Advertisement

Solar Panel: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್‌ ಶಕ್ತಿ…

09:22 PM Aug 14, 2024 | Team Udayavani |

ಉಡುಪಿ ಜಿಲ್ಲೆಗೆ ಒಟ್ಟು 2.60 ಕೋ.ರೂ.ವೆಚ್ಚ
ಕಾರ್ಕಳ: ದೇಶವು ಸ್ವಾತಂತ್ರೋತ್ಸವ ಸಂಭ್ರಮದಲ್ಲಿರುವ ಹೊತ್ತಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿಶೇಷ ಉಡುಗೊರೆ ಸಿಗಲಿದೆ.

Advertisement

ಉಡುಪಿ ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೆಲ್ಕೋ ಸೋಲಾರ್‌ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ನೇತೃತ್ವದಲ್ಲಿ ಸೋಲಾರ್‌ ಅಳವಡಿಕೆಯನ್ನು ಆರಂಭಿಸಿ ಸ್ವಾತಂತ್ರ್ಯದ ದಿನದಂದು ಪೂರ್ಣಗೊಳಿಸಿ ಹಸ್ತಾಂತರಿಸಲಿದೆ. ಸೋಲಾರ್‌ ಅಳವಡಿಕೆಯ ಒಟ್ಟು ಖರ್ಚಿನ ಶೇ.50ರಷ್ಟನ್ನು ಸೆಲ್ಕೋ ಭರಿಸುತ್ತಿದೆ. ಉಳಿದ ಹಣ ಹೊಂದಾಣಿಕೆಗೆ 17 ಸಂಘ ಸಂಸ್ಥೆಗಳು ಕೈಜೋಡಿಸಿವೆ. 61 ಆರೋಗ್ಯ ಕೇಂದ್ರಗಳಲ್ಲಿ 2.60 ಕೋ.ರೂ. ವೆಚ್ಚದಲ್ಲಿ ವಿದ್ಯುತ್‌ ಸಂಪರ್ಕ ನೀಡಲಾಗಿದೆ.

ರಾಜ್ಯದಲ್ಲಿರುವ 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 1,152 ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಸೆಲ್ಕೋ ಫೌಂಡೇಶನ್‌ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಸೋಲಾರ್‌ ವ್ಯವಸ್ಥೆ ಕಲ್ಪಿಸುವ ಚಿಂತನೆಯೂ ಇದೆ ಎಂದು ಸೆಲ್ಕೋತಿಳಿಸಿದೆ.

ಎಲ್ಲೆಲ್ಲಿ ಸೋಲಾರ್‌ ಬೆಳಕು: ಉಡುಪಿ ಜಿಲ್ಲೆಯ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1 ಉಪ ಆರೋಗ್ಯ ಕೇಂದ್ರ, 1 ಆಯುರ್ವೇದ ಸೆಂಟರ್‌, ಮುಖ್ಯ ಮಲೇರಿಯಾ ಸೆಂಟರ್‌ ಸಹಿತ ಒಟ್ಟು 61 ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್‌ ದೀಪ ಬೆಳಗಲಿದೆ. ಇದರ ಒಟ್ಟು ವೆಚ್ಚ 2.60 ಕೋಟಿ ರೂ. ಇದರಿಂದಾಗಿ ಈ ಕೇಂದ್ರಗಳಿಂದ ಸರಕಾರಕ್ಕೆ ಹೊರೆಯಾಗುತ್ತಿದ್ದ 5 ಲಕ್ಷ ರೂ. ವಿದ್ಯುತ್‌ ಬಿಲ್‌ ಕಡಿಮೆಯಾಗಲಿದೆ.

ದ.ಕ. ಜಿಲ್ಲೆಯಲ್ಲೂ 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್‌ ಅಳವಡಿಕೆಗೆ ನಿರ್ಧರಿಸಲಾಗಿದೆ. 5 ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಅಲ್ಲಿ ಅಳವಡಿಕೆ ಸಂಬಂಧ ಸಹಭಾಗಿತ್ವ ಸಂಸ್ಥೆಗಳ ಸಂಪರ್ಕ ನಡೆದಿದೆ. ಜಿಲ್ಲಾ ಆರೋಗ್ಯಾಧಿಕಾರಿ, ಜಿ.ಪಂ. ಅಧಿಕಾರಿಗಳ ಜತೆ ಚರ್ಚೆ ನಡೆದು ಪ್ರಗತಿ ಹಂತದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ವಿಶೇಷವಾಗಿ ಈಗ ಪೂರ್ಣಗೊಂಡಿದೆ.

