Advertisement
ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ಎನ್ಮಾಡಿಯಲ್ಲಿ 40 ಕುಂಬಾರ ಕುಟುಂಬಗಳಿವೆ. ಇಲ್ಲಿ ಕುಂಬಾರಿಕೆ ವೃತ್ತಿ ನಡೆಸಲು 1984-85ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ, ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ನೆರವಿನಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಆಗ ಇಲ್ಲಿ ನಿತ್ಯ 15-20 ಮಂದಿ ಮಣ್ಣಿನ ಮಡಿಕೆಗಳ ತಯಾರಿಕೆಯಲ್ಲಿ ತೊಡಗಿದ್ದರು. ಈಗ ಎರಡು-ಮೂರು ಹಿರಿಯ ಜೀವಗಳು ಮಾತ್ರ ಕುಂಬಾರಿಕೆ ವೃತ್ತಿ ನಡೆಸುತ್ತಿವೆ. ಅವರು ವೈವಿಧ್ಯಮಯ ಮಡಿಕೆಗಳು ಹಾಗೂ ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ.
ಎನ್ಮಾಡಿಯಲ್ಲಿ 27 ವರ್ಷಗಳಿಂದ ಮಡಿಕೆ ತಯಾರಿಸುತ್ತಿರುವ ಸುಬ್ರಾಯ ಕುಂಬಾರ ಹಾಗೂ 20 ವರ್ಷಗಳಿಂದ ಈ ಉದ್ಯೋಗ ಮಾಡುತ್ತಿರುವ ಡೊಂಬಯ್ಯ ಕುಂಬಾರರು ತಮ್ಮ ಅನುಭವ ಬಿಚ್ಚಿಟ್ಟಿದ್ದು ಹೀಗೆ: ಮಡಿಕೆ ತಯಾರಿಸಲು ಬೇಕಾದ ಜೇಡಿ ಮಣ್ಣು ಈ ಹಿಂದೆ ಉಪ್ಪಿನಂಗಡಿ ಸಹಿತ ಕೆಲವು ಕಡೆ ಹೇರಳವಾಗಿ ಸಿಗುತ್ತಿತ್ತು. ಈಗ ಬಂಗಾಡಿ ಹಾಗೂ ಸೇಡಿಯಾಪು ಗ್ರಾಮದ ಅಲ್ಮಾಜೆಯಲ್ಲಿ ಮಾತ್ರ ಸಿಗುತ್ತಿದೆ. ಮಡಿಕೆ ತಯಾರಿ ನಾಜೂಕಿನ ಕೆಲಸ. ಶ್ರದ್ಧೆ, ತಾಳ್ಮೆ ಹಾಗೂ ಏಕಾಗ್ರತೆ ಬೇಕು. ಒಂದೇ ದಿನದಲ್ಲಿ ಮಡಿಕೆ ತಯಾರಿಸಲು ಸಾಧ್ಯವಿಲ್ಲ. ತಂದ ಮಣ್ಣನ್ನು ಮೊದಲಿಗೆ ಒಣಗಿಸಿ ಹುಡಿ ಮಾಡಬೇಕು. ಸಣ್ಣ ಕಣ್ಣುಗಳಿರುವ ನೆಟ್‌ನಲ್ಲಿ ಚೆನ್ನಾಗಿ ಗಾಳಿಸಿ, ನೀರು ಹಾಕಿ ಕಲಸಿ, ಅಂಟು ಬರಿಸಬೇಕು. ಈ ಮಣ್ಣನ್ನು ತಿಗರಿಯ ಮೂಲಕ ತಿರುಗಿಸಿ, ಬೇಕಾದ ಪಾತ್ರೆಗಳ ರೂಪ ಕೊಡಬೇಕು. ಮತ್ತೆ ಅವುಗಳನ್ನು ಹದವಾಗಿ ಒಣಗಲು ಇಡಬೇಕು. ಒಣಗಿದ ಪಾತ್ರೆಯನ್ನು ತೆಗೆದು ಸಣ್ಣ ಕೋಲು ಹಾಗೂ ಕಲ್ಲಿನ ಮೂಲಕ ಪಾತ್ರೆಗೆ ಅಡಿಭಾಗ ಮೆತ್ತಬೇಕು. ಪಾತ್ರೆ ಅಂಕು-ಡೊಂಕಾಗಿದ್ದಲ್ಲಿ ಸರಿಪಡಿಸಬೇಕು. ಈ ಕೆಲಸ ಕೈಯಿಂದಲೇ, ನಾಜೂಕಾಗಿ ನಡೆಯಬೇಕು. ಮತ್ತೆ ಒಣಗಿಸಿ, ಪಾತ್ರೆಗಳನ್ನು ಬೆಂಕಿಯಲ್ಲಿ ಆವೆ ಹಾಕಬೇಕು. ಒಮ್ಮೆ ಆವೆ ಹಾಕಲು 35 ಕಟ್ಟು ಕಟ್ಟಿಗೆ ಬೇಕಾಗುತ್ತದೆ. ಇಷ್ಟರಲ್ಲಿ ಗಾತ್ರ ಹಾಗೂ ವಿನ್ಯಾಸ ಅನುಸರಿಸಿ 200ರಿಂದ 300 ಮಡಿಕೆಗಳನ್ನು ಬೇಯಿಸಲು ಸಾಧ್ಯವಾಗುತ್ತದೆ. ಹಿಂದೆ ಕುಂಬಾರರೇ ಮಡಿಕೆಗಳನ್ನು ಹೊತ್ತು ಹಳ್ಳಿಗಳಲ್ಲಿ ತಿರುಗಿ ಮಾರಾಟ ಮಾಡುತ್ತಿದ್ದರು. ಹೊತ್ತೂಯ್ಯುವುದು ಕಷ್ಟವಾದ್ದರಿಂದ ಈಗ ಸಹಕಾರ ಸಂಘಗಳಿಗೆ ನೀಡುವುದೇ ಹೆಚ್ಚು. ಆದರೆ, ಇದರಿಂದ ಆದಾಯ ಕಮ್ಮಿ ಎಂದರು.
Related Articles
ಈಗ ಮಣ್ಣು ಹಾಗೂ ಕಟ್ಟಿಗೆ ಕೊರತೆ ಈ ಉದ್ಯೋಗಕ್ಕೆ ಹೊಡೆತ ನೀಡಿದೆ. 1984-85ರ ಕಾಲಘಟ್ಟದಲ್ಲಿ ನಿರ್ಮಾಣವಾದ ಇಲ್ಲಿನ ಕೇಂದ್ರ ಇದೀಗ ಶಿಥಿಲಗೊಂಡು, ಬೀಳುವ ಸ್ಥಿತಿಯಲ್ಲಿದೆ. ಮಡಿಕೆಗಳನ್ನು ಆವೆಗೆ ಇಡುವ ಕಟ್ಟಡವೂ ಹಾಳಾಗಿದೆ. ಕುಂಬಾರಿಕೆಯನ್ನು ಸರಕಾರ ಪ್ರೋತ್ಸಾಹಿಸಬೇಕು. ಈ ಕೇಂದ್ರವನ್ನು ದುರಸ್ತಿ ಮಾಡಬೇಕು ಎಂದವರು ಆಗ್ರಹಿಸಿದರು.
Advertisement
ಎಂ.ಎಸ್. ಭಟ್