Advertisement

ಸೊನ್ನಲಿಗೆ ಸಿದ್ಧರಾಮನ ಅಕ್ಷತಾ ಸಮಾರಂಭ

12:12 PM Jan 15, 2020 | Naveen |

ಸೊಲ್ಲಾಪುರ: ಸೊನ್ನಲಿಗೆ ಶರಣ ಶಿವಯೋಗಿ ಸಿದ್ಧರಾಮನ ಜಾತ್ರಾ ಮಹೋತ್ಸವ ದಿನದಂದು ಸಿದ್ಧರಾಮನ ಯೋಗದಂಡವಾಗಿರುವ ಸಪ್ತ ನಂದಿ ಧ್ವಜಗಳಿಗೆ ಸಮ್ಮತಿ ಕಟ್ಟೆ ಮೇಲೆ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ಆಂಧ್ರ, ತೆಲಂಗಾಣದ ಲಕ್ಷಾಂತರ ಭಕ್ತರ ಸಮ್ಮಖದಲ್ಲಿ ಮಂಗಳವಾರ ಸಿದ್ಧರಾಮನ ಅಕ್ಷತಾ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

Advertisement

ತಮಗಾಗಿ ಪ್ರಾಣ ಕೊಡಲು ಸಿದ್ಧಳಾದ ಕುಂಬಾರ ಕನ್ಯೆಯನ್ನು ಸಿದ್ಧರಾಮರು ತಮ್ಮ ಯೋಗದಂಡದೊಂದಿಗೆ ಮದುವೆ ಮಾಡಿದ್ದರ ಸಂಕೇತವಾಗಿ ಪ್ರತಿ ವರ್ಷ ಮಕರ ಸಂಕ್ರಮಣದಂದು ಅಕ್ಷತಾ ಸಮಾರಂಭ ನಡೆಯುತ್ತದೆ. ಅಕ್ಷತಾ ಸಮಾರಂಭ ಅಂಗವಾಗಿ ಏಳು ನಂದಿ ಧ್ವಜಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆ ಮೊದಲು ನಂದಿ ಧ್ವಜಗಳಿಗೆ ಎಣ್ಣೆ ಮಜ್ಜನ ಮಾಡಿಸಲಾಯಿತು.

ಜಾತ್ರೆ ಅಂಗವಾಗಿ ಸಿದ್ಧೇಶ್ವರ ಮಂದಿರ, ಮಲ್ಲಿಕಾರ್ಜುನ ಮಂದಿರ, ಸಿದ್ಧ ರಾಮೇಶ್ವರರು ಸ್ಥಾಪಿಸಿದ 68 ಲಿಂಗಗಳಿಗೆ ಬಣ್ಣ ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅಕ್ಷತಾ ಸಮಾರಂಭಕ್ಕೆ ಚಾಲನೆ: ಸೊನ್ನಲಿಗೆ ಶರಣ ಶಿವಯೋಗಿ ಸಿದ್ಧರಾಮನ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧರಾಮನ ಯೋಗದಂಡವಾಗಿರುವ ನಂದಿ ಧ್ವಜ, ಪಲ್ಲಕ್ಕಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಿಂದ ಮಂದಿರ ತಲುಪಿದ ನಂತರ ಮಧ್ಯಾಹ್ನ 11:35ಗಂಟೆಗೆ ಸಿದ್ಧರಾಮನ ಅಕ್ಷತಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಪ್ರತಿ ವರ್ಷ ಮಧ್ಯಾಹ್ನ 2 ರಿಂದ 3ರ ವರೆಗೆ ಅಕ್ಷತಾ ಸಮಾರಂಭ ನಡೆಯುತಿತ್ತು. ಆದರೆ ಈ ಬಾರಿ ಮಧ್ಯಾಹ್ನ 1:32 ಗಂಟೆಗೆ ಅಕ್ಷತಾ ಸಮಾರಂಭ ನೆರವೇರಿತು. ಸುಮಾರು 950 ವರ್ಷಗಳಿಂದಲೂ ಪರಂಪರ ಗತವಾಗಿ ಪೂಜೆಸಲ್ಲಿಸುತ್ತಾ ಬಂದಿರುವ ಪೂಜಾರಿ ಮನೆತನದ ರಾಜಶೇಖರ ಹಿರೇಹಬ್ಬು ಕುಟುಂಬದ ವತಿಯಿಂದ ಗಂಗಾ ಪೂಜೆ, ಸುಗಡಿ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ
11:35ಗಂಟೆಯಿಂದ ಸಮ್ಮತಿ ಕಟ್ಟೆ ಮೇಲೆ ಬೋಲಾ ಹರ್‌… ಬೋಲಾ ಏಕದಾ ಭಕ್ತಲಿಂಗ ಹರ್‌… ಬೋಲಾ, ಶ್ರೀ ಸಿದ್ಧರಾಮೇಶ್ವರ ಮಹಾರಾಜಕಿ ಜೈ ಎನ್ನುವ ಜೈ ಘೋಷಣೆ ಆರಂಭವಾಗಿ, ಮಧ್ಯಾಹ್ನ 1:32ಗಂಟೆಗೆ ಸಿದ್ಧರಾಮನ ಅಕ್ಷತೆ ಸಮಾರಂಭ ನಡೆಯಿತು. ಭಕ್ತರು ಬಾರಾ ಬಂದಿ ಬಟ್ಟೆಗಳನ್ನು ಧರಿಸಿದ್ದು, ನೋಡುಗರ ಕಣ್ಮನ ಸೆಳೆದರು.

