Advertisement

ಸೋಲಾರ್‌ ಕಾರು, ಬ್ಯಾಟರಿ ಸ್ಕೂಟರ್‌; ಎಂಐಟಿಯೊಳಗೆ ಆವಿಷ್ಕಾರ ಲೋಕ!

11:34 PM Feb 29, 2020 | Sriram |

ಉಡುಪಿ: ವೈದ್ಯಕೀಯ ಲೋಕ, ತಂತ್ರಜ್ಞಾನ, ಆಹಾರೋತ್ಪನ್ನ ಸಹಿತ ಹಲವಾರು ಕ್ಷೇತ್ರಗಳ ವಿಭಿನ್ನ ಪರಿಕಲ್ಪನೆಯ ಮಾದರಿಗಳು ಎಂಐಟಿಯ ಇನ್ನೋವೇಷನ್‌ ಸೆಂಟರ್‌ನಲ್ಲಿ ಶನಿವಾರ ಅನಾವರಣಗೊಂಡಿತು.

Advertisement

ಮಣಿಪಾಲ ಉದ್ಯಮಶೀಲತಾ ಸಮ್ಮಿಲನದಲ್ಲಿ ಕ್ಯಾನ್ಸರ್‌ ರೋಗಿಗಳ ಆರೈಕೆ ಹೇಗೆ ಮಾಡಿದರೆ ಒಳಿತು… ಎಕ್ಸ್‌ರೇ ಸೈಡ್‌ ಎಫೆಕ್ಟ್ ತಡೆಯುವುದು ಹೇಗೆ? ಎಲೆಕ್ಟ್ರಿಕ್‌ ಸ್ಕೂಟರ್‌, ಡ್ರೋನ್‌ ಕೆಮರಾ, ಮೊಬೈಲ್‌ನಲ್ಲೇ ಆರೋಗ್ಯ ಆರೈಕೆ, ರೇಸಿಂಗ್‌ ಕಾರ್‌, ಏರೋಪ್ಲೇನ್‌ಗಳು ಅಲ್ಲಿದ್ದವು. ಅಂದಹಾಗೆ ಇವೆಲ್ಲವುಗಳನ್ನು ಸಿದ್ಧಪಡಿಸಿದ್ದು ವಿದ್ಯಾರ್ಥಿಗಳೇ.

ವೈದ್ಯಕೀಯ, ಎಂಜಿನಿಯರಿಂಗ್‌, ಅಲೈಡ್‌ ಹೆಲ್ತ್‌ ಸೈನ್ಸ್‌, ಕಾಲೇಜ್‌ ಆಫ್ ನರ್ಸಿಂಗ್‌ ಫ್ಯಾಕಲ್ಟಿ, ಎಂಸಿಎಚ್‌ಪಿ, ಎಂಐಟಿ ಸಹಿತ ಹಲವಾರು ಸಂಸ್ಥೆಯ ಸುಮಾರು 41 ತಂಡಗಳು ಹಾಗೂ 150 ಮಂದಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಹೊಸ ಆವಿಷ್ಕಾರ ಮತ್ತು ಉದ್ಯಮಶೀಲತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಮ್ಮಿಲನ ವಿದ್ಯಾರ್ಥಿಗಳ ಪ್ರತಿಭೆಗೆ ಒಂದು ವೇದಿಕೆಯಾಯಿತು.

350 ಕಿ.ಮೀ. ಮೈಲೇಜ್‌ ನೀಡುವ ಸೋಲಾರ್‌ ಕಾರ್‌
ಇಂಧನ ದರ ಏರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಮೈಲೇಜ್‌ ನೀಡುವ ವಾಹನಗಳ ಬೇಡಿಕೆ ಹೆಚ್ಚಿದೆ. ಇದಕ್ಕೆ ಉತ್ತರವೆಂಬಂತೆ 30 ಮಂದಿ ವಿದ್ಯಾರ್ಥಿಗಳು ಸೇರಿ ಅಭಿವೃದ್ಧಿ ಪಡಿಸಿದ ಸೋಲಾರ್‌ ಮೊಬೈಲ್‌ ಕಾರ್‌ ಎಸ್‌ಎಂಎಸ್‌-2 ಗಮನಸೆಳೆಯಿತು.

