Advertisement

Soil; ಜೀವಸಂಕುಲದ ಮೂಲಾಧಾರ ಮಣ್ಣು;ಮಣ್ಣಿನ ಋಣ ತೀರಿಸಲು ಪ್ರಯತ್ನಿಸೋಣ

11:46 PM Dec 04, 2023 | Team Udayavani |

ಮಾನವ ಮಾತ್ರವಲ್ಲ ಭೂಮಿಯ ಮೇಲಿರುವ ಸಕಲ ಜೀವರಾಶಿಗಳಿಗೂ ಮಣ್ಣು ಜೀವನಾಧಾರವಾಗಿದೆ. ಜೀವಸಂಕುಲದ ಭವಿಷ್ಯವೂ ಆರೋಗ್ಯಯುತ ಮಣ್ಣಿನ ಮೇಲೆ ನಿಂತಿರುವಂಥದ್ದು. ಮಣ್ಣಿಲ್ಲದೇ ಆಹಾರ ಭದ್ರತೆಯೂ ಇಲ್ಲ. ಮಣ್ಣು ಅದೆಷ್ಟೋ ಜೀವಿಗಳಿಗೆ ನೆಲೆಯಾಗಿದೆ. ಹೀಗೆ ಸಕಲ ಜೀವರಾಶಿಗಳಿಗೆ ಅಮೃತದಂತಿರುವ ಮಣ್ಣಿನ ಪ್ರಾಮುಖ್ಯವನ್ನು ತಿಳಿಸುವಲ್ಲಿ ಹಾಗೂ ಆರೋಗ್ಯಯುತವಾದ ಮಣ್ಣನ್ನು ರಕ್ಷಿಸುವಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಡಿ. 5ರಂದು ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತಿದೆ.

Advertisement

ಈ ವರ್ಷದ ಧ್ಯೇಯ
ಈ ಬಾರಿ “ಮಣ್ಣು ಮತ್ತು ನೀರು: ಜೀವನದ ಮೂಲಗಳು’ ಎಂಬ ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಮಣ್ಣು ಮತ್ತು ನೀರಿನ ಉಪಯೋಗಗಳೇನು ಹಾಗೂ ಅವುಗಳನ್ನು ಉಳಿಸಲು ಏನೆಲ್ಲ ಮಾಡಬಹುದು ಎಂಬ ಬಗೆಗೆ ಜನರಲ್ಲಿ ಅರಿವು ಮೂಡಿಸಿ, ಚಿಂತನ-ಮಂಥನ ನಡೆಸುವುದೇ ಇದರ ಉದ್ದೇಶವಾಗಿದೆ.

ಹಿನ್ನೆಲೆ
2002ರಲ್ಲಿ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟವು ವಿಶ್ವ ಮಣ್ಣು ದಿನಾಚರಣೆಯ ಪ್ರಸ್ತಾವವನ್ನು ಮುಂದಿಟ್ಟಿತು. ಬಳಿಕ ಅಮೆರಿಕ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಯು ಈ ದಿನವನ್ನು ಆಚರಿಸಲು ಆಸಕ್ತಿ ತೋರಿಸಿತು. ಕೊನೆಗೆ 2014ರಲ್ಲಿ ವಿಶ್ವಸಂಸ್ಥೆಯು ಡಿ.5 ಅನ್ನು ” ವಿಶ್ವ ಮಣ್ಣಿನ ದಿನ’ವಾಗಿ ಅಧಿಕೃತವಾಗಿ ಘೋಷಿಸಿತು.

