Advertisement

ಫಲಾನುಭವಿಗಳಿಗೆ ಸೌರಶಕ್ತಿ ಚಾಲಿತ ತ್ರಿಚಕ್ರ ಸೈಕಲ್‌ ಹಸ್ತಾಂತರಿಸಿದ ಸಿಎಂ

06:27 PM Sep 09, 2020 | sudhir |

ಬೆಂಗಳೂರು: ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ “ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ’ (ಐಐಎಚ್‌ಆರ್‌) ಅಭಿವೃದ್ಧಿಪಡಿಸಿರುವ ಸೌರಶಕ್ತಿ ಚಾಲಿತ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವ ಅರ್ಕ ತ್ರಿಚಕ್ರ ಸೈಕಲ್‌ಗ‌ಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಫ‌ಲಾನುಭವಿಗಳಿಗೆ ವಿತರಿಸಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ತ್ರಿಚಕ್ರ ಸೈಕಲ್‌ ವಿತರಿಸಿದ ಯಡಿಯೂರಪ್ಪ, ಕೇಂದ್ರ ಸರ್ಕಾರದ ವತಿಯಿಂದ ಪರಿಶಿಷ್ಟ ಜನಾಂಗದವರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, “ಆತ್ಮನಿರ್ಭರ ಭಾರತ’ ಯೋಜನೆಗೆ ಪೂರಕವಾಗಿದೆ. ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಸೌರಶಕ್ತಿ ಚಾಲಿತ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವ ತ್ರಿಚಕ್ರ ಸೈಕಲ್‌ಅನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದೆ. ಈ ಯೋಜನೆಯಿಂದ ಬೀದಿಯಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವ ಬಡ ಫ‌ಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸೌರಶಕ್ತಿ ಚಾಲಿತ ತ್ರಿಚಕ್ರ ಸೈಕಲ್‌ ಅನ್ನು ಸಂಪೂರ್ಣ ಚಾರ್ಜ್‌ ಮಾಡಿದರೆ 50 ಕಿ.ಮೀ.ವರೆಗೆ ಪ್ರಯಾಣಿಸಬಹುದಾಗಿದ್ದು, ವ್ಯಾಪಾರಿಗಳು ನಿರಂತರವಾಗಿ ಹಣ್ಣು, ತರಕಾರಿ ವ್ಯಾಪಾರ ಮಾಡಬಹುದಾಗಿದೆ. ಜತೆಗೆ ಗ್ರಾಹಕರಿಗೂ ಉತ್ತಮ ಗುಣಮಟ್ಟದ ಹಣ್ಣು, ತರಕಾರಿ ಒದಗಿಸಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ತಲುಪಬಹುದಾಗಿದ್ದು, ವ್ಯಾಪಾರಿಗಳು ಹೆಚ್ಚು ಲಾಭ ಗಳಿಸಬಹುದಾಗಿದೆ ಎಂದು ಹೇಳಿದರು.

ಸೌರಶಕ್ತಿ ಚಾಲಿತ ತ್ರಿಚಕ್ರ ಸೈಕಲ್‌ಅನ್ನು ಸಂಶೋಧಿಸಿದ ಐಸಿಎಆರ್‌ ನಿರ್ದೇಶಕರು, ವಿಜ್ಞಾನಿಗಳು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಗುವುದು. ಹಣ್ಣು, ತರಕಾರಿ ಸಂಶೋಧನೆ ಜತೆಗೆ ಕೃಷಿಕರಿಗೆ ಅಗತ್ಯ ಶಿಕ್ಷಣ, ಮಾರ್ಗದರ್ಶನ ನೀಡುತ್ತಿರುವುದು ಉತ್ತಮವಾಗಿದೆ. ಸುಧಾರಿತ ತ್ರಿಚಕ್ರ ಸೈಕಲ್‌ನ ಪ್ರಯೋಜನವನ್ನು ರೈತರು, ಬೀದಿವ್ಯಾಪಾರಿಗಳು, ವಿಶೇಷವಾಗಿ ರೈತ ಉತ್ಪಾದನಾ ಸಂಘದವರು ಪಡೆಯಲೆಂದು ಆಶಿಸುತ್ತೇನೆ ಎಂದು ಹೇಳಿದರು.

