Advertisement
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾಭವನದ ಸಹಯೋಗದಲ್ಲಿ ಶನಿವಾರ ನಡೆದ ಸಚಿವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಎಂ ಕುಸುಮ ಯೋಜನೆಯಿಂದ 3.3.15 ಲಕ್ಷ ರೈತರಿಗೆ ಅನುಕೂಲವಾಗಲಿದೆ. ವೈಯಕ್ತಿಕ ಪಂಪ್‌ಸೆಟ್‌ಗೆ ಸೋಲಾರ್ ಅಳವಡಿಸಲು ಈವರೆಗೂ ಅವಕಾಶ ನೀಡಲಾಗುತಿತ್ತು. ಎಲ್ಲ ರೈತರಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಫೀಡರ್‌ಗಳಿಗೆ ಸೋಲರ್ ಅಳವಡಿಸಲಿದ್ದೇವೆ. ಸುಮಾರು ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಸಿಗಲಿದೆ ಎಂದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈಗಾಗಲೇ 28 ಸಾವಿರ ಅರ್ಜಿ ಬಂದಿದೆ. ಹಾಗೆಯೇ ಆಯ್ಕೆ ಸಮಿತಿಯು ತೆರೆಮರೆಯ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಬಂದಿರು ಅರ್ಜಿ ಹಾಗೂ ಸಾಧಕರನ್ನು ಪರಿಗಣನೆಗೆ ತೆಗೆದುಕೊಂಡು 67 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ಆಯ್ಕೆಯ ಸವಾಲಿದೆ. ಯಾರ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ. ಕೋಟಿ ಕಂಠ ಗಾಯನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಮ್ಯೂಸಿಯಂ ಎಲ್ಲಿ?
ಡಾ. ಶಿವರಾಮ ಕಾರಂತರು ಇದ್ದ ಮನೆ, ಉಪಯೋಗಿಸಿದ ವಸ್ತು ಇತ್ಯಾದಿಗಳನ್ನು ಸೇರಿಸಿ ಮ್ಯೂಸಿಯಂ ಮಾಡಲು ಇಲಾಖೆಯಿಂದ ಯಾವುದೇ ತಕರಾರು ಇಲ್ಲ. ಕೋಟದಲ್ಲಿ ಅಥವಾ ಪುತ್ತೂರಿನಲ್ಲಿ ಮಾಡಬೇಕೇ ಎಂಬುದರ ಬಗ್ಗೆ ಅವರ ಕುಟುಂಬದ ಸದಸ್ಯರು ಹಾಗೂ ಟ್ರಸ್ಟ್‌ನೊಂದಿಗೆ ಚರ್ಚೆ ಮಾಡಲಾಗುವುದು. ಈ ರೀತಿ ಗೋಪಾಲಕೃಷ್ಣ ಅಡಿಗರು, ಪುತಿನ ಹೀಗೆ ಸಾಹಿತಿಗಳು, ವಿದ್ವಾಂಸರು ಬಳಸಿದ ವಸ್ತುಗಳನ್ನು ಸಾರ್ವಜನಿಕರಿಗೆ ನೋಡಲು ಸೂಕ್ತ ವ್ಯವಸ್ಥೆ ಮಾಡಲಿದ್ದೇವೆ. ಹಾಗೆಯೇ ನಶಿಸಿ ಹೋಗುತ್ತಿರುವ ಕಲಾಪ್ರಕಾರಗಳನ್ನು ಉಳಿಸಲು ಕ್ರಮವಹಿಸಲಿದ್ದೇವೆ. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸಂಬಂಧ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಡುವೆ ಯಾವುದೇ ವೈರುದ್ಯವಿಲ್ಲ. ಬಜೆಟ್‌ನಲ್ಲಿ ನಿಗದಿಪಡಿಸಿದಂತೆ 20 ಕೋ.ರೂ. ಅನುದಾನದಲ್ಲಿ ವ್ಯವಸ್ಥಿತವಾಗಿ ಸಮ್ಮೇಳನ ನಡೆಸಲಿದ್ದೇವೆ ಎಂದರು.