ಕಲಾ ಫೌಂಡೆಶನ್‌ದಿಂದ ರಂಗೋಲಿ: ಸಿದ್ಧರಾಮನ ಯೋಗದಂಡವಾಗಿರುವ ನಂದಿ ಧ್ವಜಗಳು ಮತ್ತು ಪಲ್ಲಕ್ಕಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕಲಾ ಫೌಂಡೆಶನ್‌ದ ರೂಪಾಲಿ ಕುತಾಟೆ, ಕುಮಾರಿ ಶೆಟ್ಟಿ ನೇತೃತ್ವದಲ್ಲಿ ಸುಮಾರು 200 ಕಾರ್ಯಕರ್ತರು ಹಿರೇಹಬ್ಬು ಮಠದಿಂದ ಸಿದ್ಧೇಶ್ವರ ಮಂದಿರದಲ್ಲಿರುವ ಸಮ್ಮತಿ ಕಟ್ಟೆಯ ವರೆಗೆ ಅಂದರೆ ಸುಮಾರು 3 ಕಿ.ಮೀ ಮೆರವಣಿಗೆ ಮಾರ್ಗದಲ್ಲಿ ರಂಗೋಲಿ ಹಾಕಿದ್ದರು.

Advertisement

ಪಾಲ್ಗೊಂಡ ಗಣ್ಯರು: ಶಿವಯೋಗಿ ಸಿದ್ಧರಾಮನ ಅಕ್ಷತಾ ಸಮಾರಂಭದಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ, ಡಿಸಿ ಡಾ| ರಾಜೇಂದ್ರ ಭೋಸಲೆ, ಪೊಲೀಸ್‌ ಆಯುಕ್ತ ಮಹಾದೇವ ತಾಂಬಡೆ, ಪೊಲೀಸ್‌ ಅ ಧೀಕ್ಷಕ ಮನೋಜ ಪಾಟೀಲ, ಶಾಸಕಿ ಪ್ರಣಿತಿ ಶಿಂಧೆ, ಶಾಸಕರಾದ ವಿಜಯಕುಮಾರ ದೇಶಮುಖ, ಸುಭಾಷ ದೇಶಮುಖ, ಸಚಿನ್‌ ಕಲ್ಯಾಣಶೆಟ್ಟಿ, ಸಾಹಿತಿ ಗಿರೀಶ ಜಕಾಪುರೆ ಪಾಲ್ಗೊಂಡಿದ್ದರು.

ಜ. 15 ಮಕರ ಸಂಕ್ರಮಣ ದಿನದಂದು ಹೋಮ ಮೈದಾನದಲ್ಲಿ ಹೋಮ ಪ್ರದೀಪನ ಸಮಾರಂಭ, ಜ. 16ರಂದು ರಾತ್ರಿ 8 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ, ಜ. 17ರಂದು ರಾತ್ರಿ ಮಲ್ಲಿಕಾರ್ಜುನ ಮಂದಿರದಲ್ಲಿ ನಂದಿಧ್ವಜಗಳ ವಸ್ತ್ರವಿಸರ್ಜನೆ ಕಾರ್ಯಕ್ರಮ ನಡೆಯಲಿವೆ.
ಧರ್ಮರಾಜ ಕಾಡಾದಿ,
ಅಧ್ಯಕ್ಷರು, ಸಿದ್ಧೇಶ್ವರ ದೇವಸ್ಥಾನ ಪಂಚ ಸಮಿತಿ

ವಿದ್ಯುತ್‌ ದೀಪಾಲಂಕಾರ ಸಿದ್ಧೇಶ್ವರ ಮಂದಿರ, ಮಲ್ಲಿಕಾರ್ಜುನ ಮಂದಿರ ಹಾಗೂ 68 ಲಿಂಗಗಳಿಗೆ ಬಣ್ಣ-ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತು.

„ಸೋಮಶೇಖರ ಜಮಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next