Advertisement

ಕೊರೊನಾ ಕಾಲದಲ್ಲೂ ಕೈ ಹಿಡಿದಿತ್ತು
2021ರಲ್ಲಿ ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಲಾರ್‌ ಅಳವಡಿಸುವ ಮೂಲಕ ಈ ಅಭಿಯಾನ ಆರಂಭಗೊಂಡಿತು. 2021ರ ಕೊರೊನಾ ಕಾಲಘಟ್ಟದಲ್ಲಿ ಸೋಲಾರ್‌ ಆಧಾರಿತ ಕಿಯೋಸ್ಕ್ ಸ್ವಾಬ್‌ ಕಲೆಕ್ಷನ್‌ ಸೆಂಟರ್‌ ಹಾಗು ಸೋಲಾರ್‌ ಆಧಾರಿತ ಮೊಬೈಲ್‌ ಸ್ವಾಬ್‌ ಕಲೆಕ್ಷನ್‌ ಸೆಂಟರ್‌ ಅನ್ನು ಸೆಲ್ಕೋ ಸೋಲಾರ್‌ ರೂಪಿಸಿತ್ತು.

ಯಾವ್ಯಾವ ಸಂಸ್ಥೆಗಳ ನೆರವು?
ಟಿಎಂಜಿ ಸುನಿಧಿ ಫೌಂಡೇಶನ್‌ ಮಣಿಪಾಲ, ಕ್ಯಾನ್‌ಫಿನ್‌ ಹೋಮ್ಸ್, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಆರ್‌ಎಸ್‌ ಕಮಿಟಿ ಬೆಳ್ವೆ ಮತ್ತು ಶಂಕರ ನಾರಾಯಣ, ರೋಬೋಸಾಫ್ಟ್ ಉಡುಪಿ, ಇನ್ವೆಂಜರ್‌ ಟೆಕ್ನಾಲಜೀಸ್‌ ಕಟಪಾಡಿ, ಕೆ.ಎಂ.ಉಡುಪ ಫೌಂಡೇಶನ್‌ ಮಂದಾರ್ತಿ, ಕುಸುಮ ಫೌಂಡೇಶನ್‌, ರೋಟರಿ ಕ್ಲಬ್‌ ಸಂತೆಕಟ್ಟೆ, ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ, ಕೆ.ಸಿ. ಹೆಗ್ಡೆ ಫ್ಯಾಮಿಲಿ, ಹಟ್ಟಿಯಂಗಡಿ ಸಿದ್ದಿವಿನಾಯಕ ಶಾಲೆ, ಡಾ| ನವೀನ್‌ ಬಲ್ಲಾಳ್‌ ಅಂಬಲಪಾಡಿ ಸ್ಕಾನಿಂಗ್‌ ಸೆಂಟರ್‌, ರೋಟರಿ ಸಂಸ್ಥೆಗಳು, ಅಸ್ಪೆನ್‌ ಇನಾ#† ಪಡುಬಿದ್ರಿ ಸಂಸ್ಥೆಗಳು ಸೆಲ್ಕೋ ಜತೆ ಸಹಕರಿಸುತ್ತಿವೆ.

ಸೆಲ್ಕೋ ಇತರ ಸಂಸ್ಥೆಗಳ ಸಹಕಾರದಲ್ಲಿ ಆರೋಗ್ಯ ಕೇಂದ್ರಗಳಿಗೆ ಬೆಳಕು ನೀಡುವ ಪ್ರಕ್ರಿಯೆ ಎರಡು ವರ್ಷಗಳ ಹಿಂದೆ ಆರಂಭಗೊಂಡಿತ್ತು. ಸ್ವಾತಂತ್ರೊತ್ಸವದ ಸಂಭ್ರಮಕ್ಕೆ ಈಗ ಬೆಳಕು ಹರಿದಿರುವುದು ಹೊಸ ಮೈಲುಗಲ್ಲು.
– ಡಾ| ಗಡಾದ್‌, ಜಿಲ್ಲಾ ಆರೋಗ್ಯಾಧಿಕಾರಿ

ಗುಡ್ಡಗಾಡು ಹಾಗೂ ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್‌ ಬೆಳಕು ಹರಿಸಲು ನಾವೆಲ್ಲ ಕೈ ಜೋಡಿಸಿದ್ದೇವೆ.
– ಗುರುಪ್ರಕಾಶ್‌ ಶೆಟ್ಟಿ, ಡಿಜಿಎಂ, ಸೆಲ್ಕೋ ಸೋಲಾರ್‌ ಸಂಸ್ಥೆ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next