರೆ 2019-20ರಲ್ಲಿ ವಿವಿಯು ಬೆಸ್ಕಾಂ ಬಿಲ್‌ ಪಾವತಿ ರೂಪದಲ್ಲಿ ಒಂದೂವರೆ ಕೋಟಿ ರೂ. ನಷ್ಟ ಅನುಭವಿಸಲಿದೆ.

ಯಾವುದೇ ಖಾಸಗಿ ವ್ಯಕ್ತಿ ತನ್ನ ಸ್ವಂತ ಖರ್ಚಿನಲ್ಲೇ ಮನೆ ಮೇಲೆ ಸೋಲಾರ್‌ ಅಳವಡಿಸಬೇಕು ಎಂದು ಕೆಇಆರ್‌ಸಿ ನಿಯಮ ತಿಳಿಸುತ್ತದೆ. ಆದರೆ ಬೆಂಗಳೂರು ವಿವಿ, ಸೋಲಾರ್‌ ವಿದ್ಯುತ್‌ಗಾಗಿ ಕೇಂದ್ರ ಸರ್ಕಾರದ “ಥಿಂಕ್‌ ಇಂಡಿಯಾ’ ಕಾರ್ಯಕ್ರಮದಡಿ ಸೋಲಾರ್‌ ಪ್ಯಾನಲ್‌ ಅಳವಡಿಸಿದೆ. ಆದರೆ, ಈವರೆಗೂ ಕಟ್ಟಡದ ಮಾಲಿಕರಿಗೆ ಮಾತ್ರ ರೂಫ್ಟಾಪ್‌ ಸೋಲಾರ್‌ ಅಳವಡಿಕೆಗೆ ಬೆಸ್ಕಾಂ ಅವಕಾಶ ನೀಡುತಿದೆ.

ಪ್ರಸಕ್ತ ಪ್ರಕರಣದಲ್ಲಿ ವಿವಿ ಥರ್ಡ್‌ ಪಾರ್ಟಿ ಮೂಲಕ (ಥಿಂಕ್‌ ಇಂಡಿಯಾ) ಹೂಡಿಕೆ ಮಾಡಿಸಿದೆ. ಹಾಗಾಗಿ ರೂಫ್ ಟಾಪ್‌ ಸೋಲಾರ್‌ ವಿದ್ಯುತ್‌ ಬಳಸಲು ವಿವಿಗೆ ಬೆಸ್ಕಾಂ ಅನುಮತಿ ನೀಡಬೇಕೆಂದರೆ ಕೆಇಆರ್‌ಸಿ ಮೂಲಕ ಕಾಯ್ದೆ ತಿದ್ದುಪಡಿ ಆಗಬೇಕು. ಕೆಇಆರ್‌ಸಿ ಥರ್ಡ್‌ ಪಾರ್ಟಿ ಕರಡು ಸಿದ್ಧಪಡಿಸಿ ಅನುಮತಿಗೆ ಅವಕಾಶ ನೀಡಿದರೆ ಮಾತ್ರ ವಿವಿಯ ಸೋಲಾರ್‌ ಗ್ರಿಡ್‌ ಕಾರ್ಯ ನಿರ್ವಹಿಸಲಿದೆ.

ಬೆಂಗಳೂರು ವಿವಿ ದಿನವೊಂದಕ್ಕೆ 300 ಕಿಲೋ ವ್ಯಾಟ್‌ ವಿದ್ಯುತ್‌ ಬಳಸುತ್ತಿದೆ. ಸದ್ಯ 450ರಿಂದ 500 ಕಿಲೋ ವ್ಯಾಟ್‌ ವಿದ್ಯುತ್‌ ತಯಾರಿಸುವ ಸಾಮರ್ಥ್ಯವುಳ್ಳ ರೂಫ್ ಟಾಪ್‌ ಸೋಲಾರ್‌ ಅಳವಡಿಸಿದ್ದು, ಬೆಸ್ಕಾಂ ಅನುಮತಿ ಸಿಕ್ಕ ಕೂಡಲೆ ತನಗೆ ಬೇಕಿರುವ ವಿದ್ಯುತ್‌ ತಾನೇ ಉತ್ಪಾದಿಸಿಕೊಳ್ಳುವ ಜತೆಗೆ ಹೆಚ್ಚುವರಿ ವಿದ್ಯುತ್‌ ಅನ್ನು ಮಾರುಕಟ್ಟೆ ಬೆಲೆಗೆ ಬೆಸ್ಕಾಂಗೆ ಮಾರಾಟ ಮಾಡಲಿದೆ. ಇನ್ನು ಕಡಿಮೆ ಉತ್ಪತ್ತಿಯಾದರೆ ಹೆಚ್ಚುವರಿ ವಿದ್ಯುತ್‌ ಅನ್ನು ಬೆಸ್ಕಾಂ ಪೂರೈಸಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪವರಿ ಗ್ರಿಡ್‌ ಕೂಡ ಸಿದ್ಧವಾಗಿದೆ.