Related Articles
60 ವರ್ಷ ಮೇಲ್ಪಟ್ಟ ದೈವನರ್ತಕರಿಗೆ 2 ಸಾವಿರ ರೂ.ಗಳ ಮಾಸಾಶನ ನೀಡುವ ನಿರ್ಧಾರ ಮಾಡಿದ್ದೇವೆ. ಈ ಸಂಬಂಧ ದೈವನರ್ತಕರ ಸಂಘದೊಂದಿಗೂ ಚರ್ಚೆ ನಡೆಸಲಾಗಿದೆ. ಇಲಾಖೆಯ ಅಧಿಕಾರಿಗಳು ಕೂಡ ದೈವ ನರ್ತಕರ ಮಾಹಿತಿ ಪಡೆದು ಆದಷ್ಟು ಬೇಗ ಇದನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸಂಸದರ ಮೂಲಕ ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದೇವೆ. ತುಳು, ಕೊಡವ, ಲಂಬಾಣಿ ಸಹಿತ ದೇಶದ ವಿವಿಧ ಭಾಗದ 180 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಪ್ರಸ್ತಾವನೆ ಸಲ್ಲಿಸಿವೆ. ತುಳು ಭಾಷೆ ಕಲಿಕೆಗೆ ಸಂಬಂಧಿಸಿದಂತೆ ತುಳು ಶಿಕ್ಷಕರಿಗೆ ಬಾಕಿ ಇರುವ ಗೌರವಧನವನ್ನು ತತ್‌ಕ್ಷಣದಿಂದಲೇ ಬಿಡುಗಡೆ ಇಲಾಖೆಗೆ ಆದೇಶ ಮಾಡಲಾಗುವುದು. ಖಾಯಂ ತುಳು ಶಿಕ್ಷಕರ ನೇಮಕ ಸಂಬಂಧ ಶಿಕ್ಷಣ ಇಲಾಖೆಯ ಜತೆಗೆ ಚರ್ಚೆ ಮಾಡಲಿದ್ದೇವೆ ಎಂದರು.
Advertisement
ಪವರ್ ಕಟ್ ತಡೆಯಲು ಹೊಸ ಮಾರ್ಗಪ್ರತಿ ಮಂಗಳವಾರ ಪವರ್ ಕಟ್ ಆಗುವುದನ್ನು ತಡೆಯಲು ಮೇಲಾಧಿಕಾರಿಗಳ ಜತೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಎಲ್ಲಿ ನಿರ್ವಹಣೆ ಕಾಮಗಾರಿ ನಡೆಯುತ್ತಿದೆಯೋ ಆ ಮಾರ್ಗ ಹೊರತುಪಡಿಸಿ ಬೇರೆಲ್ಲ ಕಡೆ ವಿದ್ಯುತ್ ಇರುವಂತೆ ನೋಡಿಕೊಳ್ಳಲು ತೀರ್ಮಾನಿಸುತ್ತಿದ್ದೇವೆ. ಹಾಗೆಯೇ ಯಾವುದೇ ರೀತಿಯ ಲೋಡ್‌ಶೆಡ್ಡಿಂಗ್ ಇಲ್ಲ. ಬೇಸಗೆಗೆ ಬೇಕಾದ ಸಿದ್ಧತೆಯನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷ 14800 ಮೆಗಾವ್ಯಾಟ್ ಬೇಡಿಕೆ ಪೂರೈಕೆ ಮಾಡಿದ್ದೇವೆ. ಈ ವರ್ಷದ ಬೇಡಿಕೆ ತಕ್ಕಂತೆ ಪೂರೈಕೆಯಾಗಲಿದೆ. ವಿದ್ಯುತ್ ದರ ಪರಿಷ್ಕರಣೆಯನ್ನು ಮೂರು ತಿಂಗಳ ಬದಲಾಗಿ ವರ್ಷಕ್ಕೆ ಒಮ್ಮೆ ಮಾಡುವ ಬಗ್ಗೆಯೂ ಮುಖ್ಯಮಂತ್ರಿಯ ಜತೆ ಚರ್ಚೆ ನಡೆಸಿದ್ದೇವೆ. ಸರಕಾರಿ ಕಚೇರಿಗಳಿಗೆ ಈಗಾಗಲೇ ಪ್ರಿಪೈಡ್ ಮೀಟರ್ ಅಳವಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಅಭಿಯಾನವನ್ನು ಎರಡನೇ ಬಾರಿಗೆ ನ.1ರಿಂದ 15ರ ವರೆಗೆ ನಡೆಯಲಿದೆ. ರಾಜ್ಯಾದ್ಯಂತ ಟ್ರಾನ್ಸ್‌ಫಾರ್ಮರ್ ಬ್ಯಾಂಕ್‌ಗಳನ್ನು ನಿರ್ಮಾಣ ಮಾಡಿದ್ದೇವೆ. ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ನಡೆಯುತ್ತಿದೆ. ಬೆಳಕು ಯೋಜನೆಯಡಿ 2.50 ಲಕ್ಷ ಮನೆಗೆ ವಿದ್ಯುತ್ ನೀಡಿದ್ದು, 2ನೇ ಹಂತದಲ್ಲಿ 1.50 ಲಕ್ಷಕ್ಕೂ ಅಧಿಕ ಮನೆಗೆ ವಿದ್ಯುತ್ ಪೂರೈಕೆ ಮಾಡಲಿದ್ದೇವೆ ಎಂದು ತಿಳಿಸಿದರು.