ಎರಡು ಸೀಟುಗಳುಳ್ಳ ಈ ಸೋಲಾರ್‌ ಕಾರ್‌14 ಗಂಟೆ ಕಾಲ ಚಾರ್ಜ್‌ ಆದರೆ 350 ಕಿ.ಮೀ. ಮೈಲೇಜ್‌ ನೀಡುತ್ತದಂತೆ. ಇದಕ್ಕಾಗಿ ಕಾರಿನ ಮುಂಭಾಗದಲ್ಲಿ ಸೋಲಾರ್‌ ಪ್ಯಾನಲ್‌ ಜೋಡಿಸಲಾಗಿದೆ. ಕಾರಿನ ಒಳಭಾಗದಲ್ಲಿ ಚಾಲಕನ ಹಿಂಭಾಗದಲ್ಲಿ ಬ್ಯಾಟರಿ ಬ್ಯಾಕಪ್‌ ಇದೆ.

Advertisement

ಆರೋಗ್ಯ ಕಾಳಜಿ
ಆರೋಗ್ಯ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯಲು ಮೊಬೈಲ್‌ ಆ್ಯಪ್‌ವೊಂದನ್ನು ಆವಿಷ್ಕರಿಸಲಾಗಿದೆ. ಅದರ ಮೂಲಕ ವೈದ್ಯರ ಸೂಚನೆಯ ಮೇರೆಗೆ ಕೈಗೆ ಹಾಕುವ ನೀಕ್ಯಾಪ್‌ ಮೂಲಕ ಎಷ್ಟು ಬಾಗಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಅದರಲ್ಲಿ ದಾಖಲಿಸಲಾಗುತ್ತದೆ. ಪರಿಣಾಮ ವೈದ್ಯರ ಬಳಿಗೆ ತೆರಳದೆಯೇ ಆರೋಗ್ಯ ಕಾಪಾಡಬಹುದಾಗಿದೆ. ಇದರ ಉಪಕರಣಗಳಿಗೆ ತಗಲುವ ವೆಚ್ಚ ಕೇವಲ 1ಸಾವಿರ ರೂ.ಮಾತ್ರ.

ಬ್ಯಾಟರ್‌ಚಾಲಿತ ಸ್ಕೂಟರ್‌
ಹಳೆಯ ಹೊಂಡಾ ಆ್ಯಕ್ಟಿವಾ ಸ್ಕೂಟರ್‌ ಬಿಡಿಭಾಗಗಳನ್ನು ತೆಗೆದು ಲೀಥಿಯಂ ಅಯೋನ್‌ ಬ್ಯಾಟರಿ ಅಳವಡಿಸಲಾಗಿತ್ತು. 4 ಗಂಟೆಗಳ ಕಾಲ ಬ್ಯಾಟರಿ ಚಾರ್ಜ್‌ ಮಾಡಿದರೆ 40 ಕಿ.ಮೀ.ವರೆಗೆ ಸಂಚರಿಸಬಹುದಾಗಿದೆ. ಗರಿಷ್ಠ 25 ಕಿ.ಮೀ.ವೇಗದಲ್ಲಿ ಈ ಸ್ಕೂಟರ್‌ ಚಲಿಸುತ್ತದೆ. ವಿದ್ಯಾರ್ಥಿಗಳಾದ ಸುಯೋನ್‌ ಹಾಗೂ ಪ್ರತೀಕ್‌ ಅವರು ಇದರ ರುವಾರಿಗಳು.

ಅಟೋನೊಮಸ್‌ ಡ್ರೈವ್‌ ಕಾರು
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಕಾರು ಅತ್ಯುತ್ತಮವಾದ ಸೆನ್ಸಾರ್‌ ವ್ಯವಸ್ಥೆಯನ್ನು ಹೊಂದಿದೆ. ಯು.ಎಸ್‌.ನ ಮೇರಿಲ್ಯಾಂಡ್‌ನ‌ಲ್ಲಿ ಇದನ್ನು ಪ್ರದರ್ಶನಕ್ಕಿಡಲಾಗಿತ್ತು. ಅಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿತ್ತು. ಸೆನ್ಸಾರ್‌ ಆಧರಿತ ಕೆಮರಾಗಳ ಮೂಲಕ ದೂರದ ವಸ್ತು ಹಾಗೂ ವಾಹನದ ಆಸುಪಾಸು ಏನೇ ಸಂಭವಿಸಿದರೂ ಚಾಲಕನಿಗೆ ನೇರವಾಗಿ ತಿಳಿಯುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.ಒಟ್ಟಾರೆ ಹೀಗೂ ಮಾಡಬಹುದು ಎಂಬುವುದನ್ನು ಕಲಿಕೆಯ ಹಂತದಲ್ಲಿರುವ ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಟ್ಟಂತಿತ್ತು. ತಂತ್ರಜ್ಞಾನದ ನಾಗಲೋಟ ವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ಒದಗಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next