ಮಣ್ಣು ಮತ್ತು ನೀರು
ಆಹಾರ ಉತ್ಪಾದನೆ, ಪರಿಸರ, ಮಾನವ ಸಹಿತ ಸಕಲ ಜೀವರಾಶಿಗಳ ಜೀವನಕ್ಕೆ ಮಣ್ಣು ಮತ್ತು ನೀರು ಅತ್ಯಮೂಲ್ಯ ಹಾಗೂ ಮೂಲಭೂತ ಸಂಪನ್ಮೂಲಗಳಾಗಿವೆ. ಹಾಗಾಗಿ ನಮಗಾಗಿ ಮತ್ತು ನಮ್ಮ ಭವಿಷ್ಯ ಕ್ಕಾಗಿ ಮಣ್ಣು ಮತ್ತು ನೀರು ಇವೆರಡನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
 ಮಣ್ಣು ಮತ್ತು ನೀರಿನಿಂದ
ಗಿಡಗಳು ತಮ್ಮ ಪೋಷಕಾಂಶ
ವನ್ನು ಪಡೆದುಕೊಳ್ಳುತ್ತವೆ.
 ಮಣ್ಣಿನ ಸವೆತವು, ನೀರನ್ನು ಸಂಗ್ರಹಿ ಸುವ, ಶುದ್ಧೀಕರಿಸುವ ಮಣ್ಣಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಜತೆಗೆ ಪ್ರವಾಹ, ಸುನಾಮಿಯಂಥ ವಿಕೋಪಗಳಿಗೂ ಕಾರಣವಾಗುತ್ತದೆ. ಹಾಗಾಗಿ ಮಣ್ಣಿನ ಸವಕಳಿಯಾಗದಂತೆ ರಕ್ಷಿಸಬೇಕಾಗಿದೆ.
 ಆರೋಗ್ಯಯುತವಾದ ಮಣ್ಣು
ಹಾಗೂ ಉತ್ತಮ ಗುಣಮಟ್ಟದ ನೀರು, ಇವೆರಡೂ ಒಂದಕ್ಕೊಂದು ಪೂರಕವಾದವು. ನೀರಿನ ಕೊರತೆಯೂ ಮಣ್ಣಿನ ವೈವಿಧ್ಯತೆಯ ಕೊರತೆಗೂ ಕಾರಣವಾಗುತ್ತದೆ. ಕೃಷಿಯಲ್ಲಿ ವ್ಯವಸ್ಥಿತವಾದ ಮಣ್ಣಿನ ನಿರ್ವಹಣೆ, ನೀರಿನ ಲಭ್ಯತೆಯನ್ನು ನಿಯಂತ್ರಿಸುತ್ತದೆ ಮತ್ತು ಹೆಚ್ಚಿನ ಉತ್ಪಾದನೆಗೂ ಸಹಕಾರಿ.
 ಮಣ್ಣು ಮತ್ತು ನೀರಿನ ಸುಧಾರಿತ ನಿರ್ವಹಣೆಯು ತೀವ್ರವಾದ ಹವಾಮಾನ ವಿಕೋಪಗಳನ್ನು ತಡೆದುಕೊಳ್ಳುವ ಭೂಮಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಜತನವಾಗಿರಿಸೋಣ
ಕೃಷಿಗೆ ಮೂಲಾಧಾರವಾಗಿರುವ ಮಣ್ಣು ಭೂಮಿಯ ಹವಾಮಾನವನ್ನು ನಿಯಂತ್ರಿಸುವಲ್ಲಿಯೂ ತನ್ನ ಪಾತ್ರವನ್ನು ವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ಅರಣ್ಯ ನಾಶ, ನಗರೀಕರಣ, ಕೈಗಾರಿಕೀಕರಣ, ಅವೈಜ್ಞಾನಿಕ ಕೃಷಿ ವಿಧಾನಗಳ ಬಳಕೆ, ಮಿತಿಮೀರಿದ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆ, ಹವಾಮಾನ ಬದಲಾವಣೆಗಳು ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಹಾಗಾಗಿ ಮಣ್ಣಿನ ಪ್ರಾಮುಖ್ಯವನ್ನು ಅರ್ಥೈಸಿಕೊಂಡು, ಅದರ ರಕ್ಷಣೆಗಾಗಿ ಉತ್ತಮ ವಿಧಾನಗಳನ್ನು ಅಳವಡಿಸಿಕೊಂಡು, ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಮಣ್ಣಿನ ಋಣವನ್ನು ತೀರಿಸಲಾಗದು ಎಂಬ ಮಾತಿದೆ. ಆದರೆ ಋಣ ತೀರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾದರೆ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಮಣ್ಣನ್ನು ಜತನವಾಗಿರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next