Advertisement

ಕುಟುಂಬ ಸದಸ್ಯರಿಗೆ ಸಾಂತ್ವನ

11:18 PM Apr 22, 2019 | Lakshmi GovindaRaju |

ತುಮಕೂರು: ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ನಗರದ ಉದ್ಯಮಿ ರಮೇಶ್‌ ಗೌಡ (44) ನಿಧನ ಹೊಂದಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

ಲೋಕಸಭಾ ಚುನಾವಣೆ ಮುಗಿದ ನಂತರ ಬೆಂಗಳೂರಿನ ಗೆಳೆಯರೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ. ಮೃತ ರಮೇಶ್‌ ಗೌಡ ನಗರದ ಸರಸ್ವತಿಪುರಂನ ನಿವಾಸಿಯಾಗಿದ್ದು, ಜನತಾ ಲಿಕ್ಕರ್‌ ಶಾಪ್‌ನ ಮಾಲೀಕರೂ ಹೌದು. ಕಳೆದ ಶನಿವಾರ ಸಂಜೆ ಬೆಂಗಳೂರಿನ ಗೆಳೆಯರೊಂದಿಗೆ ಶ್ರೀಲಂಕಾಗೆ ಪ್ರವಾಸಕ್ಕೆ ತೆರಳಿದ್ದರು.

ಮೃತ ರಮೇಶ್‌ ಗೌಡ ಪತ್ನಿ ಮಂಜುಳಾ, ಮಗಳು ದೀಕ್ಷಾ, ಮಗ ಶೋಭಿತ್‌ ಸೇರಿ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರು ಮೂಲತಃ ಕುಣಿಗಲ್‌ನವರಾಗಿದ್ದು, ಹಲವು ವರ್ಷಗಳಿಂದ ತುಮಕೂರು ನಗರದ ಸರಸ್ವತಿಪುರಂನಲ್ಲಿ ವಾಸವಾಗಿದ್ದರು.

ಶನಿವಾರ ಮಧ್ಯಾಹ್ನ 3 ಗಂಟೆಗೆ ವಿಮಾನದಲ್ಲಿ ಶ್ರೀಲಂಕಾಕ್ಕೆ ತೆರಳಿದ್ದರು. 5 ಗಂಟೆಗೆ ಶ್ರೀಲಂಕಾ ತಲುಪಿರುವುದಾಗಿ ಮನೆಯವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಇವರು ಮೃತಪಟ್ಟಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ವಿಷಯ ತಿಳಿಯುತ್ತಲೇ ಅವರ ಮನೆಗೆ ಸಂಬಂಧಿಕರು, ಜನಪ್ರತಿನಿಧಿಗಳು ಬಂದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ. ತಂದೆಯನ್ನು ಕಳೆದುಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.

Advertisement

ಶಾಸಕ ಜ್ಯೋತಿ ಗಣೇಶ್‌ ಭೇಟಿ: ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, “ರಮೇಶ್‌ ಹಾಗೂ ನಾನು ಗೆಳೆಯರು. ಇಬ್ಬರೂ ಸರ್ವೋದಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೆವು.

ಸ್ನೇಹಿತರೊಂದಿಗೆ ಶ್ರೀಲಂಕಾಗೆ ತೆರಳಿದ್ದಾಗ ದುರ್ಘ‌ಟನೆ ನಡೆದಿದ್ದು, ಇವರೊಂದಿಗೆ ತೆರಳಿದ್ದ ನೆಲಮಂಗಲದ ಶಿವಣ್ಣ ಎಂಬುವರ ಮಾಹಿತಿ ಇನ್ನೂ ದೊರಕಿಲ್ಲ’ ಎಂದರು. “ಪೊಲೀಸ್‌ ಅಧಿಕಾರಿಗಳು ರಮೇಶ್‌ ಅವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು,

ಸಂಜೆ ವೇಳೆಗೆ ಸ್ಪಷ್ಟ ಮಾಹಿತಿ ದೊರಕಲಿದೆ. ಈ ಸಂಬಂಧ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನಿರಂತರವಾಗಿ ಶ್ರೀಲಂಕಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಶೀಘ್ರವೇ ದೇಶಕ್ಕೆ ತರುವ ಚಿಂತನೆ ನಡೆಸುತ್ತಿದ್ದಾರೆ’ ಎಂದರು.

ಗಣ್ಯರ ಭೇಟಿ, ಸಾಂತ್ವನ: ರಾಜಕೀಯ ಮುಖಂಡರ ಸಾವಿನ ಸುದ್ದಿ ದೃಢವಾಗುತ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳ ದಂಡೇ ಮೃತರ ಮನೆಗೆ ಬಂದಿತ್ತು. ಕೆ.ಜಿ.ಹನುಮಂತರಾಯಪ್ಪ ಅವರ ಮನೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಮಂಜುನಾಥ್‌, ಮಾಜಿ ಶಾಸಕ ಮುನಿರಾಜು, ಬಿಬಿಎಂಪಿ ಸದಸ್ಯ ಕೆ.ನಾಗಭೂಷಣ್‌ ಭೇಟಿ ನೀಡಿ ಸಾಂತ್ವನ ಹೇಳಿದರು. ಹಾಗೆಯೇ ರಂಗಪ್ಪ ಮನೆಗೂ ಡಿ.ವಿ.ಸದಾನಂದಗೌಡ ಅವರು ಭೇಟಿ ನೀಡಿದರು.

ನೆಲಮಂಗಲದ ಲಕ್ಷ್ಮೀನಾರಾಯಣ ಮತ್ತು ಶಿವಕುಮಾರ್‌ ಮನೆಗೆ ಸಂಸದ ವೀರಪ್ಪಮೊಯ್ಲಿ, ಶಾಸಕ ಶ್ರೀನಿವಾಸಮೂರ್ತಿ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಎನ್‌.ಪಿ.ಹೇಮಂತ್‌ಕುಮಾರ್‌, ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್‌ನಿವಾಸ್‌ ಸಪೆಟ್‌ ಭೇಟಿ ನೀಡಿದರು.

ಆರು ಜನ ಸ್ನೇಹಿತರು ಒಟ್ಟಿಗೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದರು. ಅವರು ಮೃತಪಟ್ಟ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಪಾರ್ಥಿವ ಶರೀರ ಬರುವ ಬಗ್ಗೆಯೂ ಇನ್ನೂ ಮಾಹಿತಿ ಇಲ್ಲ.
-ಪುನೀತ್‌, ಮೃತ ರಮೇಶ್‌ ಸ್ನೇಹಿತ

ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಉದ್ಯಮಿ ರಮೇಶ್‌ಗೌಡ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಪಾರ್ಥಿವ ಶರೀರ ಬರುವ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ. ಅಧಿಕಾರಿಗಳ ಮುಖಾಂತರ ಮಾಹಿತಿ ಪಡೆಯಬೇಕಿದೆ. ಈ ಸಂಬಂಧ ಐಜಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
-ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next