ಬೀದಿ ವ್ಯಾಪಾರಿಗಳು ತಳ್ಳುಗಾಡಿಯಲ್ಲಿ ಗರಿಷ್ಠ 50 ಕೆ.ಜಿ. ಹಣ್ಣು, ತರಕಾರಿ ತುಂಬಿಕೊಂಡು ಮಾರಾಟ ಮಾಡಬಹುದು. ಈ ಸುಧಾರಿತ ತ್ರಿಚಕ್ರ ಸೈಕಲ್‌ನಲ್ಲಿ ಎಂಟು ಪ್ಲಾಸ್ಟಿಕ್‌ ಕ್ರೇಟ್‌ಗಳಲ್ಲಿ ಗರಿಷ್ಠ 200 ಕೆ.ಜಿ. ತರಕಾರಿ, ಹಣ್ಣು ಸಾಗಿಸಬಹುದಾದ ರೀತಿಯಲ್ಲಿ ವಿನ್ಯಾಸಪಡಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ (ಕೃಷಿ ಎಂಜಿನಿಯರಿಂಗ್‌) ಡಾ.ಸೆಂಥಿಲ್‌ ಕುಮಾರ್‌ ತಿಳಿಸಿದರು.

Advertisement

ಈ ತ್ರಿಚಕ್ರ ಸೈಕಲ್‌ನಲ್ಲಿ ತರಕಾರಿ, ಹಣ್ಣುಗಳಿಗೆ ಹವಾನಿಯಂತ್ರಿತ ಮಾದರಿಯ ನೀರು ಸಿಂಪಡಣೆ ವ್ಯವಸ್ಥೆ ಇದ್ದು, ಎರಡು ದಿನದವರೆಗೆ ಕೆಡದಂತೆ ತಡೆಯುವ ಜತೆಗೆ ತಾಜಾ ಇರುವಂತೆಯೂ ಕಾಪಾಡಿಕೊಳ್ಳಲು ಅವಕಾಶವಿದೆ. ಕೋಯ್ಲೋತ್ತರ ಪದ್ದತಿಯಲ್ಲಿ ಶೇ. 10ರಿಂದ ಶೇ. 20ರಷ್ಟು ಬೆಳೆ ನಷ್ಟವಾಗುತ್ತಿದೆ. ಆದರೆ ಸುಧಾರಿತ ತ್ರಿಚಕ್ರ ಸೈಕಲ್‌ನಿಂದ ದೂಳು, ಬಿಸಿಲಿಗೆ ಹಣ್ಣು, ತರಕಾರಿ ಹಾನಿಯಾಗದಂತೆ ತಡೆಯುವ ಜತೆಗೆ ನಷ್ಟ ಪ್ರಮಾಣ ತಗ್ಗಿಸಬಹುದು ಎಂದು ಹೇಳಿದರು.

ಸುಧಾರಿತ ತ್ರಿಚಕ್ರ ಸೈಕಲ್‌ಗೆ ಸುಮಾರು 1.50 ಲಕ್ಷ ರೂ. ತಗುಲಲಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಸಂಸ್ಥೆಯ ಅನುದಾನದಡಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ತಲಾ ಐದು ಮಂದಿ ಅರ್ಹ ವ್ಯಾಪಾರಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಅದರಂತೆ ಬುಧವಾರ ಪರಿಶಿಷ್ಟ ಜಾತಿಯ ಐದು ಮಂದಿ ಅರ್ಹರಿಗೆ ಹಂಚಿಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡದ ಐದು ಮಂದಿಗೆ ಸದ್ಯದಲ್ಲೇ ವಿತರಿಸಲಾಗುವುದು. ಫ‌ಲಾನುಭವಿಗಳು ಈ ತ್ರಿಚಕ್ರ ಸೈಕಲ್‌ಅನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತದೆ. ಒಂದೊಮ್ಮೆ ಸದ್ಬಳಕೆ ಮಾಡಿಕೊಳ್ಳದಿದ್ದರೆ ಹಿಂಪಡೆಯಲಾಗುತ್ತದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್‌, ಐಐಎಚ್‌ಆರ್‌ ನಿರ್ದೇಶಕ ದಿನೇಶ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next