Advertisement
ಕುಂದಾಪುರ, ಬೈಂದೂರು ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನ ಪ್ರದೇಶಗಳಾದ ಅಮಾಸೆಬೈಲು, ಬೆಳ್ವೆ, ಹೆಂಗವಳ್ಳಿ, ನಡಂಬೂರು, ಹೊಸಂಗಡಿ, ಮಚ್ಚಟ್ಟು, ಶೇಡಿಮನೆ, ಮಡಾಮಕ್ಕಿ, ಕೊಲ್ಲೂರು, ಜಡ್ಕಲ್, ಮುದೂರು, ಹಳ್ಳಿಹೊಳೆ, ಕಮಲಶಿಲೆ, ಯಡಮೊಗೆ, ಉಳ್ಳೂರು -74, ಆಜ್ರಿ, ಕೊಡ್ಲಾಡಿ, ಮತ್ತಿತರ ಭಾಗಗಳಲ್ಲಿ ಪ್ರತಿ ವರ್ಷವೂ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಲು ಹರಸಾಹಸ ಪಡುತ್ತಾರೆ. ಈ ಭಾಗದ ರೈತರು ಏನೇ ಪ್ರಯೋಗ ಮಾಡಿದರೂ ಕಾಡು ಪ್ರಾಣಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಗದ್ದೆಗಳಿಗೆ ಸೋಲಾರ್ ಬೇಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಹಾಲಾಡಿ, ಅಮಾಸೆಬೈಲು, ಬೆಳ್ವೆ, ಜಡ್ಡಿನಗದ್ದೆ, ತೊಂಭತ್ತು, ಕುಳ್ಳುಂಜೆ, ರಟ್ಟಾಡಿ, ಮರೂರು, ಶೇಡಿಮನೆ ಸೇರಿದಂತೆ ಈ ಭಾಗದ ಸುಮಾರು 35 ಮಂದಿ ತಮ್ಮ ಗದ್ದೆಗಳಿಗೆ ಈ ಸೋಲಾರ್ ಬೇಲಿಯನ್ನು ಅಳವಡಿಸಿದ್ದಾರೆ. ಅದರಲ್ಲೂ ಅಮಾಸೆಬೈಲು ಭಾಗದಲ್ಲೇ 15 ಕ್ಕೂ ಹೆಚ್ಚು ಮಂದಿ ಈ ಸೋಲಾರ್ ಬೇಲಿಯನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಕೃಷಿಗೆ ಯಾವುದೇ ಹಾನಿಯಾಗಿಲ್ಲ
ಹಿಂದೆ ಕೃಷಿಗೆ ಕಾಡುಪ್ರಾಣಿಗಳು ನಿರಂತರವಾಗಿ ದಾಂಗುಡಿಯಿಡುತ್ತಿದ್ದವು. ಆದರೆ ಈ ಸಲ ಸೋಲಾರ್ ಬೇಲಿ ಅಳವಡಿಸಿದ್ದೇವೆ. ಈ ಬಾರಿ ಯಾವುದೇ ಪ್ರಾಣಿಗಳಿಂದ ಕೃಷಿಗೆ ಹಾನಿಯಾಗಿಲ್ಲ ಎನ್ನುವುದಾಗಿ ಜಡ್ಡಿನಗದ್ದೆಯ ಕೃಷಿಕರಾದ ಗಿರಿಜಾ ಹೇಳುತ್ತಾರೆ.
Related Articles
Advertisement
ಕಡಿಮೆ ವೆಚ್ಚಗದ್ದೆಗಳಿಗೆ ವಿದ್ಯುತ್ ತಂತಿ ಅಳವಡಿಕೆ ಅಪಾಯಕಾರಿ ಹಾಗೂ ದುಬಾರಿಯೂ ಹೌದು. ಆದರೆ ಸೋಲಾರ್ ಬೇಲಿಯಿಂದ ಯಾವುದೇ ಅಪಾಯವಿಲ್ಲ. ಶಾಕ್ ತಗುಲಿ, ಹೆದರಿ ಓಡುತ್ತವೆ. ಇದರಿಂದ ಪ್ರಾಣಿಗಳು ಅಥವಾ ಯಾರ ಜೀವಕ್ಕೆ ಏನು ಅಪಾಯ ಇರುವುದಿಲ್ಲ. ವಿದ್ಯುತ್ ತಂತಿಗಳಿಗೆ ಆದರೆ ಕಲ್ಲಿನ ಅಥವಾ ಕಾಂಕ್ರೀಟ್ ಕಂಬಗಳು ಬೇಕಾಗುತ್ತವೆ. ಆದರೆ ಗದ್ದೆಯ ಸುತ್ತ ಅಡಿಕೆ ಮರದ ಕಂಬಗಳನ್ನು ದೂರ – ದೂರ ಹಾಕಿ, ಈ ಸೋಲಾರ್ ತಂತಿ ಎಳೆಯಲಾಗುತ್ತದೆ. ಹೆಚ್ಚೆಂದರೆ 10 -15 ಸಾವಿರ ರೂ. ವೆಚ್ಚದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸೆಲ್ಕೋ ಸೋಲಾರ್ ಸಂಸ್ಥೆಯ ಸಹಕಾರದೊಂದಿಗೆ ಸೋಲಾರ್ ತಂತಿಯನ್ನು ಅಳವಡಿಸಿಕೊಳ್ಳಬಹುದು. ಗದ್ದೆ ಕಾಯಲು ನಿರ್ಮಿಸಿದ ಹಳ್ಳಿ ಮನೆಗಳ ಮೇಲೆ ಸೋಲಾರ್‌ನ ಪ್ಯಾನಲ್ ಅಳವಡಿಸಬಹುದು. ಅದರ ಬ್ಯಾಟರಿಯನ್ನು ಹಳ್ಳಿಮನೆಯೊಳಗೆ ಇಡಬಹುದು. 35 ಮಂದಿ ಅಳವಡಿಕೆ
ಕೃಷಿಯಲ್ಲಿ ನಷ್ಟವಾಗಲು ಕಾಡು ಪ್ರಾಣಿಗಳ ಹಾವಳಿ ಕೂಡ ಪ್ರಮುಖವಾದುದು. ಇದಕ್ಕಾಗಿ ಕಡಿಮೆ ಖರ್ಚಿನಲ್ಲಿ ಗದ್ದೆಗೆ ಭದ್ರತೆ ಕೊಡಲು ಈ ಸೋಲಾರ್ ಬೇಲಿ ಅಳವಡಿಕೆಗೆ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯು ಸೆಲ್ಕೋ ಸೋಲಾರ್ ಸಂಸ್ಥೆಯ ಮೂಲಕ ರೈತರಿಗೆ ನೆರವಾಗುತ್ತಿದೆ. ಇದಕ್ಕಾಗಿ ಯೋಜನೆಯ ಫಲಾನುಭವಿಗಳಿಗೆ ಸಾಲವನ್ನು ನೀಡಲಾಗುತ್ತಿದೆ. ಈಗಾಗಲೇ 35 ರೈತರು ಸೋಲಾರ್ ಬೇಲಿಯನ್ನು ಅಳವಡಿಸಿಕೊಂಡಿದ್ದಾರೆ. ಮತ್ತಷ್ಟು ಮಂದಿ ಉತ್ಸುಕರಾಗಿದ್ದಾರೆ.
-ಚೇತನ್ ಕುಮಾರ್, ಕೃಷಿ ಅಧಿಕಾರಿ, ಧ. ಗ್ರಾ. ಯೋಜನೆ ಕುಂದಾಪುರ ಪ್ರಶಾಂತ್ ಪಾದೆ