ಸಿರುಗುಪ್ಪ: ಕೃಷಿಯಲ್ಲಿ ಮಣ್ಣಿನ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಹೆಚ್ಚಿನ ಇಳುವರಿ ಬರಲು ಅನುಕೂಲವಾಗುತ್ತದೆ. ಆದ್ದರಿಂದ ರೈತರು ಮಣ್ಣಿನ ಪರೀಕ್ಷೆ ಮಾಡಿಸಿ ಬೆಳೆಗೆ ಶಿಫಾರಸ್ಸು ಮಾಡಿದ ಗೊಬ್ಬರ ಮಾತ್ರ ಬಳಸಬೇಕೆಂದು ಕೋರಮಂಡಲ್ ಇಂಟರ್ ನ್ಯಾಷನಲ್ ಕಂಪನಿಯ ಹಿರಿಯ ಉಪಾಧ್ಯಕ್ಷ ಕೆ. ಪ್ರಭುಸ್ವಾಮಿ ತಿಳಿಸಿದರು.
ತಾಲೂಕಿನ ಕರೂರು ಗ್ರಾಮದಲ್ಲಿ ಕೋರಮಂಡಲ್ ಇಂಟರ್‌ನ್ಯಾಷನಲ್ ವತಿಯಿಂದ ಹಮ್ಮಿಕೊಂಡಿದ್ದ ಫ್ಯಾರಂಫಾಸ್ ಸಂಭ್ರಮ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಮಣ್ಣಿನ ಆರೋಗ್ಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಿಜ್ಞಾನಿ ಡಾ|ಎಂ.ಎ. ಬಸವಣ್ಣೆಪ್ಪ ಮಾತನಾಡಿ, ಕೃಷಿಗೆ ಮುಖ್ಯವಾಗಿ ಬೇಕಾಗಿರುವುದು ಮಣ್ಣಿನ ಆರೋಗ್ಯ, ಮಣ್ಣು ಆರೋಗ್ಯವಾಗಿರುವ ಬಗ್ಗೆ ಮಾಹಿತಿ ತಿಳಿಯಲು ಮಣ್ಣಿನ ಪರೀಕ್ಷೆಯನ್ನು ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಮಾಡಿಸಬೇಕು. ಇದರಿಂದ ಬೆಳೆದ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಯಾವ ಗೊಬ್ಬರವನ್ನು ಬಳಸಬೇಕೆನ್ನುವ ಖಚಿತ ಮಾಹಿತಿ ಸಿಗುತ್ತದೆ. ರೈತರು ಪ್ರತಿವರ್ಷ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ರೈತರು ಸಿರುಗುಪ್ಪದಲ್ಲಿರುವ ಕೃಷಿ ಸಂಶೋಧನಾ ಕೇಂದ್ರ ಮತ್ತು ಬಳ್ಳಾರಿಯಲ್ಲಿ ಮಣ್ಣಿನ ಪರೀಕ್ಷಾ ಕೇಂದ್ರಗಳಲ್ಲಿ ಮಣ್ಣನ್ನು ಪರೀಕ್ಷಿಸಿಕೊಳ್ಳಬಹುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್ ಮಾತನಾಡಿ, ರೈತರು ಬೆಳೆಯುವ ಬೆಳೆಗಳಲ್ಲಿ ಲಘುಪೋಷಕಾಂಶಗಳ ಕೊರತೆ ಹೆಚ್ಚಾಗಿದೆ. ಆದ್ದರಿಂದ ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಶಗಳನ್ನು ರೈತರು ಬಳಸಬೇಕು. ಇದರಿಂದ ಉತ್ತಮ ಇಳುವರಿ ಬರುತ್ತದೆ. ಮಣ್ಣಿನ ಆರೋಗ್ಯ ಸ್ಥಿರವಾಗಿರುತ್ತದೆ. ಹೆಚ್ಚಿನ ರಸಗೊಬ್ಬರ ಮತ್ತು ನೀರನ್ನು ಬಳಕೆ ಮಾಡುತ್ತಿರುವುದರಿಂದ ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ ಒಂದು ಎಕರೆ ಜಮೀನು ಬರಡಾಗುತ್ತಿದೆ. ಜಮೀನು ಬರಡಾದರೆ ಜಗತ್ತಿನಲ್ಲಿ ಆಹಾರದ ಕೊರತೆ ಉಂಟಾಗಲಿದೆ. ಆದ್ದರಿಂದ ಇರುವ ಭೂಮಿಯನ್ನು ಉತ್ತಮವಾಗಿಟ್ಟುಕೊಂಡು ಉಳಿಸಿಕೊಂಡು ಹೋಗಬೇಕಾಗಿರುವ ಜವಾಬ್ದಾರಿ ಪ್ರತಿಯೊಬ್ಬ ರೈತರ ಮೇಲಿದೆ ಎಂದು ಹೇಳಿದರು.
ರಸಗೊಬ್ಬರ ಮಾರಾಟಗಾರರ ಸಂಘದ ಜಿ. ಐನಾಥರೆಡ್ಡಿ, ಕೋರಮಂಡಲ್ ಇಂಟರ್‌ನ್ಯಾಷನಲ್, ಡಿ.ಜಿ.ಎಂ. ಕೆ.ಶ್ರೀನಿವಾಸ್, ಹಿರಿಯ ವಲಯ ವ್ಯವಸ್ಥಾಪಕರಾದ ಎಲ್.ವಿ. ರಮಣರೆಡ್ಡಿ, ಅಕರ್ ಸಾಹೇಬ್ ನದಾಫ್, ಸಹಾಯಕ ವ್ಯವಸ್ಥಾಪಕ ಎಸ್ .ಬಿ. ಪಾಟೀಲ್, ಉಪ ವ್ಯವಸ್ಥಾಪಕ ಪಿ.ಉಮೇಶ್, ಹಿರಿಯ ಬೇಸಾಯ ಶಾಸ್ತ್ರಜ್ಞ ರಮೇಶ್‌ಕುಮಾರ್, ಮುಖಂಡರಾದ ವೈ. ಪವನ್‌ರೆಡ್ಡಿ, ಕಟ್ಟೇಗೌಡ ಮತ್ತು ವಿವಿಧ ಗ್ರಾಮಗಳ ರೈತರು ಇದ್ದರು.