Advertisement

15 ದಿನಗಳಲ್ಲಿ ಇತ್ಯರ್ಥ?: ಬೆಸ್ಕಾಂನ ಅನುಮತಿ ಇಲ್ಲದೆ ರೂಫ್ಟಾಪ್‌ ಸೋಲಾರ್‌ ಪ್ಯಾನಲ್‌ ಅಳವಡಿಸಿದ ಬೆಂಗಳೂರು ವಿಶ್ವವಿದ್ಯಾಲಯ, ಬಳಿಕ ಅನುಮತಿಗೆ ಅರ್ಜಿ ಸಲ್ಲಿಸಿದೆ. ಈವರೆಗೆ ಕಟ್ಟಡ ಮಾಲಿಕರಿಗೆ ಮಾತ್ರ ರೂಫ್ ಟಾಪ್‌ ಸೋಲಾರ್‌ ಅಳವಡಿಕೆಗೆ ಅನುಮತಿ ನೀಡಲಾಗುತಿತ್ತು. ಆದರೆ ಬೆಂಗಳೂರು ವಿವಿ ಸಂಪೂರ್ಣವಾಗಿ ತನ್ನದೇ ಖರ್ಚಿನಲ್ಲಿ ಸೋಲಾರ್‌ ಅಳವಡಿಸದೆ, ಥರ್ಡ್‌ ಪಾರ್ಟಿಯಿಂದ ಹೂಡಿಕೆ ಮಾಡಿಸಿದೆ. ಈ ರೀತಿಯ ಪ್ರಕರಣ ಇದೇ ಮೊದಲಾಗಿದ್ದು, ಇದಕ್ಕಾಗಿ ಕೆಇಆರ್‌ಸಿ ಕರಡು ಸಿದ್ಧಪಡಿಸಬೇಕಿದೆ. 15 ದಿನಗಳಲ್ಲಿ ಕೆಇಆರ್‌ಸಿ ಸಭೆ ನಡೆಯಲಿದ್ದು, ಈ ವೇಳೆ ಬೆಂಗಳೂರು ವಿವಿ ಸೋಲಾರ್‌ ಗ್ರಿಡ್‌ಗೆ ಅನುಮತಿ ನೀಡಬೇಕೋ ಬೇಡವೋ ಎಂಬುದು ಇತ್ಯರ್ಥವಾಗುವ ಸಾಧ್ಯತೆಯಿದೆ.

ವಿವಿಯು ಪ್ರತಿ ವರ್ಷ 2.5 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಸುತ್ತಿದೆ. ಇದರಿಂದ ಹಣ ವ್ಯರ್ಥವಾಗುವುದನ್ನು ತಡೆಯಲು ರೂಫ್ಟಾಪ್‌ ಸೋಲಾರ್‌ ವ್ಯವಸ್ಥೆ ಮಾಡಲಾಗಿದೆ. ಪ್ಯಾನಲ್‌ ಅಳವಡಿಸಿ, ಗ್ರಿಡ್‌ ಕಾಮಗಾರಿ ಮುಗಿಸಿದ್ದು, ಬೆಸ್ಕಾಂ ಅನುಮತಿ ನೀಡಬೇಕಿದೆ.
-ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂಗಳೂರು ವಿವಿ ಕುಲಪತಿ

ಬೆಂಗಳೂರು ವಿವಿ ಬೆಸ್ಕಾಂ ಗ್ರಾಹಕರಾಗಿರುವ ಕಾರಣ ಕೆಇಆರ್‌ಸಿಗೆ ಪತ್ರ ಬರೆಯಲಾಗಿದೆ. ಕೆಇಆರ್‌ಸಿ ಕರಡು ಸಿದ್ಧಪಡಿಸಿ ಅನುಮತಿ ನೀಡಲು ಸೂಚನೆ ನೀಡಿದ ಕೂಡಲೆ ಸೋಲಾರ್‌ ವಿದ್ಯುತ್‌ ಬಳಸಲು ವಿವಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ 15 ದಿನಗಳಲ್ಲಿ ಕೆಇಆರ್‌ಸಿ ಸಭೆ ಕರೆದಿದ್ದು, ಥರ್ಡ್‌ ಪಾರ್ಟಿ ಹೂಡಿಕೆ ಮಾಡಿಸಿರುವ ಬೆಂಗಳೂರು ವಿವಿ, ಜಿಕೆವಿಕೆ ಸೇರಿ ನಾಲ್ಕು ಗ್ರಾಹಕರಿಗೆ ಅನುಮತಿ ನೀಡಲು ಬೆಸ್ಕಾಂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
-ಶೀಲಾ, ಬೆಸ್ಕಾಂ ಬೇಡಿಕೆ ಮತ್ತು ಸರಬರಾಜು ನಿರ್ವಹಣೆ ಜಿಎಂ

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next